Advertisement

ಅಲೆಮಾರಿ ಸಮುದಾಯಕ್ಕೆ ಸಮಾಜ ಕಲ್ಯಾಣ ಇಲಾಖೆ ವಿಶೇಷ ಯೋಜನೆ

06:05 AM Jan 06, 2018 | |

ಬೆಂಗಳೂರು: ಪರಿಶಿಷ್ಟ ಜಾತಿಗೆ ಸೇರಿದ್ದರೂ ಇದುವರೆಗೂ ಸರ್ಕಾರದ ಸಾಲ-ಸವಲತ್ತುಗಳಿಂದ ವಂಚಿತರಾಗಿರುವ “ಡಕ್ಲರ್‌’ ಸೇರಿ 40 ಉಪ ಜಾತಿಗಳಿಗೆ ಸ್ವಂತ ವ್ಯಾಪಾರ-ಉದ್ದಿಮೆ ಸ್ಥಾಪಿಸಲು ನೇರ ಸಾಲ, ಕೃಷಿ ಮಾಡಲು ಜಮೀನು ಒದಗಿಸಿಕೊಡಲು ಸಮಾಜ ಕಲ್ಯಾಣ ಇಲಾಖೆ ಹೊಸ ಯೋಜನೆ ರೂಪಿಸಿದೆ.

Advertisement

100 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಈ ಯೋಜನೆಯಡಿ ಅಲೆಮಾರಿ ಸಮುದಾಯದ 20 ಸಾವಿರ ಕುಟುಂಬಗಳ ಒಂದು ಲಕ್ಷ ಜನರಿಗೆ ಹೊಸ ವರ್ಷದ ಕೊಡುಗೆಯಾಗಿ “ಸವಲತ್ತು’ ಭಾಗ್ಯ ದೊರಕಿಸಿಕೊಡಲು ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ರಾಜ್ಯದಲ್ಲಿ ಅವಕಾಶ ವಂಚಿತರಾಗಿರುವ 40 ಉಪ ಜಾತಿಗಳಿಗೆ ಮನೆ, ಸ್ವಂತ ಉದ್ಯೋಗಕ್ಕಾಗಿ ಕಾರು, ವ್ಯಾಪಾರ ಆರಂಭಿಸಲು 10 ಲಕ್ಷ ರೂ.ವರೆಗೆ ನೇರ ಸಾಲ, ಕೃಷಿ ಮಾಡುವುದಾದರೆ 15 ಲಕ್ಷ ರೂ. ವೆಚ್ಚದಲ್ಲಿ ಕನಿಷ್ಠ 2 ಎಕರೆ ಜಮೀನು ಒದಗಿಸಲಾಗುವುದು ಎಂದು ಹೇಳಿದರು.

ಮುಂದಿನ ಸಚಿವ ಸಂಪುಟ ಸಭೆಯಂದು ವಿಧಾನಸೌಧ ಮುಂಭಾಗದಲ್ಲಿ ಮೊದಲ ಹಂತದಲ್ಲಿ ಡಕ್ಲರ್‌ ಸಮುದಾಯದ ಕುಟುಂಬಗಳಿಗೆ ಸಲ‌ತ್ತು ಒದಗಿಸಲಾಗುವುದು ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಅಂಬೇಡ್ಕರ್‌ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 5 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಉದ್ದಿಮೆ ನಡೆಸಲು ನೇರ ಸಾಲ ನೀಡಲಾಗುವುದು. ಕೈಗಾರಿಕೆ ಸ್ಥಾಪಿಸುವುದಾದರೆ ಶೇ.50ರಷ್ಟು ಸಬ್ಸಿಡಿ ಸಹ ನೀಡಲಾಗುವುದು ಎಂದು ತಿಳಿಸಿದರು.

Advertisement

ಪರಿಶಿಷ್ಟ ಜಾತಿಯಲ್ಲಿ ಚಲವಾದಿ, ಮಾದಿಗ, ಬೋವಿ, ಲಂಬಾಣಿ ಸಮುದಾಯ ಸೇರಿ ಕೆಲವೇ ಕೆಲವು ಸಮುದಾಯಗಳು ಮೀಸಲಾತಿ ಸೇರಿ ಸರ್ಕಾರಿ ಸವಲತ್ತು ಹೆಚ್ಚಿಗೆ ಪಡೆಯುತ್ತಿವೆ. ಆದರೆ, ಡಕ್ಲಾ , ಸುಡುಗಾಡು ಸಿದ್ಧರು, ಅಲೆಮಾರಿಗಳು ಪರಿಶಿಷ್ಟ ಜಾತಿಯವರಾದರೂ ಅವರಿಗೆ ತಮ್ಮ ಜಾತಿ ಗೊತ್ತಿಲ್ಲ. ಅಸ್ಪೃಶ್ಯರ ಮನೆಯಲ್ಲೇ ಭಿಕ್ಷೆ ಬೇಡಿ ತಿನ್ನುವವರೂ ಇದ್ದಾರೆ. ಅವರೆಲ್ಲ ಮುಖ್ಯ ವಾಹಿನಿಗೆ ಬಂದು ಸ್ವಾವಲಂಬಿ ಬದುಕು ಸಾಗಿಸಲು ಅನುವು ಮಾಡಿಕೊಡುವ ಸಲುವಾಗಿ ದೇಶದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ಯೋಜನೆ ರೂಪಿಸಲಾಗಿದೆ ಎಂದರು.

