ದೇವದುರ್ಗ: ಮಠಗಳು ಧಾರ್ಮಿಕ ಕಾರ್ಯದ ಜತೆಗೆ ಶಿಕ್ಷಣ ನೀಡುತ್ತ ಮತ್ತು ಸಾಮೂಹಿಕ ವಿವಾಹದಂತಹ ಸಮಾಜಮುಖೀ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದು ನೀಲಗಲ್ ಬೃಹನ್ಮಠದ ಡಾ| ಪಂಚಾಕ್ಷರಿ ಶಿವಾಚಾರ್ಯರು ಹೇಳಿದರು.
ಸಮೀಪದ ಯರಮರಸ್ ಗ್ರಾಮದಲ್ಲಿ ನಡೆದ ಲಿಂ| ವೀರಭದ್ರಯ್ಯ ತಾತನವರ 32ನೇ ಪುಣ್ಯಾರಾಧನೆ ಮಹೋತ್ಸವ, ಜಾತ್ರೆ ಮತ್ತು ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಇಂದು ಧರ್ಮ ಉಳಿದಿದ್ದರೆ ಅವು ಮಠ, ಸ್ವಾಮೀಜಿಗಳಿಂದ ಮಾತ್ರ. ಆದರೆ ಕೆಲ ಬುದ್ದಿಗೇಡಿಗಳು ಧರ್ಮದ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಭಕ್ತರು ಅಂತ ಮಾತುಗಳಿಗೆ ಕಿವಿಗೊಡದೇ ಧಾರ್ಮಿಕ ಕಾರ್ಯದಲ್ಲಿ ತೊಡಗಬೇಕು ಎಂದರು.
ಹಣವಂತರು ದುಂದುವೆಚ್ಚ ಮಾಡಿ ವಿವಾಹ ಕಾರ್ಯಕ್ರಮ ಮಾಡುವುದನ್ನು ಬಿಟ್ಟು ಇಂತಹ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಿ ಇತರರಿಗೆ ಮಾದರಿ ಮತ್ತು ಆರ್ಥಿಕವಾಗಿ ನೆರವಾಗಬೇಕು. ಮದುವೆಗೆ ಎಷ್ಟೇ ಹಣ ವ್ಯಯಿಸಿದರೂ ಸ್ವಾಮೀಜಿಗಳ ಆಶೀರ್ವಾದ ಸಿಗುವುದು ದುರ್ಲಭ. ಇಲ್ಲಿ ಅನೇಕ ಶ್ರೀಗಳ ಸಮ್ಮುಖದಲ್ಲಿ ಮದುವೆ ಆಗುತ್ತಿರುವ ನವದಂಪತಿ ಬಾಳು ಸುಖಮಯವಾಗುತ್ತದೆ. ನವದಂಪತಿಗಳು ತಂದೆ-ತಾಯಿ, ಅತ್ತೆ-ಮಾವನವರನ್ನು ಗೌರವದಿಂದ ಕಾಣಬೇಕು ಎಂದು ಕಿವಿಮಾತು ಹೇಳಿದರು.
ಚುಕ್ಕಿಸೂಗಪ್ಪ ಸಾಹುಕಾರ ಜಿ.ಲೋಕರೆಡ್ಡಿ ಮಾತನಾಡಿ, ಧಾರ್ಮಿಕ ಕ್ಷೇತ್ರದ ಸನ್ನಿಧಿಯಲ್ಲಿ ನೂತನ ಜೀವನಕ್ಕೆ ಕಾಲಿಟ್ಟಿರುವ ವರ ದುಶ್ಚಟಗಳಿಗೆ ದಾಸರಾಗದಂತೆ ವಧು ನೋಡಿಕೊಳಬೇಕು. ದುಶ್ಚಟಗಳಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ದಂಪತಿಗಳು ಹೆತ್ತವರನ್ನು ಕೀಳಾಗಿ ಕಾಣದೆ ಮಕ್ಕಳಂತೆ ನೋಡಿಕೊಳಬೇಕು ಎಂದರು.
ಭೀಮನಗೌಡ ನಾಗಡದಿನ್ನಿ, ಚರಬಸಯ್ಯತಾತ, ಬೆಟ್ಟಪ್ಪತಾತ ಜಾಟಗಲ್, ಶಶಿಧರಸ್ವಾಮಿ ಹೆಗ್ಗಡದಿನ್ನಿ, ಮಂತ್ರಜಾತಯ್ಯಸ್ವಾಮಿ, ವೈ. ಅಮರೇಶಪ್ಪಗೌಡ, ಸಿದ್ರಾಮಪ್ಪಗೌಡ, ಅಜಪ್ಪಗೌಡ, ಬಸವನಗೌಡ, ಶರಣಬಸವ, ವೀರನಗೌಡ, ಸುನೀಲಕುಮಾರ ಅಂಗಡಿ, ಶರಣಬಸವ, ನಾಗರಾಜಗೌಡ ಡಿ.ಎನ್.ವೈ. ಉಮೇಶ ಗೌಡ ನಾಗಡದಿನ್ನಿ, ಹನುಮಂತ್ರಾಯ ಬಾಡಲ್, ಪಿಎಸ್‌ಐ ಸಾಬಯ್ಯ ನಾಯಕ ಇದ್ದರು.