Advertisement

Ajekar: ಎಣ್ಣೆಹೊಳೆ ಏತ ನೀರಾವರಿ ಪವರ್‌ ಕಟ್‌!

03:05 PM Nov 19, 2024 | Team Udayavani |

ಅಜೆಕಾರು: ಕರಾವಳಿ ಭಾಗದ ಪ್ರಮುಖ ಏತ ನೀರಾವರಿ ಯೋಜನೆಗಳಲ್ಲಿ ಒಂದಾದ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಬಹು ನಿರೀಕ್ಷೆಯಿಂದ ಪ್ರಾರಂಭಗೊಂಡಿದ್ದರೂ ನಿರಂತರ ಸಮಸ್ಯೆಯಿಂದ ಜನರ ಉಪಯೋಗಕ್ಕೆ ಬಾರದಂತಾಗಿದೆ. ಕಳೆದ ಹತ್ತು ದಿನಗಳಿಂದ ವಿದ್ಯುತ್‌ ಕಡಿತದಿಂದಾಗಿ ನೀರೇ ಬಾರದೆ ಸಮಸ್ಯೆಯಾಗಿದೆ.

Advertisement

ಏತ ನೀರಾವರಿ ಯೋಜನೆ ಪ್ರಾರಂಭಗೊಂಡ ಬಳಿಕ ನಿರಂತರವಾಗಿ ವಿದ್ಯುತ್‌ ಬಿಲ್‌ ಬಾಕಿ ಇರಿಸಿಕೊಂಡಿದ್ದರಿಂದ ಈಗ ವಿದ್ಯುತ್‌ ಕಡಿತ ಮಾಡಲಾಗಿದೆ. ಎರಡು ತಿಂಗಳ ಹಿಂದೆ ವಿದ್ಯುತ್‌ ಬಿಲ್‌ ಬಾಕಿ ಒಂದು ಕೋಟಿ ರೂ.ಯನ್ನೂ ಮೀರಿತ್ತು. ಆಗ ಎಚ್ಚೆತ್ತುಕೊಂಡ ನೀರಾವರಿ ಇಲಾಖೆ 70 ಲಕ್ಷ ರೂ. ಬಿಲ್‌ ಪಾವತಿ ಮಾಡಿತ್ತು. ನಂತರದ ವಿದ್ಯುತ್‌ ಬಿಲ್‌ ಸೇರಿ ಪ್ರಸ್ತುತ 45ಲಕ್ಷ ರೂ.ಗೂ ಅಧಿಕ ವಿದ್ಯುತ್‌ ಬಿಲ್‌ ಬಾಕಿ ಇದೆ. ಹೀಗಾಗಿ ಮೆಸ್ಕಾಂ ಇಲಾಖೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದೆ.

ರೈತರಿಗೆ ಸಂಕಷ್ಟ
ಕಳೆದ ಎರಡು ವರ್ಷಗಳಿಂದ ನೀರಾವರಿ ಯೋಜನೆ ಯ ಭರವಸೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ರೈತ ಈಗ ಸಂಕಷ್ಟ ಪಡುವಂತಾಗಿದೆ. ನವೆಂಬರ್‌ತಿಂಗಳಲ್ಲಿ ನದಿಯಿಂದ ನೀರಾವರಿ ಯೋಜನೆಯ ಪಂಪ್‌ ಮೂಲಕ ರೈತರ ಜಮೀನಿಗೆ ನೀರು ಸರಬರಾಜಗುತ್ತಿತ್ತು. ಆದರೆ ಕಳೆದ 10 ದಿನಗಳ ಹಿಂದೆ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಾರಣ ನೀರು ಸರಬರಾಜು ಕಡಿತಗೊಂಡಿದೆ. ಮಳೆಯೂ ಕಡಿಮೆ ಆಗಿದೆ. ರೈತನ ಭತ್ತದ ಬೆಳೆಗೆ ನೀರು ಇಲ್ಲದಂತಾಗಿದೆ.

ಗೇಟು ತೆರೆಯಲು ವಿದ್ಯುತ್‌ ಅಗತ್ಯ; ಜೋರು ಮಳೆ ಬಂದರೆ ಮುಳುಗಡೆ!
ಅಣೆಕಟ್ಟಿಗೆ ಸ್ವಯಂ ಚಾಲಿತ ಗೇಟಿನ ವ್ಯವಸ್ಥೆ ಇರುವುದರಿಂದ ನಿರಂತರ ವಿದ್ಯುತ್‌ ಇರಬೇಕಾಗುತ್ತದೆ. ಆದರೆ. ಕಳೆದ 10 ದಿನಗಳಿಂದ ವಿದ್ಯುತ್‌ ಸಂಪರ್ಕ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ. ಪಶ್ಚಿಮ ಘಟ್ಟದ ಭಾಗಗಳಲ್ಲಿ ಕೆಲವೊಮ್ಮೆ ಭಾರೀ ಮಳೆ ಸುರಿಯುವ ಸಂದರ್ಭ ಎಣ್ಣೆಹೊಳೆ ಉಕ್ಕಿ ಹರಿಯುತ್ತದೆ. ಆ ಸಂದರ್ಭ ನೀರಾವರಿ ಯೋಜನೆಯ ಗೇಟ್‌ ತೆರವುಗೊಳಿಸ ಬೇಕಾಗುತ್ತದೆ. ಇಲ್ಲವಾದರೆ ಸುತ್ತಲ ಪ್ರದೇಶ ಮುಳುಗಿ ಸ್ಥಳೀಯರಿಗೆ ಭಾರಿ ಸಂಕಷ್ಟ ಎದುರಾಗುತ್ತದೆ. ಆದರೆ ವಿದ್ಯುತ್‌ ಸಂಪರ್ಕ ಇಲ್ಲದೆ ಗೇಟ್‌ ತೆರವು ಅಸಾಧ್ಯ. ಭಾರಿ ಮಳೆ ಬಂದರೆ ಸ್ಥಳೀಯರ ಮನೆ ಖಾಲಿ ಮಾಡಬೇಕಾದ ಸ್ಥಿತಿ ಈಗ ಎಣ್ಣೆಹೊಳೆಯವರದ್ದು.

ಪ್ರಸ್ತುತ ತುರ್ತು ಸಂದರ್ಭ ಬಳಕೆಗೆ ಇರುವ ಜನರೇಟರ್‌ಬಳಕೆಯಾಗುತ್ತಿದ್ದು ವಿದ್ಯುತ್‌ ಬಿಲ್‌ ಪಾವತಿಯಾಗದಿದ್ದರೆ ಡೀಸೆಲ್‌ ಬಳಕೆಯ ಜನರೇಟರೇ ಎಣ್ಣೆಹೋಳೆ ಏತ ನೀರಾವರಿಗೆ ಖಾಯಂ ಆಗುವ ಸಾಧ್ಯತೆ ಇದೆ. ಆದರೆ ರೈತರಿಗೆ ಮಾತ್ರ ನೀರಿಲ್ಲದ ಸ್ಥಿತಿ. ಕೋಟ್ಯಂತರ ವೆಚ್ಚದ ಯೋಜನೆಯೊಂದು ಕೆಲವೆ ವರ್ಷಗಳಲ್ಲಿ ಪ್ರಯೋಜನಕ್ಕೆ ಬಾರದಂತಾಗುವ ಅಪಾಯವಿದೆ.

