Advertisement

ಸೋಲಾರ್‌ ಬಳಕೆ ರಾಜ್ಯಕ್ಕೆ ಮಾದರಿ ಅಮಾಸೆಬೈಲು ಗ್ರಾಮ: ಪ್ರಮೋದ್‌

02:29 PM Apr 28, 2017 | |

ಸಿದ್ದಾಪುರ: ಸೌರಶಕ್ತಿಯ ಮೂಲಕ ಗ್ರಾಮವನ್ನು ಬೆಳಗಿಸಿದ ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ದೇಶಕ್ಕೆ ಮಾದರಿಯಾಗಿದೆ ಎಂದು ಮೀನುಗಾರಿಕಾ ಹಾಗೂ ಯುವಜನ ಸೇವೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಅಮಾಸೆಬೈಲು ಗ್ರಾ.ಪಂ., ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌, ಕರ್ಣಾಟಕ ಬ್ಯಾಂಕ್‌ ಲಿ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿ., ಉಡುಪಿ ಜಿಲ್ಲಾಡಳಿತ, ಉಡುಪಿ ಜಿ.ಪಂ., ಕುಂದಾಪುರ ತಾ.ಪಂ. ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಗ್ರಾ.ಪಂ.ನಲ್ಲಿ ಅನುಷ್ಠಾನಗೊಂಡಿರುವ ಸೋಲಾರ್‌ ಗ್ರಾಮ ಘೋಷಣೆ ಕಾರ್ಯಕ್ರಮವನ್ನು ಗುರುವಾರ ಅಮಾಸೆಬೈಲು ಸರಕಾರಿ ಪ್ರೌಢಶಾಲಾ ವಠಾರ ದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸೌರ ವಿದ್ಯುತ್‌ ಉತ್ಪಾದನೆ, ಗೃಹ ಸೌರಶಕ್ತಿ ಸದ್ಬಳಕೆ ಮೂಲಕ ಸ್ವಾವಲಂಬಿಯಾಗುವತ್ತ ರಾಜ್ಯ ದಾಪುಗಾಲಿಡುತ್ತಿದೆ. ರಾಜ್ಯವು ಸುಮಾರು 750 ಮೆಗಾವ್ಯಾಟ್‌ ಸೌರವಿದ್ಯುತ್‌ ಉತ್ಪಾದನೆ ಮೂಲಕ ಬೃಹತ್‌ ಸಾಧನೆ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ 2,000 ಮೆಗಾವ್ಯಾಟ್‌ ಸೌರವಿದ್ಯುತ್‌ ಉತ್ಪಾದನೆಯ ಗುರಿ ಹೊಂದಿದೆ ಎಂದರು.

ಹಿರಿಯರ ಸ್ಫೂರ್ತಿ
ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಮನೆಗಳಿಗೆ ಸೋಲಾರ್‌ ದೀಪ ಗಳನ್ನು ಉದ್ಘಾಟಿಸಿ ಮಾತನಾಡಿ, ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಮೂಲಕ ಪ್ರತಿ ಮನೆಗೆ ಸೋಲಾರ್‌ ದೀಪವನ್ನು ನೀಡುವ ಕಾರ್ಯದಿಂದ ಎ.ಜಿ. ಕೊಡ್ಗಿ ಅವರು ರಾಜ್ಯದಲ್ಲಿ ವಿನೂತನ ಸಾಧನೆ ಮಾಡಿದ್ದಾರೆ. ಹಿರಿಯರಾದ ಎ.ಜಿ. ಕೊಡ್ಗಿ ಮತ್ತು ಕೆ.ಎಂ. ಉಡುಪ ಅವರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಸೆಲ್ಕೊ ಇಂಡಿಯಾ ಅಧ್ಯಕ್ಷ ಡಾ| ಎಚ್‌. ಹರೀಶ್‌ ಹಂದೆ ಅವರು ದಿಕ್ಸೂಚಿ ಭಾಷಣ ಮಾಡಿ, ಯುವ ಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಸಮಸ್ಯೆ ಚಿತ್ರಣದ ಅರಿವು ಪಡೆದು ಪರಿಹರಿಸಲು ಹಳ್ಳಿಗಳಿಗೆ ತೆರಳಿ ಸೇವೆ ಮಾಡಬೇಕು. ಶೇ. 100 ಸೋಲಾರ್‌ ಶಕ್ತಿ ಬಳಸುತ್ತಿರುವ ಅಮಾಸೆಬೈಲು ಗ್ರಾ.ಪಂ. ದೇಶಕ್ಕೆ ಮಾದರಿಯಾಗಿದೆ ಎಂದರು.

