Advertisement

ನಗರದ 15 ಜಂಕ್ಷನ್‌ಗಳಲ್ಲಿ “ಸ್ಮಾರ್ಟ್‌ ಸಿಸಿ ಕೆಮರಾ’

12:16 AM Jan 04, 2020 | mahesh |

ಮಹಾನಗರ: ಸ್ಮಾರ್ಟ್‌ಸಿಟಿ ಯೋಜನೆಯತ್ತ ಬದಲಾಗುತ್ತಿರುವ ಮಂಗಳೂರಿನ ಪ್ರತೀ ದಿನದ ಬೆಳವಣಿಗೆಯ ಬಗ್ಗೆ ಹದ್ದಿನ ಕಣ್ಣಿಡಲು ಅನುಕೂಲವಾಗುವ ನೆಲೆಯಲ್ಲಿ ಅತ್ಯುನ್ನತ ಗುಣಮಟ್ಟದ ಸಿಸಿ ಕೆಮರಾಗಳನ್ನು ನಗರದ 15 ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲು ಸಿದ್ಧತೆ ನಡೆಸಲಾಗಿದೆ.

Advertisement

ನಗರದಲ್ಲಿ ನಡೆಯುವ ಕೊಲೆ, ಸುಲಿಗೆ ಸಹಿತ ಇನ್ನಿತರ ಅಪರಾಧಗಳ ರಹಸ್ಯ ಭೇದಿಸುವಲ್ಲಿ ಪೊಲೀಸರಿಗೆ ಅನುಕೂಲವಾಗುವಂತೆ ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದಲ್ಲಿ ನಗರದ 15 ಜಂಕ್ಷನ್‌ಗಳಲ್ಲಿ ಸ್ಮಾರ್ಟ್‌ ಫೋಲ್‌ಗ‌ಳಲ್ಲಿ ಒಟ್ಟು 75 ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಪ್ರತೀ ಜಂಕ್ಷನ್‌ಗಳಲ್ಲಿಯೂ 360 ಡಿಗ್ರಿ ಸುತ್ತ ಸುತ್ತುವ ಕೆಮರಾ ಸಹಿತ ಪ್ರತೀ ಜಂಕ್ಷನ್‌ನ ಒಂದು ಸ್ಮಾರ್ಟ್‌ಫೋಲ್‌ನಲ್ಲಿ ಒಟ್ಟಾರೆ 5 ಕೆಮರಾಗಳು ಇರಲಿವೆ.

ಸಿ.ಸಿ. ಕೆಮರಾ ನಿರ್ವಹಣೆಗೆಂದು ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಮೊದಲ ಮಹಡಿಯಲ್ಲಿ ಕಂಟ್ರೋಲ್‌ ರೂಂ. ಸಿದ್ಧವಾಗಿದೆ. ಉಳಿದಂತೆ ಜಂಕ್ಷನ್‌ಗಳಲ್ಲಿ ಸ್ಮಾರ್ಟ್‌ಫೋಲ್‌ಗ‌ಳನ್ನು ಅಳವಡಿಸು ಕಾರ್ಯ ಬಾಕಿ ಇದ್ದು, ಕೆಲವೇ ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಅಧಿಕಾರಿಗಳು.

ಭದ್ರತೆಯ ದೃಷ್ಟಿಯಿಂದ ನಗರ ಅಪಾರ್ಟ್‌ ಮೆಂಟ್‌, ಬಹು ಮಹಡಿ ಕಟ್ಟಡ, ವಾಣಿಜ್ಯ ಕಟ್ಟಡ ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಸದ್ಯ ಎರಡು ಸಾವಿರಕ್ಕೂ ಮಿಕ್ಕಿ ಸಿಸಿ ಕೆಮರಾಗಳು ಕಣ್ಗಾವಲಿನಲ್ಲಿವೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಹೆಚ್ಚುವರಿ ಸಿಸಿ ಕೆಮರಾಗಳನ್ನು ಇತ್ತೀಚೆಗೆಯಷ್ಟೇ ಅಳವಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಿಸಿ ಕೆಮರಾಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿವೆ.

