ಬೆಂಗಳೂರು: ರಾಜ್ಯದ ಎಲ್ಲಾ ಗ್ರಾ.ಪಂ ಕಟ್ಟಡಗಳಿಗೆ ಸೋಲಾರ್ ಲೈಟ್ ಹಾಕಲು ತೀರ್ಮಾನ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6273 ಗ್ರಾಮ ಪಂಚಾಯತಿಯಲ್ಲಿ ಐದು ಏಜನ್ಸಿಗಳ ಮೂಲಕ ಸೋಲಾರ್ ಲೈಟ್ ಹಾಕಲು ತೀರ್ಮಾನ ಮಾಡಲಾಗಿದೆ. ಇದಕ್ಕೆ ಒಂದು ವರ್ಷ ಗಡುವು ನೀಡಲಾಗುತ್ತದೆ ಎಂದರು.
685 ಗ್ರಾಮಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಾರಂಭವಾಗಿದೆ. 2012ರಲ್ಲಿ ನಿರ್ಮಲ ಭಾರತ್ ಅಭಿಯಾನದಲ್ಲಿ ನಾಲ್ಕು ಸಾವಿರ ಇದ್ದ ಅನುದಾನವನ್ನು 12 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಎಸ್ ಸಿಎಸ್ ಟಿ ಗೆ 15 ಸಾವಿರ ಏರಿಕೆ ಮಾಡಲಾಗಿದೆ ಎಂದರು.
ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ 96 ಸಾವಿರ ಸದಸ್ಯರಿಗೆ ತರಬೇತಿ ನೀಡಲಾಗುವುದು. 285 ತರಬೇತಿ ಕೇಂದ್ರಗಳ ಮೂಲಕ ತಾಲೂಕು ಹಂತದಲ್ಲಿ 10 ತಂಡಗಳಲ್ಲಿ ಐದು ದಿನಗಳ ಕಾಲ ತರಬೇತಿ ನೀಡಲಾಗುವುದು. ಇದಕ್ಕಾಗಿ 900 ಸಂಪನ್ಮೂಲ ವ್ಯಕ್ತಿಗಳ ನಿಯೋಜಿಸಲಾಗಿದೆ ಎಂದರು.
ಇದನ್ನೂ ಓದಿ:ರಾಜ್ಯ ಸರ್ಕಾರ ತೊಗರಿಗೆ ಪ್ರೋತ್ಸಾಹ ಧನ ನೀಡದೆ ರೈತರಿಗೆ ಅನ್ಯಾಯ: ಪ್ರಿಯಾಂಕ್ ಖರ್ಗೆ ಟೀಕೆ
ಮುಖ್ಯಮಂತ್ರಿ ಅವರ ಜತೆ ಶಾಸಕರ ಸಭೆಗೆ ಗೈರಾಗಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಪೂರ್ವ ನಿಯೋಜಿತ ಕಾರ್ಯಕ್ರಮವಿತ್ತು. ನಾನು ಸಿಎಂ ಬಳಿ ಅನುಮತಿ ಪಡೆದು ತೆರಳಿದ್ದೆ. ಯಾವುದೇ ಕಾರ್ಯಕ್ರಮಕ್ಕೆ ಉದ್ದೇಶ ಪೂರ್ವಕವಾಗಿ ಗೈರಾಗಿಲ್ಲ. ನಮ್ನ ಇಲಾಖೆ ಕಾರ್ಯಗಳ ಬಗ್ಗೆ ಸಚಿವರು ಸೇರಿದಂತೆ ಶಾಸಕರು ಸಂತೃಪ್ತರಾಗಿದ್ದಾರೆ ಎಂದು ಈಶ್ವರಪ್ಪ ಹೇಳಿದರು.