Advertisement

ಕುಟುಂಬ ರಾಜಕಾರಣ ಧಿಕ್ಕರಿಸಿ: ಅಮಿತ್‌ ಶಾ

11:34 AM Oct 11, 2019 | Naveen |

ಸೊಲ್ಲಾಪುರ: ಅಕ್ಕಲಕೋಟ ವಿಧಾನಸಭೆಗೆ ಸ್ಪರ್ಧಿಸಿರುವ ಸಚಿನ್‌ ಕಲ್ಯಾಣಶೆಟ್ಟಿ ಅವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದು, ಬಡವರಿಗೆ ಸಹಾಯ ಮಾಡುವ ಸಾಮಾಜಿಕ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿದ್ದಾರೆ. ಇಂತಹ
ಕೆಲಸಗಾರನನ್ನು ಶಾಸಕರನ್ನಾಗಿ ಮಾಡುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆ. ಆದ್ದರಿಂದ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

Advertisement

ಬಿಜೆಪಿ-ಶಿವಸೇನೆ, ರಾಷ್ಟ್ರೀಯ ಸಮಾಜ ಪಕ್ಷ, ರಯತ್‌ ಕ್ರಾಂತಿ, ಆರ್‌ಪಿಐ, ಶಿವಸಂಗ್ರಾಮ್‌ನ ಅಧಿಕೃತ ಅಭ್ಯರ್ಥಿ ಸಚಿನ್‌ ಕಲ್ಯಾಣ ಶೆಟ್ಟಿ ಅವರ ಪರ ಗುರುವಾರ ಅಕ್ಕಲಕೋಟನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀ ಸ್ವಾಮಿ ಸಮರ್ಥರ ಪವಿತ್ರ ಭೂಮಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು, ಸಚಿನ್‌ ಕಲ್ಯಾಣ ಶೆಟ್ಟಿ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದಂತೆ ನೆರೆದ ನಾಗರಿಗರು ಜೈ ಭವಾನಿ, ಜೈ ಶಿವಾಜಿ ಎನ್ನುವ ಘೋಷಣೆ ಕೂಗಿದರು.

ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕಳೆದ 50 ವರ್ಷಗಳಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಕಾಂಗ್ರೆಸ್‌ ಮತ್ತು ಎನ್‌ಸಿಪಿಯಲ್ಲಿ ಕುಟುಂಬ ರಾಜಕಾರಣವಿದೆ. ಇಂದಿರಾ ಗಾಂಧಿ , ರಾಜೀವ್‌ ಗಾಂಧಿ , ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ , ಶರದ್‌ ಪವಾರ, ಅಜಿತ್‌ ಪವಾರ್‌, ರೋಹಿತ್‌ ಪವಾರ ಅವರು ಕುಟುಂಬ ರಾಜಕಾರಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದಾರೆ. ಆದರೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿದೆ. ಕಾಂಗ್ರೆಸ್‌-ಎನ್ಸಿಪಿ ಭ್ರಷ್ಟಾಚಾರ ಹಾಗೆ ಮುಂದುವರಿದಿದೆ ಎಂದು ಆಪಾದಿಸಿದರು.

ಅಕ್ಕಲಕೋಟನ ಕಾಂಗ್ರೆಸ್‌ ಶಾಸಕ ಸಿದ್ದರಾಮ ಮ್ಹೇತ್ರೆ ಅವರು ಉಜನಿ ಕಾಲುವೆಯಿಂದ ಕೂರನೂರ ಜಲಾಶಯಕ್ಕೆ ನೀರು ತರುವುದಾಗಿ ರಾಜಕಾರಣ ಮಾಡಿ, ಗೆಲ್ಲುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ನೀರು ತಂದಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಆರಿಸಿ ತಂದರೆ ನೀರು ತರುವುದು ನಿಶ್ಚಿತ. ಈ ಕಾರ್ಯಕ್ರಮ ಉದ್ಘಾಟನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದು ಖಚಿತ ಎಂದು ಹೇಳಿದರು.

Advertisement

ಕಾಶ್ಮೀರದಲ್ಲಿ ಮೋದಿ ಸರ್ಕಾರ 370ನೇ ಕಲಂ ರದ್ದು ಮಾಡಿ ದೇಶದ ಮುಖ್ಯವಾಹಿನಿಗೆ ಸೇರ್ಪಡೆ ಮಾಡಿದ್ದನ್ನು ಕಾಂಗ್ರೆಸ್‌-ಎನ್ಸಿಪಿಗಳು ವಿರೋಧಿಸಿದವು. ಈ ನಿರ್ಧಾರ ದೇಶದಲ್ಲೇ ದೊಡ್ಡ ಹೆಜ್ಜೆಯಾಗಿದೆ. ಈ ಕುರಿತು ಎನ್ಸಿಪಿ-ಕಾಂಗ್ರೆಸ್‌ ತನ್ನ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಹೇಳಿದರು.

ಮೈಂದರ್ಗಿ ನಗರ ಪರಿಷತ್‌ ನಗರಾಧ್ಯಕ್ಷೆ ದೀಪ್ತಿ ಕೇಸೂರ ಬಿಜೆಪಿ ಸೇರ್ಪಡೆಯಾದರು. ಸಂಸದ ಜಯಸಿದ್ದೇಶ್ವರ ಮಹಾಸ್ವಾಮೀಜಿ, ದುಧನಿ ನಗರಾಧ್ಯಕ್ಷ ಭೀಮಾಶಂಕರ ಇಂಗಳೆ, ಶಿವಶರಣ ಜೀವಜನ, ಶಿವಾನಂದ ಪಾಟೀಲ, ಯಶವಂತ, ಮಾಜಿ ಶಾಸಕ ಸಿದ್ದರಾಮಪ್ಪ ಪಾಟೀಲ, ಸಹಕಾರಿ ಸಚಿವ ಸುಭಾಷ ದೇಶಮುಖ, ನಾಗಣಸೂರ ಮಠದ ಶ್ರೀಕಾಂತ ಶಿವಾಚಾರ್ಯ ಸ್ವಾಮೀಜಿ, ಮಂದರ್ಗಿಯ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಅಕ್ಕಲಕೋಟ ನಗರ ಅಧ್ಯಕ್ಷೆ ಶೋಭಾ ಕೇಣಗಿ, ಸೊಲ್ಲಾಪುರ ಮೇಯರ್‌ ಶೋಭಾ ಬನಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಹಾಜಿ ಪವಾರ, ನಗರ ಸೇವಕ ಮಹೇಶ ಹಿಂಡೋಳೆ, ಜಿಲ್ಲಾ ಪರಿಷತ್‌ ಸದಸ್ಯ ಆನಂದ ತಾನವಾಡೆ
ಮತ್ತಿತರರು ವೇದಿಕೆಯಲ್ಲಿದ್ದರು. ಶ್ವೇತಾ ಹುಲ್ಲೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next