Advertisement

ಉಸಿರಿನ ಪರಿಮಳ ಹೀರಿಕೋ ಬಾ…

01:07 PM May 16, 2017 | Harsha Rao |

ಹಾಯ್ ಹುಡ್ಗ…
ಯಾಕೋ ಈಗೀಗ ಬದುಕಿನ ಲೌಕಿಕ ಮಾನದಂಡದಲ್ಲಿ ಪ್ರೀತಿಯು ಅಶಾಶ್ವತ ಎನಿಸಿಬಿಟ್ಟಿದೆ. ಕಲ್ಲು ಕರಗಿದರೆ ಕಲ್ಲಿಗೆ ಬೆಲೆ ಎಲ್ಲಿ? ಪ್ರೀತಿಯು ಪರಿವರ್ತನೆಯ ಸಂಕಟಕ್ಕೆ ಸಿಲುಕಿದಾಗ ಪ್ರೀತಿಗೆ ಜೀವವೆಲ್ಲಿ? ಮೇಲೆÇÉೋ ಕೂತ ಮಹಾರಾಜನೊಬ್ಬ ಅದಾಗಲೇ ಬದುಕಿನ ಸಾಗುವಳಿಯನ್ನು ಬರೆದಿರುವಾಗ “ನನ್ನದೇನಿಲ್ಲ’ ಎನ್ನುವುದು ನಿನ್ನ ನಿಲುವು. ಅದರಲ್ಲಿ ನಾನು ನಿನ್ನ ಪುಸ್ತಕದ ಒಂದು ಪುಟ ಎಂದು ದೂರಾಗಿಸಿ ಸೋತೆಯಲ್ಲ. ನನ್ನ ಹಣೆಬರಹವನ್ನು ಬೇರೆ ಯಾರು ಕೆತ್ತುವರು? ನನ್ನ ಬದುಕನ್ನ, ನನ್ನ ಕನಸುಗಳನ್ನ ನಾನೇ ನನಸಾಗಿಸಿಕೊಂಡು, ನೆಮ್ಮದಿ ಜೀವನ ಸಾಗಿಸಬೇಕೆಂಬ ಕ್ರಾಂತಿಕಾರಿ ನಿಲುವು ನನ್ನದು. ಇಬ್ಬರದು ವಿಭಿನ್ನ ನಿಲುವುಗಳು ಬದಲಾಗುವುದಿಲ್ಲ. ಏಕೆಂದರೆ, ಅವರವರ ಅನುಭವದ ಸರಣಿಯ ಮೇಲೆ ನಮ್ಮ ತತ್ವ, ನಿಲುವುಗಳು ಹೆಣೆಯಲ್ಪಟ್ಟಿರುತ್ತವೆ.

