Advertisement
ಈ ಹಿಂದೆ ಎರಡು ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಬೆಂಗಳೂರಿಗೆ ಮತ್ತೂಮ್ಮೆ ಸ್ಮಾರ್ಟ್‌ಸಿಟಿ ಪಟ್ಟಿಗೆ ಸೇರುವ ಅವಕಾಶ ಒದಗಿದೆ. ಆ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಸ್ತಾಪಿಸಲಾಗಿದ್ದ ಮಹದೇವಪುರ ವಲಯದ ಒಂದು ಪ್ರದೇಶವನ್ನು ಕೈಬಿಟ್ಟು, ಕೇಂದ್ರ ಭಾಗದಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳುವುದಾಗಿ ವರದಿ ಸಿದ್ಧಪಡಿಸಿದೆ.
Related Articles
Advertisement
ಕೇಂದ್ರ ಭಾಗವನ್ನೇ ಆಯ್ಕೆ ಮಾಡಿದ್ದು ಏಕೆ?: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ದೇಶದ ಪ್ರಮುಖ ನಗರಗಳನ್ನು ಗಮನಿಸಿದಾಗ ಪ್ರಮುಖವಾಗಿ ಅವರು ಕೇಂದ್ರ ಭಾಗದಲ್ಲಿಯೇ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಕೇಂದ್ರ ಭಾಗದಲ್ಲಿ ಸ್ಮಾರ್ಟ್‌ಸಿಟಿ ಆಗುವುದರಿಂದ ನಗರದ ಎಲ್ಲ ಭಾಗದ ಜನರಿಗೆ ಅನುಕೂಲವಾಗಲಿದೆ.
ಹೊರವಲಯದಲ್ಲಿ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಆ ಭಾಗದ ಜನರಿಗೆ ಮಾತ್ರ ಅನುಕೂಲವಾಗುತ್ತದೆ. ಹಾಗಾಗಿ ನಗರದ ಕೇಂದ್ರ ಭಾಗದಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದು ಮಂಜುನಾಥ ಪ್ರಸಾದ್ ವಿವರಣೆ ನೀಡಿದರು.
ಪಾರ್ಕಿಂಗ್ ದಂಧೆಗೆ ಕಡಿವಾಣ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಪಾರ್ಕಿಂಗ್ ದಂಧೆ ತಡೆದು ಶೀಘ್ರ ವಾಹನ ನಿಲುಗಡೆ ನೀತಿ ಜಾರಿಗೊಳಿಸುವ ಮೂಲಕ ಪಾಲಿಕೆಗೆ ಆದಾಯ ತರಲು ಯೋಜನೆ ರೂಪಿಸಬೇಕೆಂದು ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಒತ್ತಾಯಿಸಿದರು. ಸಮರ್ಪಕ ನಿರ್ವಹಣೆ ಹಾಗೂ ವ್ಯವಸ್ಥಿತ ಯೋಜನೆ ರೂಪಿಸಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿದರೆ ಪಾಲಿಕೆಗೆ ಭಾರಿ ಪ್ರಮಾಣದಲ್ಲಿ ಆದಾಯ ಬರುತ್ತದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೇಯರ್ ಜಿ.ಪದ್ಮಾವತಿ, ಅಕ್ರಮ ಪಾರ್ಕಿಂಗ್ ದಂಧೆ ನಿಯಂತ್ರಿಸಲು ವಾಹನ ನಿಲುಗಡೆ ನೀತಿ ಜಾರಿ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. ಈ ಹಿಂದೆ ಕೆಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ಶುಲ್ಕ ವಸೂಲಿಗೆ ಗುತ್ತಿಗೆ ಪಡೆದವರ ಅವಧಿ ಪೂರ್ಣಗೊಂಡಿದ್ದರೂ, ಮರು ಟೆಂಡರ್ ಮಾಡಿಲ್ಲ. ಅಲ್ಲದೆ, ಹೀಗೆ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಈ ಕೂಡಲೆ ಅನಧಿಕೃತ ಶುಲ್ಕ ವಸೂಲಿಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು. ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿಯ ಉಮೇಶ್ ಶೆಟ್ಟಿ,ನಗರದಲ್ಲಿ ಅನಧಿಕೃತ ಪಾರ್ಕಿಂಗ್ ಸಂಗ್ರಹ ಮಾಡುವ ದಂಧೆ ಹೆಚ್ಚುತ್ತಿದೆ. ವಿಜಯನಗರದಿಂದ ಪಶ್ಚಿಮ ಕಾರ್ಡ್ ರಸ್ತೆವರೆಗಿನ ಬುಲೆವಾರ್ಡ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಹನ ಸವಾರರಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದು ದೂರಿದರು. ಬಿಬಿಎಂಪಿಯಿಂದ ಅನುಮತಿ ಪಡೆಯದೆ ವಾಹನ ನಿಲುಗಡೆಗೆ ಹಣ ಸಂಗ್ರಹಿಸಲಾಗುತ್ತಿದ್ದು, ಹೀಗೆಯೇ ಮುಂದುವರಿದರೆ ಮೆಟ್ರೋ ಸಂಪರ್ಕವಿರು ಎಲ್ಲ ಕಡೆಗಳಲ್ಲಿ ಅನಧಿಕೃತ ಪಾರ್ಕಿಂಗ್ ಜಾಲ ಹೆಚ್ಚಲಿದೆ ಎಂದು ದೂರಿದರು. ಸಭೆಗೆ ಬಾರದ ಪುರಪಿತೃಗಳು; ಸಭಾಂಗಣ ಖಾಲಿ ಖಾಲಿ
ಬಜೆಟ್ ಮೇಲಿನ ಚರ್ಚೆಗಾಗಿ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸಭೆ ಆರಂಭವಾದಾಗ ಒಟ್ಟು ಸದಸ್ಯರ ಸಂಖ್ಯೆ 30 ದಾಟಿರಲಿಲ್ಲ. ಯುಗಾದಿ ಹಬ್ಬದ ಮರು ದಿನ ಹೊಸತಡಕು ಆಚರಣೆ ಪರಿಣಾಮ ಪಾಲಿಕೆ ಸಭೆಯ ಮೇಲೂ ಬೀರಿತ್ತು. ಬೆಳಗ್ಗೆ 10.30ಕ್ಕೆ ಸಭೆ ಕರೆಯಲಾಗಿತ್ತು. ಸಮಯ 11.30 ಆದರೂ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಹಾಜರಿದ್ದರು. ಸಭೆಯ ಆರಂಭದಲ್ಲಿ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಬಜೆಟ್ ಮೇಲಿನ ಚರ್ಚೆ ಆರಂಭಿಸಿದಾಗ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಕ್ರಿಯಾ ಲೋಪ ಎತ್ತಿ ಮೂರನೇ ಒಂದರಷ್ಟು ಸದಸ್ಯರು ಹಾಜರಿರಬೇಕು ಎಂದಿದೆ. ಸಭೆಯಲ್ಲಿ ಅಷ್ಟು ಸದಸ್ಯರಿಲ್ಲದಿದ್ದಾಗ ಸಭೆ ಹೇಗೆ ನಡೆಸಲಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮೇಯರ್ ಉತ್ತರಿಸಿ, ಇದು ಮುಂದುವರೆದ ಸಭೆಯಾಗಿದ್ದು, ಕಳೆದ ಮೂರು ದಿನಗಳಿಂದ ಸಭೆ ನಡೆಯುತ್ತಿದೆ. ಒಬ್ಬೊರಾಗಿ ಬಂದು ಸೇರ್ಪಡೆಯಾಗುತ್ತಾರೆ. ಸಭೆ ನಡೆಸೋಣ ಇದಕ್ಕೆ ಆಕ್ಷೇಪ ಏಕೆ ಎಂದು ಹೇಳಿದರು. ಇದಕ್ಕೆ ಒಪ್ಪದ ಪದ್ಮನಾಭರೆಡ್ಡಿ, ಕೋರಂ ಕೊರತೆ ಇದ್ದರೂ ಸಭೆಯನ್ನು ನಡೆಸಬಹುದು ಎಂದು ಆಯುಕ್ತರು ತಿಳಿಸಲಿ ಎಂದು ಆಗ್ರಹಿಸಿದರು. ಆದರೆ, ಇದಕ್ಕೆ ಆಯುಕ್ತರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮುಗುಳ್ನಕ್ಕರು. ಆದರೆ, ಮಧ್ಯಾಹ್ನದವರೆಗೆ ಸಭೆ ನಡೆದರೂ ಶೇ.50ರಷ್ಟು ಸದಸ್ಯರೂ ಹಾಜರಾಗಿರಲಿಲ್ಲ. ಪೌರವಾಹಿನಿ ಸಮಿತಿ ರಚನೆಗೆ ಆಕ್ಷೇಪ
