ಗುರಮ್ಮಗೆ ಆಗಿನ್ನೂ 9 ವರುಷ. ಆಟ ಆಡಿಕೊಂಡಿರಬೇಕಿದ್ದ ವಯಸ್ಸು. ಇದ್ದಕ್ಕಿದ್ದಂತೆ ಆಕೆಗೆ 50 ವರ್ಷದ ಅಜ್ಜನೊಂದಿಗೆ ಮದುವೆ ಆಗುತ್ತೆ. ದಾಂಪತ್ಯ ಅಂದರೇನೆಂದೇ ತಿಳಿಯದ ಗುರಮ್ಮ, ತನ್ನ ಕೈಹಿಡಿದವನನ್ನು “ಅಪ್ಪಾ…’ ಎಂದು ಮುಗ್ಧ ಸ್ವರದಲ್ಲಿ ಕರೆದಾಗ, ಹಣ್ಣುಗಂಡ ಕಣ್‌ಕಣ್ ಬಿಡುತ್ತಾನೆ…
ಈಗ ಬಾಲ್ಯ ವಿವಾಹ, ದುರ್ಬೀನಿಗೂ ಕಾಣಸಿಗುತ್ತಿಲ್ಲ. ದೇವದಾಸಿ ಪದ್ಧತಿಗೂ ಎಲ್ಲೆಡೆ ಬಹಿಷ್ಕಾರ ಬಿದ್ದಿದೆ. ಅಷ್ಟಕ್ಕೂ. ಈ ಸಾಮಾಜಿಕ ಅನಿಷ್ಟಗಳು ಸಮಾಜದಿಂದ ಏಕ್‌ಧಂ ಮರೆಯಾಗಿಬಿಟ್ಟವೇ? ಖಂಡಿತಾ, ಇಲ್ಲ. ಇವನ್ನು ಹೊರದಬ್ಬಲು ಹಲವರ ಬೆವರು ಈ ನೆಲದ ಮೇಲೆ ಚೆಲ್ಲಿದೆ. ಈ ಒಳಿತು ಕೆಲಸಕ್ಕಾಗಿ ಕೆಲವರು ಇಡೀ ಬದುಕನ್ನೇ ತ್ಯಾಗ ಮಾಡಿದ್ದಾರೆ. ಅಂಥವರಲ್ಲಿ ಪ್ರಮುಖರು, ಗುರಮ್ಮ ಸಂಕಿನಮಠ.
ನೋವು ಎನ್ನುವುದು ಕೆಲವರ ಬದುಕಿಗೆ ಎಂಥ ಟ್ವಿಸ್ಟ್ ಕೊಡುತ್ತೆ ನೋಡಿ. ಗುರಮ್ಮಗೆ ಆಗಿನ್ನೂ 9 ವರುಷ. ಆಟ ಆಡಿಕೊಂಡಿರಬೇಕಿದ್ದ ವಯಸ್ಸು. ಇದ್ದಕ್ಕಿದ್ದಂತೆ ಆಕೆಗೆ 50 ವರ್ಷದ ಅಜ್ಜನೊಂದಿಗೆ ಮದುವೆ ಆಗುತ್ತೆ. ದಾಂಪತ್ಯ ಅಂದರೇನೆಂದೇ ತಿಳಿಯದ ಗುರಮ್ಮ, ತನ್ನ ಕೈಹಿಡಿದವನನ್ನು “ಅಪ್ಪಾ…’ ಎಂದು ಮುಗ್ಧ ಸ್ವರದಲ್ಲಿ ಕರೆದಾಗ, ಹಣ್ಣುಗಂಡ ಕಣ್‌ಕಣ್ ಬಿಡುತ್ತಾನೆ. ಮದುವೆಯಾಗಿ ಇನ್ನೂ ಒಂದು ವರುಷ ಆಗಿರೋದಿಲ್ಲ. ಪತಿಯನ್ನು ಸಾವು ತಬ್ಬಿಕೊಳ್ಳುತ್ತದೆ. 10ನೇ ವಯಸ್ಸಿಗೆ ವಿಧವೆ ಪಟ್ಟ ಹೊತ್ತು, ಗುರಮ್ಮ ತನ್ನ ತವರು ಮನೆಯಾದ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮಕ್ಕೆ ಬರುತ್ತಾರೆ.
ಊರಲ್ಲಿ ಬಂದು ನೋಡಿದರೆ, ತನ್ನಂಥದ್ದೇ ವಯಸ್ಸಿನ ಕೆಲವರಿಗೂ ಇಂಥದ್ದೇ ಸ್ಥಿತಿ. ಮಗಳನ್ನು ಮಡಿಲಲ್ಲಿ ಮಲಗಿಸಿಕೊಂಡ ಹೆತ್ತ ತಾಯಿ, “ಬದುಕು ಇನ್ನೂ ದೀರ್ಘವಿದೆ ಮಗಳೇ, ಧೈರ್ಯಗೆಡದಿರು…’ ಎಂದು ತಲೆ ನೇವರಿಸಿದರಂತೆ. ಸಿದ್ದೇಶ್ವರ ಸ್ವಾಮಿಗಳೂ ಈ ಬಾಲಕಿಗೆ ಹುರುಪು ತುಂಬಿದರಂತೆ. ಆ ಹೊತ್ತಿಗೆ ಗುರಮ್ಮ ಜತೆ ಓದುತ್ತಿದ್ದವರೆಲ್ಲ ಓದು ಮುಗಿಸಿ, ನೌಕರಿಗೆ ಸೇರಿದ್ದರಂತೆ. ಗುರಮ್ಮ ಸುಮ್ಮನೆ ಕೂರಲಿಲ್ಲ. ಎಸ್ಸೆಸ್ಸೆಲ್ಸಿ ವರೆಗೆ ಓದಿ, ಅಂಗನವಾಡಿ ಕಾರ್ಯಕರ್ತೆಯಾದರು.
