Advertisement

ಸಮಾಜ ಸಶಕ್ತಗೊಳಿಸುವ ಶಿಕ್ಷಣ ದೊರೆಯಲಿ: ಪಿ.ಬಿ. ಆಚಾರ್ಯ

09:58 AM Jan 05, 2018 | |

ಉಡುಪಿ: ಸಮಾಜವನ್ನು ಗಟ್ಟಿಗೊಳಿಸುವ, ಎಲ್ಲರಿಗೂ ಉತ್ತಮ ಬದುಕನ್ನು ಒದಗಿಸಿ ಕೊಡುವ ಕೆಲಸ ನಡೆಯಬೇಕು. ಇದಕ್ಕೆ ಪೂರಕವಾಗಿ ಇಂದಿನ ಶಿಕ್ಷಣ ವ್ಯವಸ್ಥೆ ಕೂಡ ಬದಲಾಗಬೇಕಿದೆ ಎಂದು ನಾಗಾಲ್ಯಾಂಡ್‌ ರಾಜ್ಯಪಾಲ ಉಡುಪಿ ಮೂಲದ ಪಿ.ಬಿ. ಆಚಾರ್ಯ ಹೇಳಿದರು.

Advertisement

ಮಣಿಪಾಲದ ವ್ಯಾಲಿವ್ಯೂ ಹೊಟೇಲ್‌ ಸಭಾಂಗಣದಲ್ಲಿ ಜ. 4ರಂದು ಜರಗಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಆಚಾರ್ಯ ಅವರು ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಿದೆ. ಶಿಕ್ಷಣ, ಪದವಿ ಪಡೆಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ ಸಾಮಾಜಿಕ ಸಂಬಂಧ ಉತ್ತಮಗೊಳಿಸುವ, ಸಮಾನ ಅವಕಾಶ ಒದಗಿಸಿಕೊಡುವ ಕೆಲಸಗಳು ನಡೆಯುತ್ತಿಲ್ಲ. ಉದ್ಯೋಗ ಗಳಿಸುವುದೇ ಪದವಿಯ ಉದ್ದೇಶವಾಗಬಾರದು. ಪದವಿ ಗಳಿಸುವುದು ಶಿಕ್ಷಣದ ಅಂತಿಮ ಹಂತ ಅಲ್ಲ. ಅದು ಆರಂಭ. ಮಾತ್ರವಲ್ಲದೇ ಸಮಾಜ ಸಶಕ್ತಗೊಳಿಸುವ ಶಿಕ್ಷಣದ ಅಗತ್ಯವಿದೆ. ಯುವಜನತೆ ಕೌಶಲವನ್ನು ಬೆಳೆಸಿಕೊಂಡು ಉದ್ಯೋಗದಾತರಾಗಬೇಕೇ ಹೊರತು ಕೇವಲ ಉದ್ಯೋಗಿಗಳಾಗಿ ಉಳಿಯ ಬಾರದು ಎಂದು ಅವರು ಹೇಳಿದರು.

ಡಾ| ಟಿಎಂಎ ಪೈ ಅವರು ಓರ್ವ ದಂತಕತೆ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಮಣಿಪಾಲದಲ್ಲಿ ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿ ಜಾಗತಿಕವಾಗಿ ಗುರುತಿಸುವಂತೆ ಮಾಡಿರುವುದು ಮಾತ್ರವಲ್ಲದೆ ಸಮಾಜವನ್ನು ಸಶಕ್ತಗೊಳಿಸುವಲ್ಲಿ ಪ್ರಯತ್ನಿಸಿದರು. ಅವರು ತಾವು ಕಂಡ ಕನಸುಗಳನ್ನು ಸಾಕಾರಗೊಳಿಸಿದರು ಎಂದು ಆಚಾರ್ಯ ಅವರು ಪೈಯವರ ಸಾಧನೆಯನ್ನು ಸ್ಮರಿಸಿದರು.

ದೂರದೃಷ್ಟಿ: ಮಣಿಪಾಲ ವಿ.ವಿ. ಸಹಕುಲಾಧಿ ಪತಿ, ಅಕಾಡೆಮಿ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಡಾ| ಟಿಎಂಎ ಪೈ ಅವರ ದೂರದೃಷ್ಟಿಯಂತೆ ಮಣಿಪಾಲ ಶಿಕ್ಷಣ ಸಂಸ್ಥೆಗಳು ಬೆಳೆದುಬಂದಿವೆ. ಯಾವುದೇ ಅರ್ಹ ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂಬುದು ಅಕಾಡೆಮಿಯ ನಿಲುವು. ಶಿಕ್ಷಣದಿಂದ ಬಡತನವನ್ನು ದೂರಮಾಡಬಹುದು ಎಂಬು ದನ್ನು ಡಾ| ಪೈ ಅವರು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.

ಕುಲಪತಿ ಡಾ| ಎಚ್‌. ವಿನೋದ್‌ ಭಟ್‌ ಸ್ವಾಗತಿಸಿದರು. ಟಿಎಂಎ ಪೈ ಫೌಂಡೇಶನ್‌ನ ಕಾರ್ಯದರ್ಶಿ ಮತ್ತು ಖಜಾಂಚಿ ಟಿ. ಅಶೋಕ್‌ ಪೈ, ಎಂಇಎಂಜಿ ಚೇರ್ಮನ್‌ ಡಾ| ರಂಜನ್‌ ಆರ್‌.ಪೈ, ಕವಿತಾ ಪಿ.ಬಿ. ಆಚಾರ್ಯ ಉಪಸ್ಥಿತರಿದ್ದರು. 

Advertisement

ಸಮ್ಮಾನ: ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದ ಡಾ| ಎಚ್‌.ಎಸ್‌. ಬಲ್ಲಾಳ್‌, ಡಾ| ಎಚ್‌. ಶಾಂತಾರಾಮ್‌, ಎನ್‌.ವಿ. ಬಲ್ಲಾಳ್‌, ರೂತರ್‌ ಫೋರ್ಡ್‌ ಜೋಸೆಫ್, ಕೆ. ರಮಾನಂದ ಶೆಣೈ, ವಿಟuಲ್‌ ಪಾಟೀಲ್‌ ಮತ್ತು ಯು. ದಾಮೋದರ್‌ ಹಾಗೂ ಸಿಬಂದಿಯನ್ನು ಸಮ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಮಾತನಾಡಿದರು. “ಶಿಕ್ಷಣದಲ್ಲಿ ನೈತಿಕತೆ’ ಕುರಿತು ಬೆಂಗಳೂರಿನ ಇಂಟರ್‌ನ್ಯಾಶನಲ್‌ ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌ನ ನಿರ್ದೇಶಕ ಡಾ| ಗುರುರಾಜ್‌ ಕರಜಗಿ  ಮಾತನಾಡಿದರು. ಸಹಕುಲಪತಿ ಡಾ| ಜಿ.ಕೆ. ಪ್ರಭು ವಂದಿಸಿದರು. ಡಾ| ಅಪರ್ಣಾ ರಘು ಕಾರ್ಯಕ್ರಮ ನಿರ್ವಹಿಸಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲೆ ಡಾ| ಸಂಧ್ಯಾ ಆರ್‌. ನಂಬಿಯಾರ್‌ ಅವರು ಪಿ.ಬಿ. ಆಚಾರ್ಯ ಅವರನ್ನು ಪರಿಚಯಿಸಿದರು. ಹಳೆ ವಿದ್ಯಾರ್ಥಿಗಳ ಪೋರ್ಟಲ್‌ ಕುರಿತು ಪ್ರಸನ್ನ ಕೆ. ಮಾಹಿತಿ ನೀಡಿದರು.

ಲಾಸ್ಟ್‌ ಬೆಂಚ್‌ ನೆನಪು… 
1949ರಲ್ಲಿ ಡಾ| ಮಾಧವ ಪೈ ಅವರು ಎಂಜಿಎಂ ಕಾಲೇಜು ಆರಂಭಿಸಿದಾಗ ಮೊದಲ ಬ್ಯಾಚ್‌ನಲ್ಲಿ ಕೊನೆಯ ಬೆಂಚ್‌ನಲ್ಲಿ ತಾನು ಕಳೆದ ದಿನಗಳನ್ನು ಪಿ.ಬಿ. ಆಚಾರ್ಯ ಸ್ಮರಿಸಿದರು. ಉಡುಪಿಯಲ್ಲಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಎಂಜಿಎಂನ ಮೊದಲ ಬ್ಯಾಚ್‌ನ ಇತರ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next