ಬಿಬಿಎಂಪಿ ಕೌನ್ಸಿಲ್ ಸಭೆಯ ನಿರ್ಣಯಗಳು ಮತ್ತು ಸರ್ಕಾರದ ಮಟ್ಟದಿಂದ ಪಾಲಿಕೆಗೆ ಆಗಬೇಕಾದ ಕಾರ್ಯಕ್ರಮಗಳ ಪ್ರಗತಿ ಯನ್ನು ತಿಳಿದುಕೊಳ್ಳಲು ಈಗಾಗಲೇ ಪಾಲಿಕೆಯಲ್ಲಿ ಆಡಳಿತ ಸಮಿತಿ ಇದೆ. ಮತ್ತೆ ಹೊಸ ಪೌರವಾಹಿನಿ ತಂಡದ ರಚನೆ ಬೇಕಾಗಿಲ್ಲ ಎಂದು ಮಾಜಿ ಮೇಯರ್ ಬಿ.ಎಸ್.ಸತ್ಯನಾರಾಯಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಜಾರಿಯಾಗಬೇಕಾದ ಕಾರ್ಯಕ್ರಮಗಳ ಸ್ಥಿತಿಗತಿ ತಿಳಿಯುವ ಸಲುವಾಗಿಯೇ ಆಡಳಿತ ಸಮಿತಿಯನ್ನು ರಚನೆ ಮಾಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ನಗರಾಭಿವೃದ್ಧಿ ಇಲಾಖೆಗೆ ತೆರಳಿ ಪಾಲಿಕೆಯಿಂದ ಬಂದ ನಿರ್ಣಯಗಳ ಕಡತಗಳು ಯಾವ ಹಂತದಲ್ಲಿವೆ ಎಂಬ ಮಾಹಿತಿ ಸಂಗ್ರಹಿಸುವುದು ಈ ಸಮಿತಿಯ ಕೆಲಸವಾಗಿದೆ. ಹೀಗಿರುವಾಗ ಹೊಸ ಪೌರವಾಹಿನಿ ತಂಡ ರಚಿಸುವ ಅಗತ್ಯವಿಲ್ಲ. ಹೀಗಾಗಿ ಸಮಿತಿ ರಚನೆ ಕೈಬಿಟ್ಟು ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು. ಪಾಲಿಕೆಗೆ ಆದಾಯ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ನಗರದ ಹೃದಯ ಭಾಗದಲ್ಲಿರುವ ಕೆ.ಆರ್.ಮಾರುಕಟ್ಟೆಯನ್ನು ಕೆಲವರು ಅತಿಕ್ರಮಿಸಿಕೊಂಡು ಪಾಲಿಕೆಗೆ ಬರಬೇಕಾದ ಆದಾಯವನ್ನು ಕಬಳಿಸುತ್ತಿದ್ದಾರೆ. ಕೆ.ಆರ್.ಮಾರಕಟ್ಟೆಯಲ್ಲಿ ಹಲವು ಮಳಿಗೆಗಳು ವರ್ಷಗಳಿಂದ ಖಾಲಿಯಾಗಿ ಉಳಿದಿವೆ. ಅವುಗಳನ್ನು ಬಾಡಿಗೆಗೆ ನೀಡಿದರೆ ಪಾಲಿಕೆಗೆ ಕೋಟ್ಯಂತರ ಆದಾಯ ಬರುತ್ತದೆ. ಆದರೆ, ಪಾಲಿಕೆಯ ಆಸ್ತಿಗಳಲ್ಲಿ ಹತ್ತಾರು ಹಾವುಗಳು ಸೇರಿಕೊಳ್ಳುತ್ತಿದ್ದು, ಅವುಗಳನ್ನು ಹೊರಗೆ ಹಾಕುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಸೂಚ್ಯವಾಗಿ ದೂರಿದರು. ಇದೇ ವೇಳೆ ಮಾತನಾಡಿದ ಮಾಜಿ ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ, ನಗರದ ಎಲ್ಲ ಭಾಗಗಳಲ್ಲೂ ಕೊಳೆಗೇರಿ ಪ್ರದೇಶಗಳಿದ್ದು, ಅವು ಕೇವಲ ಹೆಸರಿಗೆ ಮಾತ್ರ ಕೊಳೆಗೇರಿಗಳಾಗಿವೆ. ಪ್ರತಿವರ್ಷ ಕೊಳೆಗೇರಿಗಳಿಗೆ ಪಾಲಿಕೆಯಿಂದ ಹಲವು ಸೌಲಭ್ಯಗಳನ್ನು ನೀಡಲು ಕೋಟ್ಯಂತರ ವೆಚ್ಚ ಮಾಡಲಾಗುತ್ತಿದ್ದು, ಅಂತಹ ಪ್ರದೇಶಗಳಿಂದ ಪಾಲಿಕೆಗೆ ಆದಾಯ ಬರುತ್ತಿಲ್ಲ. ಹೀಗಾಗಿ ಕೊಳೆಗೇರಿ ಗಳಲ್ಲಿರುವ ಮನೆಗಳಿಗೆ ಖಾತಾ ನೀಡಿದರೆ ಪಾಲಿಕೆಗೆ ಆದಾಯ ಬರುತ್ತದೆ ಎಂದು ಪ್ರತಿಪಾದಿಸಿದರು. ಕಂದಾಯ ಅಧಿಕಾರಿಗಳು ಶೃಂಗೇರಿ ಮೀನುಗಳಂತೆ!
