ಹೊಸದಿಲ್ಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸ್ಟೀವನ್ ಸ್ಮಿತ್ ಅವರು ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ಅಜಿಂಕ್ಯ ರಹಾನೆ ಅವರನ್ನು ನಾಯಕರನ್ನಾಗಿ ಹೆಸರಿಸಲಾಗಿದೆ. ಹಗರಣದಿಂದಾಗಿ ಆಸ್ಟ್ರೇಲಿಯದ ನಾಯಕನ ಗೌರವ, ಹಿರಿಮೆಗೆ ದೊಡ್ಡ ಪೆಟ್ಟು ಬಿದ್ದಿದೆ. ಸ್ಮಿತ್ ಅವರ ಬದಲಿಗೆ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ನಾಯಕತ್ವದಿಂದ ಕೆಳಗಿಳಿದರೂ ಸ್ಮಿತ್ ಅವರು ಫ್ರಾಂಚೈಸಿಯ ಅಂಗವಾಗಿ ಉಳಿಯಲಿದ್ದಾರೆ. ಐಪಿಎಲ್ ಎ. 7ರಿಂದ ಮುಂಬಯಿಯಲ್ಲಿ ಆರಂಭ ವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಹಿತದೃಷ್ಟಿಯಿಂದ ನಾಯಕತ್ವದಿಂದ ಕೆಳಗಿಳಿಯುವುದನ್ನು ಸ್ಮಿತ್ ಒಪ್ಪಿಕೊಳ್ಳಬಹುದು. ಈ ಮೂಲಕ ಯಾವುದೇ ಗೊಂದಲವಿಲ್ಲದೇ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು. ತನ್ನ ಮೇಲಿಟ್ಟಿರುವ ನಿರಂತರ ಬೆಂಬಲಕ್ಕೆ ಸ್ಮಿತ್ ಅವರು ಭಾರತದಲ್ಲಿರುವ ಅಭಿಮಾನಿಗಳು ಮತ್ತು ಬಿಸಿಸಿಐ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ರಾಯಲ್ಸ್ ತಂಡದ ಕ್ರಿಕೆಟ್ ಮುಖ್ಯಸ್ಥ ಜುಬಿನ್ ಬರುಚ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯದ ಕ್ರೀಡಾ ಪಾಳಯದಲ್ಲಿ ಈ ಪ್ರಕರಣ ಬಿರುಗಾಳಿ ಎಬ್ಬಿಸಿದ ಕಾರಣ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಸಹಿತ ಕೆಲವು ಹಿರಿಯ ಆಟಗಾರರ ವಿರುದ್ಧ ಕಠಿನ ಕ್ರಮಕೈಗೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯ ನಿರ್ಧರಿಸಿದ್ದರಿಂದ ರಾಜಸ್ಥಾನ್ ರಾಯಲ್ಸ್ ಸ್ಮಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಿತ್ತು.
ವಿಪರ್ಯಾಸವೆಂದರೆ ರಾಜಸ್ಥಾನ್ ರಾಯಲ್ಸ್ ಕೂಡ 2013ರ ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಿಷೇಧದ ಬಳಿಕ ಈ ವರ್ಷ ಐಪಿಎಲ್‌ಗೆ ಮರಳಿತ್ತು. ರಾಯಲ್ಸ್ ಮೆಂಟರ್ ಮತ್ತು ಮಾಜಿ ನಾಯಕ ಶೇನ್ ವಾರ್ನ್ ಸದ್ಯ ಕೇಪ್‌ಟೌನ್‌ನಲ್ಲಿದ್ದು ರಾಯಲ್ಸ್‌ನ ಈ ನಿರ್ಧಾರದ ಬಗ್ಗೆ ಸ್ಮಿತ್ ಜತೆ ಮಾತನಾಡಿದ್ದಾರೆ.
ನೂತನ ನಾಯಕ ಅಜಿಂಕ್ಯ ರಹಾನೆ ಬಗ್ಗೆ ಮಾತನಾಡಿದ ಬರುಚ ಅವರೊಬ್ಬ ನಮ್ಮ ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ನಮ್ಮ ತಂಡದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅರಿತಿದ್ದಾರೆ. ಅವರೊಬ್ಬ ರಾಯಲ್ಸ್ ತಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.