ಕಾರ್ಯಾಚರಣೆಗೆ ಪೊಲೀಸ್‌ ಇಲಾಖೆ ಸಿದ್ಧ
ಕರ್ನಾಟಕ ರಾಜ್ಯ ಸಾರ್ವಜನಿಕರ ಸುರಕ್ಷಾ ಕಾಯ್ದೆ ಅನ್ವಯ ನಗರದ ಎಲ್ಲ ವಾಣಿಜ್ಯ ಕಟ್ಟಡಗಳು, ಬಸ್‌ ನಿಲ್ದಾಣ, ಶಿಕ್ಷಣ ಸಂಸ್ಥೆಗಳು, ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯ, ಕಚೇರಿಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕೆಂಬ ನಿಯಮವಿದೆ. ಸಾರ್ವಜನಿಕ ಸೇವೆ ಒದಗಿಸುವ ಅಥವಾ ಹೆಚ್ಚು ಜನ ಸೇರುವ ಎಲ್ಲ ಸರಕಾರಿ, ಖಾಸಗಿ ಸಂಘ-ಸಂಸ್ಥೆಗಳು, ಅಂಗಡಿ-ಮುಂಗಟ್ಟು ಕಟ್ಟಡಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸರಕಾರ ಈ ಹಿಂದೆಯೇ ಸೂಚಿಸಿತ್ತು. ನಿಯಮ ಪಾಲನೆ ಮಾಡದವರ ವಿರುದ್ಧ ಪೊಲೀಸ್‌ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದೆ.

Advertisement

75 ಸಿಸಿ ಕೆಮರಾ
ಸ್ಮಾರ್ಟ್‌ಸಿಟಿ ಯೋಜನೆಯ ಮೊದಲನೇ ಹಂತದಲ್ಲಿ ನಗರದ ಪ್ರಮುಖ 15 ಜಂಕ್ಷನ್‌ಗಳಲ್ಲಿ ಒಂದು ಸ್ಮಾರ್ಟ್‌ಫೋಲ್‌ಗ‌ಳಲ್ಲಿ ಐದರಂತೆ 75 ಸಿ.ಸಿ. ಕೆಮರಾಗಳು ಕಣ್ಗಾವಲು ಇರಲಿವೆ. ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆದಿದ್ದು, ಸ್ಮಾರ್ಟ್‌ಫೋಲ್‌ ಅಳವಡಿಸುವ ಕಾರ್ಯ ಮಾತ್ರ ಬಾಕಿ ಇದೆ.
 - ಮಹಮ್ಮದ್‌ ನಜೀರ್‌, ಮಂಗಳೂರು ಸ್ಮಾರ್ಟ್‌ ಸಿಟಿ ನಿರ್ದೇಶಕ

ಯಾವೆಲ್ಲ ಜಂಕ್ಷನ್‌ ?
ಬಿಜೈ ಕೆಎಸ್ಸಾರ್ಟಿಸಿ, ಪಂಪ್‌ವೆಲ್‌, ವಾಮಂಜೂರು, ಪಡೀಲ್‌, ಮಲ್ಲಿಕಟ್ಟೆ, ಬಿಜೈ, ಬೆಂದೂರು, ಫಳ್ನೀರ್‌, ಮೋರ್ಗನ್ಸ್‌ ಗೇಟ್‌, ಕುಲಶೇಖರ ಶಕ್ತಿನಗರ ಕ್ರಾಸ್‌, ಕೊಟ್ಟಾರ ಚೌಕಿ, ಕುಂಟಿಕಾನ, ರಾವ್‌ ಆ್ಯಂಡ್‌ ರಾವ್‌ ವೃತ್ತ, ಪದವಿನಂಗಡಿ, ಕಾವೂರು ಜಂಕ್ಷನ್‌ನಲ್ಲಿ ಸಿಸಿ ಕೆಮರಾ ಅಳವಡಿಸಲು ಸಿದ್ಧತೆ ನಡೆಯುತ್ತಿದೆ.

ಸುರಕ್ಷತೆಗೆ ಆದ್ಯತೆ
ನಗರವನ್ನು ಕಣ್ಗಾವಲಿನಲ್ಲಿಡುವ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಹೆಚ್ಚಿನ ಸಿ.ಸಿ. ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಇನ್ನು, ನಗರದಲ್ಲಿ ಸಾರ್ವ ಜನಿಕ ಸುರಕ್ಷತಾ ನಿಯಮಗಳನ್ನು ಯಾರು ಪಾಲನೆ ಮಾಡುವುದಿಲ್ಲವೋ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
 - ಡಾ| ಪಿ.ಎಸ್‌. ಹರ್ಷಾ, ನಗರ ಪೊಲೀಸ್‌ ಆಯುಕ್ತ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next