Advertisement

ಕೆಎಸ್‌ಆರ್‌ಪಿ ಮಹಿಳಾ ಸೈಕ್ಲಿಂಗ್‌ ಪಡೆಯಿಂದ ಸಾಮಾಜಿಕ ಕಾಳಜಿ

12:24 AM Apr 10, 2019 | Lakshmi GovindaRaju |

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ಕೈ ಮೀರದಂತೆ ನಿಭಾಯಿಸುವ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಮಹಿಳಾ ಪಡೆ, ಸೈಕ್ಲಿಂಗ್‌ ಜಾಥಾ ಮೂಲಕ ಸಾಮಾಜಿಕ ಕಳಕಳಿಯ ಸಂದೇಶ ಸಾರುತ್ತಲೇ ಮತ್ತಷ್ಟು ಬಲಗೊಳ್ಳುತ್ತಿದೆ.

Advertisement

ಕೆಎಸ್‌ಆರ್‌ಪಿ ನಾಲ್ಕನೇ ಬೆಟಾಲಿಯನ್‌ನಲ್ಲಿರುವ ಮಹಿಳಾ ಪಡೆಯಲ್ಲಿ ಸೈಕ್ಲಿಂಗ್‌ ತಂಡ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಿಳಾ ಸಬಲೀಕರಣ ಜಾಗೃತಿ ಸಲುವಾಗಿ ಬೆಳಗಾವಿಯಿಂದ ಬೆಂಗಳೂರಿನವರೆಗೆ ಬರೋಬ್ಬರಿ ಐದು ದಿನಗಳ ಕಾಲ ಸೈಕ್ಲಿಂಗ್‌ ನಡೆಸಿದ ಹೆಗ್ಗಳಿಕೆ ಹೊಂದಿದೆ.

ನಾಲ್ಕನೇ ಬೆಟಾಲಿಯನ್‌ಲ್ಲಿರುವ 55 ಮಹಿಳಾ ಸಿಬ್ಬಂದಿ ಪೈಕಿ ಬಹುತೇಕರು ಸೈಕ್ಲಿಂಗ್‌ನಲ್ಲಿ ಪರಿಣಿತಿ ಹೊಂದಿದ್ದಾರೆ. ಪೊಲೀಸ್‌ ಸೇವೆಯ ಜತೆ ಜತೆಗೆ ದೈಹಿಕ ಸದೃಢತೆ ಹಾಗೂ ಕೆಲಸದಲ್ಲಿ ಮತ್ತಷ್ಟು ಚೈತನ್ಯ ತುಂಬುವಲ್ಲಿ ಸೈಕ್ಲಿಂಗ್‌ ಚಟುವಟಿಕೆ ಸಹಕಾರಿಯಾಗಬಲ್ಲದು ಎಂಬ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಚುನಾವಣೆ, ರ್ಯಾಲಿಗಳು, ಪ್ರಮುಖ ಕಾರ್ಯಕ್ರಮಗಳಲ್ಲಿ ಪರಿಸ್ಥಿತಿ ನಿಭಾಯಿಸುವುದು ಸೇರಿದಂತೆ ಹಲವು ತುರ್ತು ಸಂದರ್ಭಗಳಲ್ಲಿ ಕೆಎಸ್‌ಆರ್‌ಪಿ ಸೇವೆ ಸಲ್ಲಿಸಲಿದೆ. ಇಂತಹ ಪರಿಸ್ಥಿತಿಗಳಲ್ಲಿ ಮಹಿಳಾ ಪಡೆಗಳೂ ಕೂಡ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತವೆ. ಮಹಿಳಾ ಸಬಲೀಕರಣ, ಹೆಣ್ಣುಮಕ್ಕಳ ರಕ್ಷಣೆ, ಹಕ್ಕುಗಳ ಬಗ್ಗೆ ಸೈಕಲ್‌ ರ್ಯಾಲಿಯ ಮೂಲಕ ಜಾಗೃತಿ ಅಭಿಯಾನ ನಡೆಸುವ ಬಗ್ಗೆ ಯೋಜನೆ ರೂಪಿಸಲಾಯಿತು.