ಆದರೆ, ಬದುಕೆಂದರೆ ತನ್ನ ಒಳಿತಷ್ಟೇ ಅಲ್ಲವಲ್ಲಾ? ಸುತ್ತ ನೋಡಿದಾಗ, ಇನ್ನಷ್ಟು ಬಾಲವಿಧವೆಯರು ಕಣ್ಣಿಗೆ ಕಂಡರಂತೆ. ನೊಂದ ಮಹಿಳೆಯರನ್ನೆಲ್ಲ ಸಂಘಟಿಸಿ, ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದರು. ಅಸಹಾಯಕ ಹೆಣ್ಣುಮಕ್ಕಳಿಗೆ ಟೈಲರಿಂಗ್ ಮುಂತಾದ, ಬದುಕುವ ದಾರಿಗಳನ್ನು ಹೇಳಿಕೊಟ್ಟರು. ಅಕ್ಕಮಹಾದೇವಿ ಮಹಾಮಂಡಳ ಸಂಸ್ಥೆ ಕಟ್ಟಿ, ಸ್ವಾವಲಂಬನೆಯ ಹಸಿರು ಚಿಗುರಿಸಲು, ಅಸಂಖ್ಯ ಕಾರ್ಯಕ್ರಮಗಳನ್ನೂ ರೂಪಿಸಿದರು.
80ನೇ ವಯಸ್ಸಿನ ಗುರಮ್ಮ ಇವತ್ತಿಗೂ ಸುಮ್ಮನೆ ಕೂರುವುದಿಲ್ಲ. ನಿತ್ಯವೂ ಅಸಹಾಯಕ ಮಹಿಳೆಯರಿಗೆ ಧೈರ್ಯ ತುಂಬಲು, ಹಳ್ಳಿ ಹಳ್ಳಿಗೆ ಭೇಟಿ ಕೊಡುತ್ತಾರೆ. ಕಳೆದ 60 ವರ್ಷಗಳಿಂದ ಅದೆಷ್ಟೋ ಬಾಲ್ಯ ವಿವಾಹಗಳನ್ನು ತಡೆದ ಪುಣ್ಯ ಕಟ್ಟಿಕೊಂಡಿದ್ದಾರೆ. ತಾವಿರುವ ಸುತ್ತಮುತ್ತ ದೇವದಾಸಿ ಪದ್ಧತಿಯನ್ನು ಹತ್ತಿರವೂ ಸುಳಿಯದಂತೆ ನೋಡಿಕೊಂಡಿದ್ದಾರೆ.
ಗುರಮ್ಮ ಅವರ ಈ ಎಲ್ಲ ಸಾಧನೆಗಳನ್ನು ಗುರುತಿಸಿ, 2013ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗೌರವಿಸಿದ್ದರು. ಸಾಲು ಸಾಲು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. “ನಾನು ಸಾಯುವ ಕ್ಷಣದ ವರೆಗೂ ಬಾಲ್ಯ ವಿವಾಹ, ದೇವದಾಸಿ ಪದ್ಧತಿ ಮತ್ತು ಅಸಹಾಯಕ ಹೆಣ್ಣುಮಕ್ಕಳಿಗಾಗಿ ಸೇವೆ ಮಾಡುತ್ತೇನೆ’ ಎನ್ನುತ್ತಾರೆ ಗುರಮ್ಮ.
ಜಾನಪದ ಕೃಷಿ
ಗುರಮ್ಮ, ಜಾನಪದ ಕಲಾವಿದೆ ಕೂಡ ಹೌದು. ಪರಿಸರ ಜಾಗೃತಿ, ಸ್ವಯಂ ಉದ್ಯೋಗ, ಸ್ತ್ರೀಶಕ್ತಿ ಯೋಜನೆ ಇತ್ಯಾದಿ ಸಂಗತಿಗಳ ಬಗ್ಗೆ ಕಲಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸುವುದಲ್ಲದೇ, ಜಾನಪದ ಶೈಲಿಯಲ್ಲಿ ಸಾಹಿತ್ಯವನ್ನೂ ರಚಿಸಿ, ಲಾವಣಿ- ಗೀಗಿ ಪದಗಳ ಮೂಲಕ ಜನತೆಗೆ ತಲುಪಿಸುತ್ತಾರೆ.
ಪ್ರಶಾಂತಕುಮಾರ ಜಿ. ಹೂಗಾರ