ಕರ್ನಾಟಕ ಮಾದರಿ
ವಿದ್ಯುತ್‌ ಸಮಸ್ಯೆ ಅಧಿಕವಾಗಿರುವ ಒಡಿಶಾ, ರಾಜಸ್ಥಾನ, ಛತ್ತೀಸ್‌ಗಢ ಇತ್ಯಾದಿ ರಾಜ್ಯಗಳಿಗೆ ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಕರ್ನಾಟಕವೆ ಮಾದರಿ. ರಾಜ್ಯದಲ್ಲಿ ಸೋಲಾರ್‌ ಶಕ್ತಿ ಕುರಿತು ಮಾರುಕಟ್ಟೆ ವಿಸ್ತರಿಸಿದಂತೆ ದೇಶದ ಇತರ ರಾಜ್ಯಗಳಿಗೂ ವಿಸ್ತರಿಸಬೇಕು ಎಂದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಬಡತನ ಮತ್ತು ವಿದ್ಯೆ ಕಲಿಕೆಗೆ ಹಿನ್ನಡೆಗೆ ಬೆಳಕು ಕಾರಣವಾಗಿದೆ. ದೇಶದಲ್ಲಿ ಶೇ. 40ರಷ್ಟು ವಿದ್ಯುತ್‌ ಇಲ್ಲ. ಇಂದಿಗೂ ಕಟ್ಟಿಗೆ ಉರುವಲುಗಳನ್ನು ಬಳಸಿಕೊಂಡು ಅಡುಗೆ ಮಾಡುತ್ತಿದ್ದಾರೆ. ಸೌರ ವಿದ್ಯುತ್‌ ಹಾಗೂ ನೈಸರ್ಗಿಕ ಉತ್ಪಾದನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಣಬೇಕಾಗಿದೆ. ಇಂತಹ ಯೋಜನೆ ಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ನೀಡುತ್ತದೆ ಎಂದು ಹೇಳಿದರು.

ದೇವಸ್ಥಾನಗಳಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೊಡಮಾಡಿದ ಸೋಲಾರ್‌ ದೀಪವನ್ನು ಕರ್ಣಾಟಕ ಬ್ಯಾಂಕ್‌ ಜನರಲ್‌ ಮ್ಯಾನೇಜರ್‌ ಚಂದ್ರಶೇಖರ ರಾವ್‌ ಉದ್ಘಾಟಿಸಿದರು. ಅಮಾಸೆಬೈಲು ಗ್ರಾಮದ ಸೋಲಾರ್‌ ಬೀದಿ ದೀಪವನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಕುಂದಾಪುರ ಎಸಿ ಶಿಲ್ಪಾ ನಾಗ್‌ ಅವರು ಸೋಲಾರ್‌ ಯೋಜನೆ ಅನುಷ್ಠಾನಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತಕೃಷ್ಣ ಭಟ್‌, ತಾ.ಪಂ. ಸದಸ್ಯೆ ಜ್ಯೋತಿ ಪೂಜಾರಿ, ಗ್ರಾ.ಪಂ. ಜಯಲಕ್ಷ್ಮೀ ಶೆಟ್ಟಿ, ಅಮಾಸೆಬೈಲು ವ್ಯ.ಸೇ.ಸ. ಸಂಘದ ಅಧ್ಯಕ್ಷ ಆರ್‌. ನವೀನಚಂದ್ರ ಶೆಟ್ಟಿ, ಉಳ್ಳೂರು-ಮಚ್ಚಟ್ಟು ವ್ಯ.ಸೇ.ಸ. ಸಂಘದ ಟಿ. ಚಂದ್ರಶೇಖರ ಶೆಟ್ಟಿ, ಅಮಾಸೆಬೈಲು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ತಿಮ್ಮಪ್ಪ, ಸೆಲ್ಕೋ ಸಂಸ್ಥೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ: ಅಮಾಸೆಬೈಲು ಗ್ರಾಮ ಅಭಿವೃದ್ಧಿಗೆ ಕಾರಣರಾದ ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆನಂತಕೃಷ್ಣ ಅವರನ್ನು ಸಮ್ಮಾನಿಸಲಾ ಯಿತು. ಅಮಾಸೆಬೈಲು ಗ್ರಾ.ಪಂ.ಅನ್ನು ಸೋಲಾರ್‌ ಗ್ರಾಮ ಎಂದು ಘೋಷಿಸಲು ಆಗಮಿಸುತ್ತಿರುವ ಗಣ್ಯರನ್ನು ಅಮಾಸೆಬೈಲು ಪೇಟೆಯಿಂದ ಸರಕಾರಿ ಪ್ರೌಢಶಾಲೆಯ ತನಕ ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು. ಟ್ರಸ್ಟ್‌ ಅಧ್ಯಕ್ಷ ಎ.ಜಿ. ಕೊಡ್ಗಿ ಸ್ವಾಗತಿಸಿ, ಪಿಡಿಒ ಭಾಸ್ಕರ್‌ ಶೆಟ್ಟಿ ವಂದಿಸಿದರು. ಸತ್ಯನಾರಾಯಣ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ 1,497 ಮನೆಗಳಿಗೆ ಸೋಲಾರ್‌ ಅಳವಡಿಸ ಲಾಗಿದೆ. ಅದರಲ್ಲಿ 1,000 ಮನೆಗಳಿಗೆ ನಾಲ್ಕು ದೀಪಗಳು, 497 ಮನೆಗಳಿಗೆ 2 ದೀಪಗಳನ್ನು ಅಳವಡಿಸಿವೆ. 350 ಮನೆಯವರು ಮೊದಲೇ ಸೋಲಾರ್‌ ದೀಪ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಆರಂಭಿಸಿದ ಸೋಲಾರ್‌ ಯೋಜನೆ ಪೂರ್ಣಗೊಂಡು ಸೋಲಾರ್‌ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೇ 31ಕ್ಕೆ ಜರ್ಮನ್‌ ಸಂಸ್ಥೆಯೊಂದು ಇಂಟರ್‌ ಸೋಲಾರ್‌ ಆವಾರ್ಡ್‌ ನೀಡಲಿದೆ.
ಎ.ಜಿ. ಕೊಡ್ಗಿ, ಅಧ್ಯಕ್ಷರು ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next