ದುಬೈ: ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಅವರು ಆಸೀಸ್ ಕ್ರಿಕೆಟ್ ತಂಡದ ವಿರುದ್ಧ ಗರಂ ಆಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಸೀಸ್ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ ಬಳಿಕ ವಾರ್ನ್ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ 20 ಓವರ್ ಗಳಲ್ಲಿ ಕೇವಲ 125 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಜೋಸ್ ಬಟ್ಲರ್ ಸ್ಪೋಟಕ ಬ್ಯಾಟಿಂಗ್ ನಡೆಸಿ ನೆರವಾಗಿದ್ದರು. ಕೇವಲ 11.4 ಓವರ್ ಗಲ್ಲಿ ಎರಡು ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತು. ಬಟ್ಲರ್ ಕೇವಲ 32 ಎಸೆತಗಳಲ್ಲಿ 71 ರನ್ ಗಳಿಸಿದರು.
ಇದನ್ನೂ ಓದಿ:ಕಿವೀಸ್ ಸವಾಲು ಎದುರಿಸಲು ಟೀಂ ಇಂಡಿಯಾ ಸಜ್ಜು: ಪ್ಲೇಯಿಂಗ್ ಇಲೆವೆನ್ ಆಯ್ಕೆಯೇ ಮುಖ್ಯ
ಆಸೀಸ್ ತಂಡದ ಆಯ್ಕೆಯ ಬಗ್ಗೆ ವಾರ್ನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಆಟಗಾರ ಸ್ವೀಟ್ ಸ್ಮಿತ್ ಗೆ ತಂಡದಲ್ಲಿ ಜಾಗ ನೀಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ. ಪಂದ್ಯದಲ್ಲಿ ಸ್ಮಿತ್ ಐದು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿದ್ದರು.
“ ಆಸೀಸ್ ತಂಡದ ಆಯ್ಕೆ ಕಂಡು ಬೇಸರವಾಯಿತು. ಮಾರ್ಶ್ ನನ್ನು ತಂಡದಿಂದ ಕೈಬಿಟ್ಟಿದ್ದು, ಗ್ಲೆನ್ ಮ್ಯಾಕ್ಸ ವೆಲ್ ಪವರ್ ಪ್ಲೇ ನಲ್ಲಿ ಬಂದರು. ಮ್ಯಾಕ್ಸ್ ವೆಲ್ ಯಾವತ್ತೂ ಪವರ್ ಪ್ಲೇ ಬಳಿಕವೇ ಆಡಲು ಬರಬೇಕು. ಆಸೀಸ್ ತಂಡದಿಂದ ಕಳಪೆ ರಣತಂತ್ರ. ನಾನು ಸ್ಟೀವ್ ಸ್ಮಿತ್ ರನ್ನು ಇಷ್ಟಪಡುತ್ತೇನೆ, ಆದರೆ ಟಿ20 ತಂಡದಲ್ಲಿ ಅವರಿರಬಾರದು, ಬದಲು ಮಾರ್ಶ್ ಇರಬೇಕಾಗಿತ್ತು” ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.