Advertisement

ಸಸ್ಯಸಂಕುಲದಲ್ಲಿ ಬೇರೂರಿದವ, ಮಾಂಸಾಹಾರ ಸೇವನೆ ತಪ್ಪೆನ್ನುತ್ತಾನೆ. ಬೀಜ ಹುಟ್ಟದ ಮರುಭೂಮಿಯಲ್ಲಿ ಮಾಂಸಾಹಾರ ತಿನ್ನುವವನಿಗೆ ಅದು ಅನಿವಾರ್ಯ. ಇಬ್ಬರ ಪಾಡುಗಳು ಅವರ ಸಂಕಷ್ಟಗಳು ಅವರ ಸಂದಿಗ್ಧತೆಯ ಮೇಲೆ ಅವಲಂಬಿತವಲ್ಲವೇ, ಮರಿ? ಸೇಫ್ ಝೋನ್‌ನಲ್ಲಿ ಆರಾಮಾಗಿ ಕೂತು ಮತ್ತೂಬ್ಬರ ಜೀವನದ ನಿರ್ಧಾರವನ್ನು, ಆಗುಹೋಗುಗಳನ್ನು ತಾಳೆ ಮಾಡುವುದು ಸುಲಭ ಮತ್ತು ಎಂದಿಗೂ ತಪ್ಪೆಂದು ನನ್ನ ಅಭಿಪ್ರಾಯ. ಹಾಗೆಂದು ಎಲ್ಲಕ್ಕೂ ನೆಪ ಸಲ್ಲದು. ಆದರೆ, ಅದೆಷ್ಟು ನೀರಸವಾಗಿ, ಸುಲಭವಾಗಿ ನನ್ನ ಬಿಟ್ಟುಕೊಟ್ಟೆಯೋ ಗೆಳೆಯಾ? ನಿನ್ನದು ಭಾವರಸವಿಲ್ಲದ ಹೃದಯ ಎಂಬುದು ನನ್ನ ಶಂಕೆ. ಪ್ರೀತಿಯೆಂಬುದು ಬದುಕಿನ ಭಾಗ. ಅದು ಹೃದಯದ ಸ್ವರ. ಉಸಿರಿನ ಪರಿಮಳ. ಬದುಕಿನ ಎಲ್ಲ ಪುಟಗಳ ಸಾಲಿನಲ್ಲಿ ಅನುರಾಗ ಕಂಡಾಗಲಷ್ಟೇ ನಾವು ಪ್ರೇಮಿಗಳಾಗಲು ಸಾಧ್ಯ.

ಏಳೇಳು ಜನ್ಮಕ್ಕೂ ನಿನ್ನೆದೆಯಲ್ಲಿ ಹೂತು ಹೋಗುವ ಹೆಬ್ಬಯಕೆ ನನ್ನದು. ಪುಟ್ಟ ಮಗು ತನ್ನ ಗೊಂಬೆ ರಾಶಿಗಳ ಕಸಿಯಲು ಬರುವವರ ವಿರುದ್ಧ ಅಳುತ್ತಾ ಕಿರುಚುತ್ತಾ, ರೋಧಿಸುತ್ತಾ ಗೊಂಬೆಗಳೆಲ್ಲ ತನ್ನವೇ ಎಂಬಂತೆ ತನ್ನೆರಡೂ ಕೈಗಳಿಂದ ತಬ್ಬಿ ಹಿಡಿಯುತ್ತಲ್ಲ, ಹಾಗೆ ನಿನ್ನ ಕನಸಿನ ರಾಶಿಗಳು ನನ್ನದೇ ಎಂಬಂತೆ ಬಾಚಿ ತಬ್ಬಿರುವೆ. ಒಂದೊಂದು ಭಾವಕ್ಕೆ ಒಂದೊಂದು ಬಣ್ಣವಿದೆ ಚೆಲುವ. ಆದರೆ, ಇಲ್ಲಿ ಜೀವದ ನಾದವನ್ನೇ ಕಸಿಯುತ್ತಿರುವ ವಿಧಿಗೆ ಕರುಣೆ ಎಲ್ಲಿ? ಜೀವದ ಒಲವೇ, ನೀನಾದರೂ ಹೇಳು ನಾ ಮಾಡಿದ ತಪ್ಪಾದರೂ ಏನು? ಏಕೀ ಘೋರ ಶಿಕ್ಷೆ? ನಿನ್ನ ನಿರ್ಧಾರವನ್ನು ನಾನೆಂದೂ ವಿರೋಧಿಸೋದಿಲ್ಲ ಗೆಳೆಯಾ. ಆದರೆ, ಒಸರುತ್ತಿರುವ ಕೊನೆಯಿಲ್ಲದ ನೀಲಿ ಗಗನದ ಕಣ್ಣೀರನ್ನೊಮ್ಮೆ ಒರೆಸಲು ಬಾ.

ಇಂತಿ ನಿನ್ನ ಮಲ್ಲಿಗೆ

Advertisement

Udayavani is now on Telegram. Click here to join our channel and stay updated with the latest news.

Next