ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಕುರಿತು ಸಂಚಾರ ಪೊಲೀಸರ ಮೊಬೈಲ್ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಲಕ್ಷಾಂತರ ವಾಹನ ಸವಾರರು ಕೇವಲ ಮೂರೂವರೆ ತಿಂಗಳಲ್ಲೇ ಬರೋಬ್ಬರಿ ಐದು ಕೋಟಿ ರೂ.ಗೂ ಅಧಿಕ ದಂಡ ಪಾವತಿಸಿದ್ದಾರೆ.
ಹೌದು, ಸಂಚಾರ ಪೊಲೀಸರ ವಿನೂತನ ಪ್ರಯೋಗಕ್ಕೆ ವಾಹನ ಸವಾರರು ಸ್ಪಂದಿಸಿದ್ದು, ಸಂಚಾರ ಉಲ್ಲಂಘನೆ ದಂಡವನ್ನು ಆನ್‌ಲೈನ್ ಮೂಲಕವೇ ಪಾವತಿಸುತ್ತಿದ್ದಾರೆ. ಇದರಿಂದ ನಿತ್ಯ ಲಕ್ಷಾಂತರ ರೂ. ದಂಡ ಸಂಗ್ರಹವಾಗುತ್ತಿದೆ.
ಈ ಮೊದಲು ಸಂಚಾರ ನಿಯಮ ಉಲ್ಲಂಘಿಸಿದರೆ ಫೋಟೋ ಸಮೇತ ವಾಹನ ಮಾಲಕರ ಮನೆಗೆ ಅಂಚೆ ಮೂಲಕ ನೋಟಿಸ್ ಕಳುಹಿಸಲಾಗುತ್ತಿತ್ತು. ಆದರೆ, ಇದಕ್ಕೆ ಸಾಕಷ್ಟು ಹಣವನ್ನೂ ವ್ಯಯಿಸಬೇಕಾಗಿತ್ತು. ಸಾರಿಗೆ ಇಲಾಖೆ ವಾಹನಗಳ ನೋಂದಣಿ ಜತೆಗೆ ಸಂಬಂಧಿತ ಮಾಲಕರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿದೆ. ಈ ನಂಬರ್‌ಗಳನ್ನು ಸಾರಿಗೆ ಇಲಾಖೆ ಬೆಂಗಳೂರು ಪೊಲೀಸರ ಜತೆ ಹಂಚಿಕೊಳ್ಳುತ್ತದೆ. ಇದನ್ನು ಆಧರಿಸಿ ಯಾವುದೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾದರೆ, ಒಂದೆರಡು ದಿನಗಳಲ್ಲಿಯೇ ಅದರ ಮಾಲಕರಿಗೆ ನೋಟಿಸ್ ಸಂಖ್ಯೆ, ವಾಹನದ ನೋಂದಣಿ ಸಂಖ್ಯೆ, ಸಂಚಾರ ನಿಯಮ ಉಲ್ಲಂಘನೆ ಸ್ವರೂಪ, ದಿನಾಂಕ, ಸಮಯ ಮತ್ತು ದಂಡದ ಮೊತ್ತ ಒಳಗೊಂಡ ಎಸ್‌ಎಂಎಸ್ ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ರವಾನಿಸಲಾಗುತ್ತದೆ. ಪಾವತಿಗೆ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ದಂಡ ಪಾವತಿಯ ಲಿಂಕ್‌ಗಳನ್ನು ಎಸ್‌ಎಂಎಸ್ ಒಳಗೊಂಡಿರುತ್ತದೆ. ಮೂರೂವರೆ ತಿಂಗಳಲ್ಲಿ ಅಂದಾಜು 40.60 ಲಕ್ಷಕ್ಕೂ ಅಧಿಕ ಸಂದೇಶ ಕಳುಹಿಸಲಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.
ಸಂಚಾರ ಜಾಗೃತಿ ಸಂದೇಶ
ವಾಹನ ಸವಾರರಿಗೆ ಕೇವಲ ದಂಡ ಸಂಗ್ರಹಕ್ಕಷ್ಟೇ ಸಂದೇಶ ಕಳುಹಿಸುತ್ತಿಲ್ಲ. ಜತೆಗೆ ಬಿ-ಸೇಫ್ ಎನ್ನುವ ಘೋಷವಾಕ್ಯದಡಿ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಸಂದೇಶ ರವಾನಿಸಲಾಗುತ್ತಿದೆ. ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದು, ಸಿಗ್ನಲ್ ಜಂಪ್ ಮಾಡದಂತೆ ಸೇರಿ ಸೇರಿ ಎಲ್ಲ ಮಾದರಿಯ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ವಾಹನ ಸವಾರರಲ್ಲಿ ಎಲ್ಲ ಮಾರ್ಗಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಫೆಬ್ರವರಿಯಿಂದ ಇದುವರೆಗೂ ಎರಡು ಕೋಟಿಗೂ ಅಧಿಕ ಜಾಗೃತಿ ಸಂದೇಶ ಕಳುಹಿಸಲಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.
ಎಸ್‌ಎಂಎಸ್ ಮೂಲಕ ಕೇವಲ ಸಂಚಾರ ನಿಯಮ ಉಲ್ಲಂಘನೆ, ದಂಡ ಪಾವತಿಗೆ ಸೂಚಿಸುವುದಿಲ್ಲ. ಜತೆಗೆ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಹಾಗೂ ಇತರೆ ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಸ್‌ಎಂಎಸ್‌ನಿಂದ ವಾಹನ ಮಾಲಕರು ಎಚ್ಚೆತ್ತುಕೊಂಡು ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲಿ¨ªಾರೆ. ಅದರಿಂದ ಮುಂದಿನ ದಿನಗಳಲ್ಲಿ ಅಪಘಾತಗಳ ಪ್ರಮಾಣ ಕಡಿಮೆಯಾಗುವ ವಿಶ್ವಾಸವಿದೆ.
-ಡಾ| ಬಿ.ಆರ್. ರವಿಕಾಂತೇಗೌಡ,
ಸಂಚಾರ ವಿಭಾಗದ ಜಂಟಿ ಆಯುಕ್ತರು
– ಮೋಹನ್ ಭದ್ರಾವತಿ