Advertisement

ವಿಮಾನ ನಿಲ್ದಾಣ ನಿರ್ಗಮನ ರಸ್ತೆಗೆ ಬೀಳುತ್ತಿರುವ ಮಣ್ಣು

10:39 AM May 20, 2018 | |

ಕೆಂಜಾರು: ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಕೆಂಜಾರಿನಲ್ಲಿ ಗುಡ್ಡದ ಮಣ್ಣು ಮಳೆಯ ನೀರಿಗೆ ಕೊಚ್ಚಿ ಹೋಗಿ ರಸ್ತೆಯಲ್ಲಿ ಬೀಳುತ್ತಿದ್ದು, ವಾಹನ ಚಾಲಕರಿಗೆ ಅಪಾಯ ತಂದೊಡ್ಡಿದೆ.

Advertisement

ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಗುಡ್ಡದ ಮಣ್ಣನ್ನು ಅಗೆದು ಕೊಂಡ್ಯೊಯ್ಯಲಾಗುತ್ತಿದೆ. ಈ ಪರಿಸರದಲ್ಲಿ ರಾತ್ರಿ ವೇಳೆ ಸತತ ಮಳೆಯಾಗುತ್ತಿದ್ದು, ಮಣ್ಣು ಕೊಚ್ಚಿ ಹೋಗಿ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಕೆಂಜಾರಿನಿಂದ ಅದ್ಯಪಾಡಿಗೆ ಹೋಗುವ ರಸ್ತೆಯಲ್ಲಿ ಶೇಖರಣೆಗೊಂಡಿದೆ. ಇದರಿಂದ ಕೆಂಜಾರಿನಿಂದ ಅದ್ಯಪಾಡಿ ಕಡೆಗೆ ಹೋಗುವ ವಾಹನಗಳು ಮಣ್ಣಿನಲ್ಲಿ ಹೂತು ಹೋದರೆ, ಹಲವು ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಅಪಾಯವನ್ನು ಕಂಡು ಸ್ಥಳೀಯರು ಜೆಸಿಬಿಯಿಂದ ಮಣ್ಣು ತೆಗೆದು ರಸ್ತೆ ಬದಿಗೆ ಹಾಕಿದ್ದಾರೆ. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಆದರೂ ಮಳೆ ಬಂದರೆ ಇನ್ನೂ ಹೆಚ್ಚು ಮಣ್ಣು ರಸ್ತೆಯಲ್ಲಿ ಶೇಖರಣೆಯಾಗುವ ಸಂಭವವಿದೆ.

ಚರಂಡಿ, ಮೋರಿ ಲೆಕ್ಕಕ್ಕೆ ಮಾತ್ರ
ಗುಡ್ಡದ ಮಳೆಯ ನೀರು, ಮಣ್ಣಿನೊಂದಿಗೆ ರಭಸವಾಗಿ ರಸ್ತೆಯಲ್ಲಿ ಹರಿದು ಬರುತ್ತಿರುವುದು ಇದಕ್ಕೆ ಕಾರಣ. ಚರಂಡಿ ಇದ್ದರೂ ಅದರಲ್ಲಿ ನೀರು ಹರಿಯುತ್ತಿಲ್ಲ. ರಸ್ತೆ ತಗ್ಗು ಚರಂಡಿ ಎತ್ತರದಲ್ಲಿ ನಿರ್ಮಾಣ ಮಾಡಲಾಗಿದೆ. ನೀರು ಚರಂಡಿಯಲ್ಲಿ ಹರಿದಾಡುವಂತೆ ಮಾಡದೇ ಇರುವುದು ಒಂದು ಕಾರಣವಾಗಿದೆ. ಮೋರಿಯಲ್ಲೂ ನೀರು ಹರಿಯುವುದಿಲ್ಲ. ರಸ್ತೆಯಲ್ಲಿ ಮಣ್ಣು ಮತ್ತು ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಕೆಸರು ನೀರು ಎಲ್ಲೆಡೆ ಪಸರುವ ಕಾರಣ ರಾಜ್ಯ ಹೆದ್ದಾರಿ 67ರಲ್ಲಿಯೂ ಕೂಡ ವಾಹನ ಸಂಚಾರಕ್ಕೂ ತೊಂದರೆಯಾಗಿದೆ .

ನೀರು ಹರಿಯದಂತೆ ತಾತ್ಕಾಲಿಕ ಕ್ರಮ
ರಸ್ತೆಯಲ್ಲಿ ನೀರು ಹರಿಯದ ಹಾಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಇದು ಲೋಕೋಪಯೋಗಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಚಾರವಾಗಿದ್ದು ಈ ಬಗ್ಗೆ ಅವರ ಗಮನಕ್ಕೆ ತರಲಾಗುವುದು.
 - ಗಣೇಶ್‌ ಅರ್ಬಿ
    ಮಳವೂರು ಗ್ರಾ.ಪಂ.ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next