ಉಡುಪಿ: ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಉತ್ತೇಜನಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಕೃಷಿಕರ ಬವಣೆ ಹೇಳ ತೀರದು. ಇವರಿಗೆ ನೆರವಾಗಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ (ಪಿಎಂ ಕೆಎಂವೈ) ಎಂಬ ಪಿಂಚಣಿ ಯೋಜನೆ ಯನ್ನು ದೇಶ ಮಟ್ಟದಲ್ಲಿ ಜಾರಿಗೊಳಿಸಿದೆ. ಯೋಜನೆಯು ಭಾರತೀಯ ಜೀವವಿಮಾ ನಿಗಮ ಮತ್ತು ಕಾಮನ್ ಸರ್ವಿಸ್ ಸೆಂಟರ್ ಇ ಗವರ್ನೆನ್ಸ್ ಸರ್ವಿಸಸ್ ಇಂಡಿಯ ಲಿ. ಸ್ಪೆಶಲ್ ಪರ್ಪಸ್ ವೆಹಿಕಲ್’ ಮೂಲಕ ಜಾರಿಗೊಳ್ಳುತ್ತಿದೆ. ಐಡಿಬಿಐ ಬ್ಯಾಂಕ್ ಬ್ಯಾಂಕಿಂಗ್ ಸೇವೆ ಒದಗಿಸಲಿದೆ.
ಪಾವತಿ ಕ್ರಮ: 18ರಿಂದ 40 ವರ್ಷದವರೆಗೆ ಒಟ್ಟು 23 ವಯೋಮಾನದ ವರ್ಗಗಳಿಗೆ ಪ್ರತ್ಯೇಕ ದೇಣಿಗೆ ಮೊತ್ತ ನಮೂದಿಸಲಾಗಿದೆ. 18ನೆಯ ವಯಸ್ಸಿನವರು 55 ರೂ., 40ನೆಯ ವಯಸ್ಸಿನ ವರು 200 ರೂ. ಪಾವತಿಸಬೇಕು. ಈ ನಡುವಿನವ ರಿಗೆ ಪ್ರತ್ಯೇಕ ಮೊತ್ತವಿದೆ. ಇದಕ್ಕೆ ಸಮನಾದ ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. ಒಂದು ಬಾರಿ ಸೇರಿದರೆ 60 ವರ್ಷದವರೆಗೆ ಚಂದಾದಾ ರರು ಪ್ರತಿ ತಿಂಗಳು ದೇಣಿಗೆ ಮೊತ್ತವನ್ನು ಬ್ಯಾಂಕ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು. ನೋಂದಣಿಯಾದ ದಿನಾಂಕವೇ ಮುಂದಿನ ಪಾವತಿ ಕಂತಿನ ದಿನಾಂಕವಾಗಿರುತ್ತದೆ.
ನೋಂದಣಿ ಕ್ರಮ: 1.ಚಂದಾದಾರರು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಹೆಸರು ನೋಂದಾಯಿಸಬೇಕು. ಕೃಷಿ ಇಲಾಖೆ, ಎಲ್ಲೆ„ಸಿ ಕಚೇರಿಗಳಲ್ಲಿ ಮಾಹಿತಿ ಸಿಗುತ್ತದೆ. 2.ಉಳಿತಾಯ/ ಜನಧನ್ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು. 3.ಸ್ವಯಂ ಘೋಷಣೆ ಮೂಲಕ ನೋಂದಣಿ. ಆದಾಯ ಮತ್ತು ವಯಸ್ಸು ವಿವರ ಗಳಿಗೆ ಪ್ರತ್ಯೇಕ ದಾಖಲಾತಿ ಬೇಡ. ಕೃಷಿಕರೆನ್ನು ವುದಕ್ಕೆ ಭೂದಾಖಲೆ ಬೇಕು. 4. ವಿದ್ಯಾರ್ಹತೆ ಮಾನದಂಡವಿಲ್ಲ. 5.ನೋಂದಣಿಯಾಗುವಾಗಲೇ ಮೊತ್ತ ಬ್ಯಾಂಕ್ ಖಾತೆಯಿಂದ ಜಮೆ ಆಗಲಿದೆ.
