Advertisement

ಸವಾರಿಗೆ ನಿಧಾನವೇ ಪ್ರಧಾನ

10:19 AM Jun 30, 2019 | Lakshmi GovindaRaj |

ಅದು ದಕ್ಷಿಣಕನ್ನಡದ ಉಪ್ಪಿನಂಗಡಿಯಲ್ಲಿರುವ ಗೆಳೆಯರ ಗುಂಪು. ತಮ್ಮಷ್ಟಕ್ಕೆ ಒಂದಷ್ಟು ತಂಟೆ-ತರಲೆ ಮಾಡಿಕೊಂಡಿದ್ದ ಈ ಗುಂಪಿನಲ್ಲಿದ್ದ ನಿರಂಜನ ಎಂಬಾತ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ. ಇದ್ದಕ್ಕಿದ್ದಂತೆ ನಾಪತ್ತೆಯಾದ ನಿರಂಜನ ಬಗ್ಗೆ ಸ್ನೇಹಿತರಿಗೆ ಆತಂಕ.

Advertisement

ನಿರಂಜನ ಅದೇ ಊರಿನ ಬಂಟರ ಹುಡುಗಿ ವೀಣಾ ಸರಸ್ವತಿಯನ್ನು ಪ್ರೀತಿಸುತ್ತಿದ್ದ ಕಾರಣ, ಆಕೆಯ ತಂದೆಯೇ ನಿರಂಜನನಿಗೆ ಏನಾದರೂ ಮಾಡಿರಬಹುದು ಎನ್ನುವುದು ಗುಂಪಿನಲ್ಲಿರುವ ಕೆಲವರ ಗುಮಾನಿ. ನಿರಂಜನ ಪರಿಸರ ಹೋರಾಟದಲ್ಲೂ ಇದ್ದಿದ್ದರಿಂದ ಮತ್ತಿನ್ಯಾರೋ ಏನಾದರೂ ಮಾಡಿರಬಹುದು ಎನ್ನುವುದು ಇನ್ನುಳಿದ ಕೆಲವರ ಲೆಕ್ಕಾಚಾರ.

ಒಟ್ಟಿನಲ್ಲಿ ನಿರಂಜನ ಕೊಲೆಯಾಗಿದ್ದಾನೆ ಎನ್ನುವುದು ಅಲ್ಲಿರುವ ನಿರಂಜನನ ಸ್ನೇಹಿತರ ನಿಸ್ಸಂಶಯ ವಾದ. ಹಾಗಾದ್ರೆ ನಿಜವಾಗಿಯೂ ನಿರಂಜನ ಎಲ್ಲಿಗೆ ಹೋದ? ಏನಾದ? ಸ್ನೇಹಿತರು ಅಂದುಕೊಂಡಂತೆ ನಿರಂಜನ ಕೊಲೆಯಾದನಾ? ಅನ್ನೋದೆ ಸಸ್ಪೆನ್ಸ್‌. ಇದು ಈ ವಾರ ತೆರೆಗೆ ಬಂದಿರುವ “ಸಮಯದ ಹಿಂದೆ ಸವಾರಿ’ ಚಿತ್ರದ ಕಥಾ ಹಂದರ.

ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ “ನದಿಯ ನೆನಪಿನ ಹಂಗು’ ಕಾದಂಬರಿ ಆಧರಿಸಿರುವ ಈ ಚಿತ್ರ “ಸಮಯದ ಹಿಂದೆ ಸವಾರಿ’ ಎನ್ನುವ ಹೆಸರಿನಲ್ಲಿ ತೆರೆಗೆ ಬಂದಿದೆ. ಒಂದಷ್ಟು ಕೌತುಕದ ಸಂಗತಿಗಳು, ಹಿಡಿದು ಕೂರಿಸುವ ಕಥಾಹಂದರ ಚಿತ್ರದಲ್ಲಿದ್ದರೂ, ಅದು ಚಿತ್ರಕಥೆಯಾಗಿ ತೆರೆಗೆ ಬರುವಾಗ ಮೂಲಕೃತಿಯಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ.

ಚಿತ್ರದ ನಿರೂಪಣೆ ಕೆಲವೆಡೆ ಅತಿವೇಗ ಪಡೆದುಕೊಂಡರೆ, ಕೆಲವೆಡೆ ಆಮೆನಡಿಗೆಯಲ್ಲಿ ಸಾಗುತ್ತದೆ. ಚಿತ್ರಕಥೆ, ನಿರೂಪಣೆ, ಸಂಭಾಷಣೆ, ದೃಶ್ಯ ಜೋಡಣೆ ಕಡೆಗೆ ನಿರ್ದೇಶಕ ರಾಜ್‌ಗುರು ಹೊಸಕೋಟಿ ಇನ್ನಷ್ಟು ಗಮನ ಹರಿಸಿದ್ದರೆ, “ಸವಾರಿ’ ಇನ್ನೂ ರೋಚಕವಾಗಿರುವ ಎಲ್ಲಾ ಸಾಧ್ಯತೆಗಳಿರುತ್ತಿದ್ದವು.

Advertisement

ಇನ್ನು “ಸಮಯದ ಹಿಂದೆ ಸವಾರಿ’ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆಲವರ ಅಭಿನಯ ಪರವಾಗಿಲ್ಲ ಎನ್ನಬಹುದು. ಮತ್ತೆ ಕೆಲವರು ಅಭಿನಯದಲ್ಲಿ ಸಾಕಷ್ಟು ಪಳಗಬೇಕಿದೆ. ಅದನ್ನು ಹೊರತುಪಡಿಸಿ ಚಿತ್ರದ ತಾಂತ್ರಿಕ ವಿಷಯಗಳ ಬಗ್ಗೆ ಹೇಳುವುದಾದರೆ, ಚಿತ್ರದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಮೂರು ಕೂಡ ಚಿತ್ರಕ್ಕೆ ಬಿಗ್‌ ಪ್ಲಸ್‌ ಎನ್ನಬಹುದು.

ಚಿತ್ರದ ದೃಶ್ಯಗಳನ್ನು ಸುನೀತ್‌ ಹಲಗೇರಿ ತಮ್ಮ ಕ್ಯಾಮರಾದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಕಲನ ಕಾರ್ಯ ಕೂಡ ಹಿತ-ಮಿತವಾಗಿದೆ. ಅಲ್ಲಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುತ್ತದೆ. ಒಟ್ಟಾರೆ ಅತಿರೋಚಕವೂ ಅಲ್ಲದ,ಅತಿ ಪೇಲವವೂ ಅಲ್ಲದ ದಾರಿಯಲ್ಲಿ ಬಿಡುವಿದ್ದರೆ, “ಸಮಯದ ಹಿಂದೆ ಸವಾರಿ’ ಮಾಡಲು ಅಡ್ಡಿ ಇಲ್ಲ.

ಚಿತ್ರ: ಸಮಯದ ಹಿಂದೆ ಸವಾರಿ
ನಿರ್ಮಾಣ: ರಾಹುಲ್‌ ಹೆಗ್ಡೆ
ನಿರ್ದೇಶನ: ರಾಜ್‌ಗುರು ಹೊಸಕೋಟಿ
ತಾರಾಗಣ: ರಾಹುಲ್‌ ಹೆಗ್ಡೆ, ಪ್ರಕೃತಿ, ಕಿರಣ್‌, ರಂಜಿತ್‌ ಶೆಟ್ಟಿ, ಶಿವಶಂಕರ್‌, ಪ್ರವೀಣ್‌ ಹೆಗ್ಡೆ ಇತರರು

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next