ಬಜೆಟ್ ಮೇಲಿನ ಚರ್ಚೆಯ ವೇಳೆ ಪಾಲಿಕೆ ಸದಸ್ಯ ಲಕ್ಷ್ಮೀನಾರಾಯಣ, “ಪಾಲಿಕೆಯ ಕಂದಾಯ ಅಧಿಕಾರಿಗಳು ಶೃಂಗೇರಿಯ ಮೀನುಗಳಿದ್ದಂತೆ. ಶೃಂಗೇರಿಯಲ್ಲಿ ಪ್ರವಾಸಿಗರು ಕಡ್ಲೆಪುರಿ ಹಾಕಿದಾಗ ಮೀನುಗಳು ಮೇಲೆ ಬರುತ್ತವೆ. ಆದರೆ, ಅವು ಬರಿಕೈಗೆ ಸಿಗುವುದಿಲ್ಲ. ಹಾಗೆಯೇ ನಮ್ಮ ಕಂದಾಯ ಅಧಿಕಾರಿಗಳು. ಹೀಗಾಗಿ ಮೀನುಗಳಿಗೆ ಬಲೆ ಹಾಕು ವಂತೆ ಅಧಿಕಾರಿಗಳಿಗೂ ಬಲೆ ಹಾಕಬೇಕು. ದಿನಕ್ಕೆ ಇಂತಿಷ್ಟು ಮನೆಗಳಿಗೆ ಭೇಟಿ ನೀಡಿ ಆಸ್ತಿ ತೆರಿಗೆ ಸಂಗ್ರಹ ಮಾಡಬೇಕು ಎಂದು ಸೂಚಿಸಬೇಕು,” ಎಂದು ಸಲಹೆ ನೀಡಿದರು. 8 ಕಡೆ ಹೆಲಿಪ್ಯಾಡ್ ನಿರ್ಮಿಸಿ
ನಗರದಲ್ಲಿ ಅತಿ ಗಣ್ಯರು (ವಿವಿಐಪಿ) ಸಂಚರಿಸುವ ವೇಳೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಪಾಲಿಕೆಯ ಎಂಟು ವಲಯಗಳಲ್ಲಿ ಪಾಲಿಕೆಯಿಂದಲೇ ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡುವುದರಿಂದ ಗಣ್ಯರು ಬಂದಾಗ ನಗರದಲ್ಲಿ ಉಂಟಾಗುವ ದಟ್ಟಣೆ ಕಡಿಮೆ ಮಾಡಬಹುದಾಗಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಏರ್ ಆ್ಯಂಬುಲೆನ್ಸ್ ಸೇವೆ ಆರಂಭಿಸಿರುವುದರಿಂದ ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ನ ಸಂಪತ್‌ರಾಜ್ ತಿಳಿಸಿದರು. ಇದೇ ವೇಳೆ ಮಾತನಾಡಿದ ಪದ್ಮನಾಭರೆಡ್ಡಿ, ಈಗಾಗಲೇ ನಗರದಲ್ಲಿ ನೂರಾರು ಕಟ್ಟಡಗಳಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಕಾಪ್ಟರ್‌ಗಳನ್ನು ಇಳಿಸಲು ಅವುಗಳು ಯೋಗ್ಯವೇ ಎಂಬುದನ್ನು ಪರಿಶೀಲನೆ ನಡೆಸದೆ ಅವರಿಗೆ ಸ್ವಾಧೀನಾನುಭವ ಪತ್ರ ನೀಡಲಾಗಿದೆ ಎಂದು ದೂರಿದರು. ಪಿಪಿಪಿ ಮಾದರಿಯಿಂದ ಅನುಕೂಲ
ಸ್ಮಾರ್ಟ್‌ಸಿಟಿಗೆ ಆಯ್ಕೆ ಮಾಡಿಕೊಳ್ಳಲಾಗಿರುವ ಪ್ರದೇಶಗಳಲ್ಲಿ ಸದ್ಯ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿ ಹಲವು ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ. ಹಲಸೂರು ಕೆರೆ ಅಭಿವೃದ್ಧಿ, ಪ್ರಮುಖ ಸ್ಥಳಗಳಲ್ಲಿ ಸ್ಕೈವಾಕ್, ಬಸ್‌ಶೆಲ್ಟರ್‌ಗಳು ಸೇರಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ಅವುಗಳನ್ನು ಸಹ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ಸೇರಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಅನುಕೂಲವಿದೆ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದರು.