ಹಳೇಬೀಡು: ನರೇಗಾ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅತಿಹೆಚ್ಚುಬಚ್ಚಲು ಗುಂಡಿ ನಿರ್ಮಾಣ ಮಾಡಿದ ಜಿಲ್ಲೆಯ ಮೊದಲ ಗ್ರಾಪಂ ಎಂಬ ಹೆಗ್ಗಳಿಕೆಗೆ ಹಳೇಬೀಡು ಪಾತ್ರವಾಗಿದೆ.
ಗ್ರಾಮೀಣ ಜನರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿರುತ್ತಿವೆ. ಆದರೂ, ಅಧಿಕಾರಿ ಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರ್ಹರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಆದರೆ, ಹಳೇಗ್ರಾಪಂ ಪಿಡಿಒ ಅವರ ಕಾರ್ಯದಕ್ಷತೆಯಿಂದ ಗ್ರಾಮೀಣ ಜನರಿಗೆ ಸೌಲಭ್ಯ ದೊರೆಯುವಂತಾಗಿದೆ.
125 ಬಚ್ಚಲುಗುಂಡಿ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸರ್ಕಾರ ಪ್ರತಿ ಮನೆಗೂ ಬಚ್ಚಲುಗುಂಡಿ ನಿರ್ಮಿಸಿ ಕೊಳ್ಳಲು ಉದ್ಯೋಗ ಖಾತ್ರಿ ಅಡಿಯಲ್ಲಿ 17 ಸಾವಿರ ರೂ. ಸಹಾಯಧನ ನೀಡುತ್ತಿದೆ. ಇದರಲ್ಲಿ 5 ಸಾವಿರ ರೂ. ಕೂಲಿ, ಉಳಿದ 12 ಸಾವಿರ ರೂ. ಉಪಕರಣ ಖರೀದಿಗೆ ನೀಡಲಾಗುತ್ತದೆ. ಈ ಯೋಜನೆಯನ್ನು ಪಿಡಿಒಗಳೇ ಖುದ್ದು ಕಾಮಗಾರಿ ವೀಕ್ಷಣೆ ಮಾಡಿ, ಹಣ ಬಿಡುಗಡೆ ಮಾಡುತ್ತಾರೆ. ಕೆಲಸ ಆಗದೆ ಕೇವಲ ಹೆಸರು ಹೇಳಿ ಬಿಲ್ ಮಾಡುವ ಕೆಲಸಕ್ಕೆ ಬ್ರೇಕ್ ಹಾಕಿ, ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕಾರ್ಯವನ್ನು ಪಿಡಿಒ ರವಿಕುಮಾರ್ ಮಾಡುತ್ತಿದ್ದಾರೆ.
ಬೇರೆ ತಾಲೂಕುಗಳಲ್ಲಿ 10 ರಿಂದ 15 ಬಚ್ಚಲುಗುಂಡಿಗಳು ಮಾತ್ರ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಹಳೇ ಬೀಡು ಗ್ರಾಪಂ ಮಾತ್ರ 125ಕ್ಕೂ ಹೆಚ್ಚು ಬಚ್ಚಲುಗುಂಡಿ ನಿರ್ಮಾಣ ಮಾಡಿ, ನರೇಗಾ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಮೊದಲ ಪಂಚಾಯ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಪಿಡಿಒ ಕಾರ್ಯಕ್ಕೆ ಶ್ಲಾಘನೆ: ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಅಲ್ಲಿ ಬಚ್ಚಲು ನೀರು ರಸ್ತೆಗೆ ಹರಿಯುತ್ತಿದ್ದರೆ, ಆ ಮನೆಯ ಸದಸ್ಯರಿಗೆ ಈಯೋಜನೆ ಮತ್ತು ಅದರ ಉಪಯೋಗ ತಿಳಿಸುವ ಕಾರ್ಯವನ್ನು ಖುದ್ದು ಪಿಡಿಒ ರವಿಕುಮಾರ್‌ಮಾಡುತ್ತಿದ್ದಾರೆ. ಅಲ್ಲದೆ, ಗುಂಡಿ ನಿರ್ಮಾಣಕ್ಕೆನರೇಗಾದಡಿ ಸಿಗುವ ಸಹಾಯಧನ ವಿತರಿಸುವಮೂಲಕ ಅರ್ಹರಿಗೆ ಯೋಜನೆಯ ಫಲಸಿಗುವಂತೆ ಮಾಡುತ್ತಿದ್ದಾರೆ. ಇದಕ್ಕೆ ಹಳೇಬೀಡು ಸುತ್ತ ಮುತ್ತಲಿನ ಹಳ್ಳಿಗಳ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಹಲವು ಹಳ್ಳಿಗೆ ಭೇಟಿ ನೀಡಿದಾಗ ಮನೆಯಲ್ಲಿ ಬಳಸಿದ ನೀರು ನೇರ ರಸ್ತೆಗೆ ಹರಿಯುವುದನ್ನು ಗಮನಿಸಿದೆ. ಆ ನಂತರ ಮನೆಯ ಸದಸ್ಯರಿಗೆ ಬಚ್ಚಲು ಗುಂಡಿ ನಿರ್ಮಾಣ ಕುರಿತು ಸಲಹೆ ನೀಡಿದೆ. ಇದಕ್ಕೆ ಸರ್ಕಾರ ನೀಡುವ 17 ಸಾವಿರ ರೂ. ಸಹಾಯಧನವನ್ನು ಬಳಸಿಕೊಂಡು ಹೆಚ್ಚು ಮಂದಿ ಈ ಯೋಜನೆ ಪ್ರಯೋಜನೆ ಪಡೆದಿದ್ದಾರೆ.
–ರವಿಕುಮಾರ್, ಪಿಡಿಒ, ಹಳೇಬೀಡು
ಬಚ್ಚಲುಗುಂಡಿ ನಿರ್ಮಾಣಕ್ಕೆ ಸರ್ಕಾರ ಹಣ ಕೊಡುತ್ತದೆ ಎಂಬುದು ಗೊತ್ತಿರಲಿಲ್ಲ. ಪಾತ್ರೆ ತೊಳೆದಿದ್ದು, ಸ್ನಾನ ಮಾಡಿದ ನೀರು ರಸ್ತೆಗೆ ಹರಿಯುತ್ತಿತ್ತು. ಇದನ್ನು ಗಮನಿಸಿದ ಪಿಡಿಒಖುದ್ದು ಮನೆಗೆ ಬಂದು ಪರಿಶೀಲನೆ ಮಾಡಿ, ಅವರೇ ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳಲು ಸೂಚಿಸಿ, ಸಹಾಯಧನವನ್ನು ಬಿಡುಗಡೆ ಮಾಡಿದರು.
– ಮಂಜುನಾಥ್ ಬಿ.ಆರ್, ಹಳೇಬೀಡು
ಡಾ.ಕುಮಾರ್ ಎಂ.ಸಿ.