Advertisement

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ; ನಿಯಂತ್ರಣಕ್ಕೆ  ವಿಶೇಷ ತಂಡ

12:08 PM Jun 03, 2017 | Harsha Rao |

ಮಂಗಳೂರು: ವಿಶ್ವ ತಂಬಾಕು ರಹಿತ ದಿನವನ್ನು ಮೇ 31ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಅಥವಾ ವ್ಯಾಪಾರಿಗಳು ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಲಾಗುವುದಾಗಿ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮತ್ತು ತಂಬಾಕು ನಿಯಂತ್ರಣ ಕಾರ್ಯಕ್ರಮಾಧಿಕಾರಿಯಾದ ಡಾ| ರಾಜೇಶ್‌ ಬಿ.ವಿ. ಅವರು ತಿಳಿಸಿದ್ದಾರೆ.

Advertisement

ಈ ಕಾಯ್ದೆಯಲ್ಲಿನ ಕಲಂ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಗೆ 200 ರೂ.ವರೆಗೆ ದಂಡ ವಿಧಿಸಲಾಗುವುದು ಮತ್ತು ಕಲಂ 6ಎ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಕಲಂ 6ಬಿ ಪ್ರಕಾರ ಶಾಲಾ ಕಾಲೇಜಿನ ಸುತ್ತಮುತ್ತ 100 ಗಜಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದರೆ ಅಂಗಡಿ ಮಾಲಕರಿಗೆ ಅಥವಾ ವ್ಯವಸ್ಥಾಪಕರಿಗೆ 200 ರೂ.ವರೆಗೆ ದಂಡ ವಿಧಿಸಲಾಗುವುದು. ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಜಾಹಿರಾತು, ಉತ್ತೇಜನ ಮತ್ತು ಪ್ರಾಯೋಜಕತ್ವವನ್ನು ಕಲಂ 5ರ ಪ್ರಕಾರ ಉಲ್ಲಂಘನೆ ಮಾಡಿದವರಿಗೆ ಮತ್ತು ಕಲಂ 7 ರ ಪ್ರಕಾರ ತಂಬಾಕು ಪೊಟ್ಟಣಗಳ ಮೇಲೆ ನಿರ್ದಿಷ್ಟಿತ ಚಿತ್ರಾತ್ಮಕ ಆರೋಗ್ಯ ಚಿಹ್ನೆಗಳ ಮುದ್ರಣದಲ್ಲಿ ಏರುಪೇರಾದಲ್ಲಿ ಅಥವಾ ಮುದ್ರಣವಿಲ್ಲದಿದ್ದಲ್ಲಿ, ಇಂತಹ ಉಲ್ಲಂಘನೆಗಳಿಗೆ ಸಂಬಂಧಪಟ್ಟವರ ವಿರುದ್ಧ ಪ್ರಥಮ ಮಾಹಿತಿ ಆಧಾರದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು.

ಸಾರ್ವಜನಿಕರು ಮತ್ತು ಅಂಗಡಿ ಮಾಲಕರು ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾನೂನು ಪಾಲನೆ ಮಾಡುವ ಮೂಲಕ ವ್ಯವಸ್ಥೆಯೊಂದಿಗೆ ಸಹಕರಿಸಬೇಕು. ಇದೇ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಲ್ಲೆಯಾದ್ಯಂತ ವಿಶೇಷ ತಂಡಗಳ ಮೂಲಕ ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನವನ್ನು ಬಲಪಡಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next