Advertisement

ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ವಿದ್ಯುತ್‌ ಬಿಲ್‌ ಬಾಕಿ ಇರುವ ಬಗ್ಗೆ ಹಲವು ಬಾರಿ ಸೂಚನೆ ನೀಡಿದ್ದರು ಬಿಲ್‌ ಪಾವತಿಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಮೆಸ್ಕಾಂ ನಿಯಾಮವಳಿಯಂತೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ.
-ನಾಗರಾಜ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಹೆಬ್ರಿ ಮೆಸ್ಕಾಂ

ಬಿಲ್‌ ಪಾವತಿಗಾಗಿ ಸರಕಾರಕ್ಕೆ ಮನವಿ ಮಾಡಲಾಗಿದೆ. ನೀರಾವರಿ ಹಾಗೂ ಮೆಸ್ಕಾಂ ಇಲಾಖೆ ನಡುವೆ ಸಮನ್ವಯ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ.-ಕಿರಣ್‌, ಕಾರ್ಯಪಾಲಕ ಎಂಜಿನಿಯರ್‌, ವಾರಾಹಿ ಯೋಜನೆ ಸಿದ್ದಾಪುರ

1,500 ಹೆಕ್ಟೇರ್‌ ಕೃಷಿಭೂಮಿಗೆ ನೀರು
ಎಣ್ಣೆ ಹೊಳೆ, ಅಜೆಕಾರು, ಮರ್ಣೆ, ಹಿರ್ಗಾನ, ಕುಕ್ಕುಂದೂರು, ಕಾರ್ಕಳ ಪುರಸಭೆ ವ್ಯಾಪ್ತಿಯ ಸುಮಾರು 1,500 ಹೆಕ್ಟೇರ್‌ ಕೃಷಿ ಭೂಮಿಗೆ ಈ ಯೋಜನೆಯಿಂದ ನೀರು ಹರಿಯುತ್ತದೆ. ಆದರೆ, ವಿದ್ಯುತ್‌ನ ಕಾರಣಕ್ಕೆ ಸಮಸ್ಯೆಯಾಗುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ. ಭತ್ತ, ಅಡಿಕೆ, ಬಾಳೆ, ತೆಂಗು ಬೆಳೆದ ರೈತರಿಗೆ ಈ ಬಾರಿ ನೀರಿಲ್ಲ. ಕಳೆದ ಎರಡು ವರ್ಷಗಳಿಂದ ಏತನೀರಾವರಿ ಯೋಜನೆ ಯಿಂದಾಗಿ ಪರಿಸರದಲ್ಲಿ ಅಂತರ್ಜಲವು ವೃದ್ಧಗೊಂಡಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಕಳೆದ ವರ್ಷ ಅಕ್ಟೋಬರ್‌ತಿಂಗಳ ಕೊನೆಯ ವಾರದಲ್ಲಿ ನೀರು ಹರಿಸಲಾಗಿತ್ತು. ಆದರೆ, ಈ ಬಾರಿ ನವೆಂಬರ್‌ತಿಂಗಳ 2 ವಾರ ಕಳೆದರೂ ನೀರು ಹರಿದಿಲ್ಲ. ಹರಿಯುವುದು ಸಂಶಯವೇ.

ಪಂಪ್‌ ಹೌಸ್‌ನ ಬ್ಯಾಟರಿಗೂ ಹಾನಿ!
ನೀರಾವರಿ ಯೋಜನೆಯ ಪಂಪ್‌ ಹೌಸ್‌ ನಲ್ಲಿರುವ ಬ್ಯಾಟರಿಗಳನ್ನು ನಿರಂತರ ವಿದ್ಯುತ್‌ ಸಂಪರ್ಕ ಇದ್ದರೆ ಮಾತ್ರ ಸುಸ್ಥಿತಿಯಲ್ಲಿಡಲು ಸಾಧ್ಯ. ವಿದ್ಯುತ್‌ ಕಡಿತಗೊಂಡಿರುವುದರಿಂದ ಬ್ಯಾಟರಿಗಳು ಹಾಳಾಗುವ ಸಂಭವವೇ ಹೆಚ್ಚು.

-ಜಗದೀಶ್‌ ರಾವ್‌, ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next