ಇದಕ್ಕಾಗಿ ಬೆಳಗಾವಿಯಲ್ಲಿರುವ 2ನೇ ಬೆಟಾಲಿಯನ್‌ ಹಾಗೂ ಬೆಂಗಳೂರಿನಲ್ಲಿರುವ ನಾಲ್ಕನೇ ಬೆಟಾಲಿಯನ್‌ನಲ್ಲಿರುವ ಮಹಿಳಾ ಪಡೆಗಳ ಮುಂದೆ ಈ ಪ್ರಸ್ತಾವನೆ ಇಟ್ಟಾಗ, ಸಿಬ್ಬಂದಿ ಕೂಡ ಇದರಲ್ಲಿ ಭಾಗಿಯಾಗಲು ಆಸಕ್ತಿ ತೋರಿಸಿದರು. ಜತೆಗೆ, ನುರಿತ ಸೈಕ್ಲಿಸ್ಟ್‌ಗಳಿಂದ ಕೆಲದಿನಗಳ ಮಟ್ಟಿಗೆ ತರಬೇತಿ ಕೊಡಿಸಲಾಯಿತು. ಎರಡು ಮಹಿಳಾ ಸೈಕ್ಲಿಸ್ಟ್‌ ತಂಡಗಳು ರೂಪುಗೊಂಡವು.

Advertisement

ಇದೇ ತಂಡಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯಿಂದ ಬೆಂಗಳೂರಿನವರೆಗೆ ಐದು ದಿನಗಳ ಕಾಲ ನಡೆದ ಮಹಿಳಾ ಸಬಲೀಕರಣ ಜಾಗೃತಿ ಜಾಥಾದಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡು ಜಾಥಾ ಸಂಪೂರ್ಣ ಯಶಸ್ವಿಯಾಯಿತು ಎಂದು ಅಧಿಕಾರಿ ಸೈಕ್ಲಿಸ್ಟ್‌ ತಂಡಗಳ ಬಗ್ಗೆ ಮೆಚ್ಚುಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಾಮಾಜಿಕ ಕಳಕಳಿಯ ಉದ್ದೇಶಕ್ಕೆ ಮಹಿಳಾ ಸೈಕ್ಲಿಸ್ಟ್‌ ತಂಡ ಅಧಿಕಾರಿಗಳ ಸೂಚನೆ ಮೇರೆಗೆ ಇದುವರೆಗೂ ಎರಡು ಜಾಥಾಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದೆ. ನಮ್ಮ ತಂಡಕ್ಕೂ ಇದರ ಬಗ್ಗೆ ಹೆಮ್ಮೆಯಿದೆ ಎಂದು ನಾಲ್ಕನೇ ಬೆಟಾಲಿಯನ್‌ನ ಮಹಿಳಾ ಸೈಕ್ಲಿಸ್ಟ್‌ ತಂಡದ ನೇತೃತ್ವ ವಹಿಸಿರುವ ಪಿಎಸ್‌ಐ ಜಯಶ್ರೀ ಅಭಿಪ್ರಾಯವ್ಯಕ್ತಪಡಿಸುತ್ತಾರೆ.

ಉದಯವಾಣಿ-ಕೆಎಸ್‌ಆರ್‌ಪಿ ಮತಜಾಗೃತಿ ಸೈಕಲ್‌ ಜಾಥಾ” ಲೋಕಸಭಾ ಮತದಾನ ಜಾಗೃತಿ ಸಲುವಾಗಿ ಉದಯವಾಣಿ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಸಹಯೋಗದಲ್ಲಿ ಬುಧವಾರ ಮತದಾನ ಜಾಗೃತಿಗಾಗಿ ಸೈಕಲ್‌ ಜಾಥಾ ನಡೆಯಲಿದೆ.

ಮಡಿವಾಳದ ಕೆಎಸ್‌ಆರ್‌ಪಿ ಮೈದಾನದಲ್ಲಿ ಏ.10ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಸೈಕಲ್‌ ರ್ಯಾಲಿಗೆ ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್‌, ಡಿಐಜಿ ಸತೀಶ್‌ ಕುಮಾರ್‌ ಚಾಲನೆ ನೀಡಲಿದ್ದಾರೆ. ಕೆಎಸ್‌ಆರ್‌ಪಿ ಮಹಿಳಾ ಸೈಕ್ಲಿಸ್ಟ್‌ ತಂಡ ಹಾಗೂ ಉದಯವಾಣಿ ಸಿಬ್ಬಂದಿ ಸೈಕಲ್‌ ಜಾಥಾದಲ್ಲಿ ಭಾಗವಹಿಸಲಿದ್ದು, ಸೈಕಲ್‌ ಜಾಥಾ ಕೆಎಸ್‌ಆರ್‌ಪಿ 3 ನೇ ಹಾಗೂ 4ನೇ ಬೆಟಾಲಿಯನ್‌ ವಸತಿ ಪ್ರದೇಶ, ಎಚ್‌ಎಸ್‌ಆರ್‌ ಲೇಔಟ್‌, ಮಡಿವಾಳ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯಲಿದೆ.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next