ವಿದ್ಯಾರ್ಹತೆಗೆ ಅನುಗುಣವಾಗಿ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿರುವವರಿಗೆ ಕಾರು ಅಥವಾ ಗೂಡ್ಸ್‌ ವಾಹನ, ವ್ಯಾಪಾರ ಮಾಡುವವರಿಗೆ 5ಲಕ್ಷ ರೂ. ನೇರ ಸಾಲ, ಉದ್ದಿಮೆಗಾಗಿ 10ಲಕ್ಷ ರೂ. ಸಾಲ, ಮನೆ ಇಲ್ಲದವರಿಗೆ ಮನೆ, ನಿವೇಶನ ಇದ್ದರೆ ಮನೆ ಕಟ್ಟಿಕೊಡುವುದು, ಕಾಲೋನಿಯಲ್ಲಿ ವಾಸಿಸುತ್ತಿದ್ದ ಮೂಲಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಭೂ ರಹಿತರಿಗೆ ಜಮೀನು ಒದಗಿಸಲು ಭೂ ಮಾಲೀಕರಿಂದ ನೇರವಾಗಿ ಜಮೀನು ಖರೀದಿಸಲಾಗುವುದು. ಮಾರ್ಗಸೂಚಿ ದರದ ಮೂರ್‍ನಾಲ್ಕು ಪಟ್ಟು ಕೊಟ್ಟು ಖರೀದಿಸಿ ಅಲೆಮಾರಿ ಸಮುದಾಯಕ್ಕೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.  ವಿದ್ಯಾಸಿರಿ ಯೋಜನೆಯಡಿ 2017-18 ನೇ ಸಾಲಿನಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಕ್ಕಾಗಿ ಪ್ರೋತ್ಸಾಹ ಧನ ನೀಡಿದ್ದು, ಮುಂದಿನ ವರ್ಷ ಆ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊಳಲ್ಕೆರೆಯಲ್ಲೇ ಸ್ಪರ್ಧೆ
ಚಿತ್ರದುರ್ಗ ಜಿಲ್ಲೆಯಲ್ಲಿ 44 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಸೋಲು-ಗೆಲುವು ಕಂಡಿದ್ದೇನೆ. ಆ ಜಿಲ್ಲೆ ಬಿಟ್ಟು ರಾಜಕಾರಣ ಮಾಡಲ್ಲ, ಹೊಳಲ್ಕೆರೆಯಲ್ಲೇ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡ್ತೇನೆ. ಅಭಿಮಾನಿಗಳು, ಆತ್ಮೀಯರು ಮಾಯಕೊಂಡ, ನೆಲಮಂಗಲ, ಹಗರಿಬೊಮ್ಮನಹಳ್ಳಿಯಲ್ಲಿ ಸ್ಪರ್ಧಿಸಿ ಎಂದು ಪ್ರೀತಿಯಿಂದ ಒತ್ತಾಯಿಸುತ್ತಾರೆ. ಅವರಿಗೆ ನಾನು ಆಭಾರಿ. ಆದರೆ, ನನ್ನ ಕರ್ಮಭೂಮಿ ಹೊಳಲ್ಕೆರೆ, ಅಲ್ಲೇ ನನ್ನ ಸ್ಪರ್ಧೆ ಎಂದು ಸಚಿವ  ಆಂಜನೇಯ ಸ್ಪಷ್ಟಪಡಿಸಿದರು.

ಜಾತಿ ಸಮೀಕ್ಷೆಯಿಂದ ಕಾಂಗ್ರೆಸ್‌ಗೆ ಹಿನ್ನಡೆಯಿಲ್ಲ
ರಾಜ್ಯ ಸರ್ಕಾರ ಕೈಗೊಂಡಿರುವ ಜಾತಿ ಸಮೀಕ್ಷೆ ಬಿಡುಗಡೆ ಮಾಡಿದರೆ ಕಾಂಗ್ರೆಸ್‌ಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿದ್ದಾರೆ. 

ಸಫಾಯಿ ಕರ್ಮಚಾರಿ ಆಯೋಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಸಮೀಕ್ಷೆ ವರದಿ ಅಂತಿಮಗೊಳ್ಳುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಜನಗಣತಿ ಸಮೀಕ್ಷೆಯಾಗಿದೆ. ದೇಶದಲ್ಲಿ ಎಲ್ಲಿಯೂ ಕೂಡ ಈ ರೀತಿಯ ಸಮೀಕ್ಷೆ ನಡೆಸಿಲ್ಲ. ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ಸಮೀಕ್ಷೆ ನಡೆಸಲಾಗಿದೆ. ಆದಷ್ಟು ಬೇಗ ಮುಖ್ಯಮಂತ್ರಿಗಳು ಆಯೋಗದ ಅಧ್ಯಕ್ಷರ ಜತೆ ಮಾತನಾಡಿ ವರದಿ ಬಿಡುಗಡೆಗೊಳಿಸಲಿದ್ದಾರೆ ಎಂದು ಹೇಳಿದರು. ಸಮೀಕ್ಷಾ ವರದಿ ಬಿಡುಗಡೆಯಿಂದ ಕಾಂಗ್ರೆಸ್‌ಗೆ ಅನುಕೂಲವೇ ಆಗಲಿದೆ. ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಸಮೀಕ್ಷೆ ಮಾಡಲಾಗಿದೆ ಎಂದು ಹೇಳಿದರು. ಚುನಾವಣೆಯಲ್ಲಿ ಯಾವುದೇ ಕ್ಷೇತ್ರ ಬದಲಾವಣೆ ಮಾಡಲ್ಲ. ಹೊಳಲ್ಕೆರೆ ಮತದಾರರು ಆಶೀರ್ವದಿಸಿ ಕಳುಹಿಸಿದ್ದಾರೆ. ನಾನು ಮೀಸಲು ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next