ಸಣ್ಣ ಕೃಷಿಕರಿಗೆ ಲಾಭ: 18ನೆಯ ವರ್ಷಕ್ಕೆ ಯೋಜನೆಗೆ ಸೇರಿ ತಿಂಗಳಿಗೆ 55 ರೂ. ಕಟ್ಟಿದರೆ ವರ್ಷಕ್ಕೆ 660 ರೂ. ಕಟ್ಟಿದಂತಾಗುತ್ತದೆ. 60ನೆಯ ವರ್ಷದವರೆಗೆ ಒಟ್ಟು 27,720 ರೂ. ಪಾವತಿಸಿದಂ ತಾಗುತ್ತದೆ. 40ನೆಯ ವರ್ಷದಲ್ಲಿ ಸೇರಿದರೆ ತಿಂಗಳಿಗೆ 200 ರೂ. ಕಟ್ಟಬೇಕು. 60ನೆಯ ವರ್ಷ ದವರೆಗೆ 48,000 ರೂ. ಪಾವತಿಸಿದಂತಾಗುತ್ತದೆ. 60ನೆಯ ವರ್ಷದಲ್ಲಿ ತಿಂಗಳಿಗೆ 3,000 ರೂ. ಪಿಂಚಣಿ ಸಿಗುವಾಗ ಚಂದಾದಾರರು ಪಾವತಿಸಿದ ಮೊತ್ತ ಒಂದು ವರ್ಷದಲ್ಲಿ ಸಿಕ್ಕಿದಂತಾಗುತ್ತದೆ.
60 ವರ್ಷವಾದಾಗ 3,000 ರೂಪಾಯಿ ಪಿಂಚಣಿ ಆರಂಭ: 60 ವರ್ಷವಾದ ಬಳಿಕ ಕನಿಷ್ಠ 3,000 ರೂ. ಮಾಸಿಕ ಪಿಂಚಣಿ ಜೀವಿತದ ಕೊನೆಯವರೆಗೆ ದೊರೆಯಲಿದೆ. ಇದು ಭವಿಷ್ಯದಲ್ಲಿ ಏರಿಕೆ ಯಾಗಲೂಬಹುದು. ಚಂದಾದಾರ ಮೃತ ಪಟ್ಟರೆ ನಾಮಿನಿಗೆ ಅರ್ಧಾಂಶ ಪಿಂಚಣಿ ದೊರೆ ಯಲಿದೆ. 60 ವರ್ಷದೊಳಗೆ ಮೃತಪಟ್ಟರೆ ಯೋಜನೆಯನ್ನು ಮುಂದುವರಿಸಲು ನಾಮಿನಿಗೆ ಅವಕಾಶವಿದೆ. ಯೋಜನೆಯಿಂದ ನಿರ್ಗಮಿಸಿದರೆ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲಾಗುವುದು.
ಯಾರು ಅರ್ಹರು? ಯಾರು ಅನರ್ಹರು?
-2019ರ ಆ. 1ಕ್ಕೆ ಅನ್ವಯವಾಗುವಂತೆ ಸಣ್ಣ ಮತ್ತು ಅತಿ ಸಣ್ಣ ರೈತರು.
-ಮಾಸಿಕ ಆದಾಯ 15,000 ರೂ. ಒಳಗೆ ಇರಬೇಕು.
-ನೋಂದಣಿದಾರರ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು. -ಐದು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬಾರದು.
-18ರಿಂದ 40 ವರ್ಷದವರೆಗಿನವರು ಯೋಜನೆಗೆ ಹೆಸರು ನೋಂದಾಯಿಸಬಹುದು.
-ಸಂಘಟಿತ ವಲಯದಲ್ಲಿರಬಾರದು ಅಥವಾ ಭವಿಷ್ಯನಿಧಿ, ಎನ್‌ಪಿಎಸ್, ಇಎಸ್‌ಐ ಯೋಜನೆಯಡಿ ಸೇರಿರಬಾರದು.
-ಆರ್ಥಿಕ ಸದೃಢರು, ದೊಡ್ಡ ಭೂ ಮಾಲೀಕರು, ಸಂಸ್ಥೆಗಳ ಭೂಮಿ ಹೊಂದಿದವರು, ಆದಾಯ ತೆರಿಗೆ ಪಾವತಿದಾರರು, ಸರಕಾರಿ ನೌಕರರಾಗಿರಬಾರದು.
-ಅಟಲ್ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನ ಪಡೆಯುವವರೂ ಅರ್ಜಿ ಸಲ್ಲಿಸಬಹುದು.
-ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ-ಧನ್ ಯೋಜನೆಗೆ (ಪಿಎಂಎಸ್‌ವೈಎಂ) ಹೆಸರು ನೋಂದಾಯಿಸಿದ ಅಸಂಘಟಿತ ವಲಯದ ಕಾರ್ಮಿಕರಾಗಿರಬಾರದು.
* ಮಟಪಾಡಿ ಕುಮಾರಸ್ವಾಮಿ