Advertisement

ಸೌರಶಕ್ತಿ ಸಮಸ್ಯೆ ಪರಿಹಾರದ ಸಾಧನವಾಗಲಿ

03:15 PM May 31, 2017 | Team Udayavani |

ಹುಬ್ಬಳ್ಳಿ: ಸೌರಶಕ್ತಿ ಕೇವಲ ಸೋಲಾರ್‌ ಪ್ಯಾನಲ್‌ಗ‌ಳಿಗೆ ಸೀಮಿತಗೊಳ್ಳದೆ ಜನರ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ವರ್ಗಗೊಂಡರೆ ಅದಕ್ಕೆ ಹೆಚ್ಚಿನ ಮೌಲ್ಯ ಬರಲಿದೆ. ಈ ನಿಟ್ಟಿನಲ್ಲಿ ಸೆಲ್ಕೋ ಕಂಪೆನಿ ಮಹತ್ವದ ಹೆಜ್ಜೆ ಇರಿಸಿರುವುದು ಸಂತಸದ ವಿಚಾರ ಎಂದು ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಜೈರಾಮ ರಮೇಶ ಅಭಿಪ್ರಾಯಪಟ್ಟರು. 

Advertisement

ಸೆಲ್ಕೋ ಫೌಂಡೇಶನ್‌ನ ಸೂರ್ಯಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, 1980ರ ಸುಮಾರಿಗೆ ಸೌರಶಕ್ತಿ ವಿಚಾರದಲ್ಲಿ ಭಾರತ ಅತ್ಯಂತ ಹಿಂದುಳಿದಿತ್ತು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಈ ಬಗ್ಗೆ ಗಮನ ನೀಡಲಾಗಿತ್ತು. ಇದೀಗ ವಾತಾವರಣದ ಬದಲಾವಣೆ ಹಾಗೂ ಜಾಗತಿಕ ತಾಪಮಾನದಿಂದ ಸೌರಶಕ್ತಿ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು. 

ಈ ಹಿಂದೆ ಬಯೋಗ್ಯಾಸ್‌ ಹಾಗೂ ಪವನ ಶಕ್ತಿಗಳು ಸದ್ದು ಮಾಡಿದವಾದರೂ ಅವುಗಳಿಂದ ನಿರೀಕ್ಷಿತ ಕ್ರಾಂತಿ ಸಾಧ್ಯವಾಗಲಿಲ್ಲ. ಪವನಶಕ್ತಿ ಎಂಬುದು ತೆರಿಗೆ ತಪ್ಪಿಸಿಕೊಳ್ಳುವ ಸಿರಿವಂತರ ಹೂಡಿಕೆ ಕ್ಷೇತ್ರ ಎನ್ನುವಂತಾಗಿದೆ. ಜರ್ಮನ್‌ ಜನಸಂಖ್ಯೆ ಕೇವಲ 80 ಮಿಲಿಯನ್‌ ಆಗಿದ್ದರೂ ಶೇ.30ರಷ್ಟು ನಿತ್ಯದ ಇಂಧನ ಬಳಕೆ ಸೌರಶಕ್ತಿ ಮೂಲದಿಂದಲೇ ಬರುತ್ತಿದೆ. 

ಭಾರತ ವಿಶ್ವದಲ್ಲಿ ನಾಯಕತ್ವ ಸ್ಥಾನ ಪಡೆಯಬೇಕಾದರೆ ಸೌರಶಕ್ತಿ ಪರಿಣಾಮಕಾರಿ ಬಳಕೆ ಹಾಗೂ ಇದರ ಪ್ರಯೋಜನ-ಪರಿಹಾರಗಳನ್ನು ಸಮರ್ಪಕವಾಗಿ ಜನರಿಗೆ ಹಸ್ತಾಂತರ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು. ಸೂರ್ಯಮಿತ್ರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರುಣಾ ಟ್ರಸ್ಟ್‌ ಸಂಸ್ಥಾಪಕ ಪದ್ಮಶ್ರೀ ಪುರಸ್ಕೃತ ಡಾ| ಎಚ್‌.ಸುದರ್ಶನ ಮಾತನಾಡಿ, ಈಶಾನ್ಯ ರಾಜ್ಯಗಳಲ್ಲಿ ವಿದ್ಯುತ್‌ ಸೌಲಭ್ಯ ಇಲ್ಲದ ಕಡೆಗಳಲ್ಲಿ ನಾವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಪಡೆದಿದ್ದೆವು.

ಜನರ ಚಿಕಿತ್ಸೆಗೆ ಸೆಲ್ಕೋದ ಸೌರಶಕ್ತಿ ಅನೇಕ ಉಪಕರಣಗಳು ನೆರವಾಗುತ್ತಿವೆ. ಈ ಪ್ರಶಸ್ತಿ ಬಂದಿರುವುದು ಹಾಗೂ ನಾನು ಮೆಚ್ಚುವ ಜೈರಾಮ ರಮೇಶ ಅವರಿಂದ ಇದನ್ನು ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು. ಸೆಲ್ಕೋ ಚೇರನ್‌ ಮ್ಯಾಗ್ಸೆಸೆ ಪುರಸ್ಕೃತ ಡಾ| ಎಚ್‌. ಹರೀಶ ಹಂದೆ ಅಧ್ಯಕ್ಷತೆ ವಹಿಸಿದ್ದರು.

Advertisement

ಮಹಾರಾಷ್ಟ್ರದ ನೀಲಮ್‌ ಮಿಶ್ರಾ, ಅರ್ಜುನ ಮೆಂಡಾ, ಥಾಮಸ್‌ ಮಾತನಾಡಿದರು. ಸೆಲ್ಕೋದ ಸಿಇಒ ಮೋಹನ ಹೆಗಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಾಧನೆ ತೋರಿದ ಸೆಲ್ಕೋ ಕಂಪೆನಿಯ ಕುಂದಾಪುರ ಶಾಖೆಗೆ ಚಾಂಪಿಯನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next