Advertisement

ಕಾಮಗಾರಿಗೆ ಸಂದಿಸದಿದ್ರೆ ಕೇಸ್‌

12:47 PM Nov 21, 2020 | Suhan S |

ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವು ಗುತ್ತಿಗದಾರ‌ರು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದು ಅಂತಹ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಹೇಳಿದರು.

Advertisement

ಶುಕ್ರವಾರ ನಗರದ ಹಲವೆಡೆಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿಕಾರಿಗಳಿಗೆ ಸೂಚನೆ: ನಮಗೆ ಸಾರ್ವಜನಿಕರ ಹಿತಾಸಕ್ತಿ ಮುಖ್ಯ. ಆ ಹಿನ್ನೆಲೆಯಲ್ಲಿ ಕಾಮಗಾರಿ ಸಂಬಂಧ ಸ್ಪಂದಿಸಿದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಿಎಂರಿಂದ ಲೋಕಾರ್ಪಣೆ: ರಾಜಭವನ ರಸ್ತೆ ಸೇರಿದಂತೆ ಸುಮಾರು ಹದಿನಾರು ರಸ್ತೆಗಳ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ವಿಧಾನ ಮಂಡಲದ ಅಧಿವೇಶನ ಆರಂಭಕ್ಕೂ ಮೊದಲು ಕಾಮಗಾರಿ ಸಂಪೂರ್ಣ ಮುಗಿಯಲಿದ್ದು ಬಳಿಕ ಮುಖ್ಯಮಂತ್ರಿಗಳು ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಭರವಸೆ ನೀಡಿದರು.

1 ಸಾವಿರ ಕೋಟಿ ರೂ.ಅನುದಾನ: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 1 ಸಾವಿರ ಕೋಟಿ ರೂ.ಅನುದಾನ ದೊರೆತಿದೆ. ಮೊದಲ ಹಂತದ ಕಾಮಗಾರಿಗಳಿಗೆ 271 ಕೋಟಿ ರೂ. ಮತ್ತು 2ನೇ ಹಂತದಲ್ಲಿ ಕೈಗೊಳ್ಳುವ ಕಾಮಗಾರಿಗೆ 210 ಕೋಟಿ ರೂ.ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಸಿಎಂ ಅಧ್ಯಕ್ಷತೆಯಲ್ಲಿ ಸಭೆ: ಸ್ಮಾರ್ಟ್‌ಸಿಟಿ ಕಾರ್ಯಗತಕ್ಕೆ ಸಂಬಂಧಿಸಿದಂತೆ ಜಲಮಂಡಳಿ ಮತ್ತು ಬೆಸ್ಕಾಂ ಇಲಾಖೆಯೊಂದಿಗೆ ಸಮನ್ವಯತೆಯ ಕೊರತೆ ಎದುರಾಗಿದೆ. ಹೀಗಾಗಿ ಸ್ಮಾರ್ಟ್‌ ಸಿಟಿ ಯೋಜನೆ ವೇಗದ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೆ ಉನ್ನತಾಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದಾಗಿ ಸಚಿವ ಭೈರತಿ ಬಸವರಾಜ್‌ ಹೇಳಿದರು.

ಕಳಪೆ ಕಾಮಗಾರಿ ಕಂಡು ಬಂದ್ರೆ ಕ್ರಮ: ಕೋವಿಡ್‌ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಕಾರ್ಯಕ್ಕೆ ಅಡತೆಡೆ ಉಂಟಾಗಿತ್ತು. ಕಾರ್ಮಿಕರಿಲ್ಲ ಸಮಸ್ಯೆ ಎದುರಾಗಿತ್ತು. ಆದರೆ ಈಗ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಕೆಲಸ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲಸದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ.

ಜತೆಗೆ ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಇರುವಂತೆ ತಾಕೀತು ಮಾಡಲಾಗಿದೆ. ಕಾಮಗಾರಿ ಕಳಪೆ ಕಂಡು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಚ್ಚರಿಸಿದರು.

ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಮುಖ್ಯ ಅಭಿಯಂತರ ರಂಗನಾಥ್‌ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ಲಾನೆಟೋರಿಯಂ ಅಭಿವೃದ್ಧಿಗೆ 30 ಕೋಟಿ ರೂ. ಮೀಸಲು :  ಕೋವಿಡ್‌ ಕಾರ್ಯಕ್ಕೆ 30 ಕೋಟಿರೂ. ನೀಡಲಾಗಿದೆ. ಹಾಗೆಯೇ ಪ್ಲಾನಿಟೋರಿಯಂ ಅಭಿವೃದ್ಧಿಗಾಗಿ 30 ಕೋಟಿರೂ. ಮೀಸಲಿಡಲಾಗಿದೆ.ಮುಂದಿನ ದಿನಗಳಲ್ಲಿ ಕೆ.ಆರ್‌.ಮಾರುಕಟ್ಟೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಸ್ಮಾರ್ಟ್‌ ಸಿಟಿ ಯೋಜನೆ ಮೂಲಕ ನಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಹೇಳಿದರು.

ಎಲೆಲ್ಲಿ ಕಾಮಗಾರಿ ವೀಕ್ಷಣೆ  :  ನೆಹರು ತಾರಾಲಯ ರಸ್ತೆ, ರಾಜಭವನ ರಸ್ತೆ, ರೇಸ್‌ಕೋರ್ಸ್‌ ರಸ್ತೆ,ಕಮರ್ಷಿಯಲ್‌ ಸ್ಟ್ರೀಟ್‌,ಇನ್ಫೆಂಟ್ರಿ ರಸ್ತೆ, ಡಿಕನ್‌ಸನ್‌ ರಸ್ತೆ, ಕಾಮರಾಜರಸ್ತೆ,ಹಲಸೂರು,ಲ್ಯಾವೆಲ್ಲಿ ರಸ್ತೆ,ಕ್ವೀನ್ಸ್‌ ರಸ್ತೆ,ಚರ್ಚ್‌ ಸ್ಟ್ರೀಟ್‌ ರಸ್ತೆ, ರಾಜಾರಾಮ್‌ ಮೋಹನ್‌ರಾಯ್‌ ರಸ್ತೆ, ಸೇಂಟ್‌ ಜಾನ್ಸ್‌ ರಸ್ತೆ.

Advertisement

Udayavani is now on Telegram. Click here to join our channel and stay updated with the latest news.

Next