Advertisement

ಭರ್ಜರಿ ಪಂದ್ಯದಲ್ಲಿ ರೋಚಕ ಆಟ

10:37 AM Sep 16, 2017 | Team Udayavani |

ಚಿಕ್ಕ ವಯಸ್ಸಿನಲ್ಲಿ ಸೈನಿಕನಾಗಬೇಕೆಂದು ಆಸೆಪಟ್ಟಿರುತ್ತಾನೆ ಅವನು. ಆ ನಂತರ ಮನಸ್ಸು ಬದಲಾಗಿ, ಡಾಕ್ಟರ್‌ ಆಗಬೇಕೆಂದಿನಿಸುತ್ತದೆ. ರವಿಚಂದ್ರನ್‌ ಚಿತ್ರ ನೋಡಿ, ಲಾಯರ್‌ ಆಗುವ ಮನಸ್ಸಾಗುತ್ತದೆ. ಅರ್ಜುನ್‌ ಸರ್ಜಾ ಬಾಡಿ ಬಿಲ್ಡ್‌ ಮಾಡುವುದನ್ನು ನೋಡಿ ಬಾಡಿ ಬಿಲ್ಡರ್‌ ಆಗುವ ತಯಾರಿ ನಡೆಯುತ್ತದೆ. ಕೊನೆಗೆ ಆತ ಅವನ್ನೆಲ್ಲಾ ಬಿಟ್ಟು, ಲೋಕಲ್‌ ಲೀಡರ್‌ ಆಗುತ್ತಾನೆ. ಯಾರೇ ಪ್ರೇಮಿಗಳು ಬಂದು ಕಷ್ಟ ಅಂತ ಹೇಳಿಕೊಂಡರೂ, ಅವರ ಪಾಲಿನ ಆಪದ್ಭಾಂದವನಾಗುತ್ತಿರುತ್ತಾನೆ.

Advertisement

ಜಾತಿ-ಧರ್ಮ ಎಲ್ಲಕ್ಕಿಂತಲೂ ಮಿಗಿಲಾಗಿದ್ದು ಪ್ರೀತಿ ಎಂದು ಪ್ರೇಮಿಗಳನ್ನು ಒಂದು ಮಾಡುತ್ತಿರುತ್ತಾನೆ. ಅಂಥವನಿಗೆ ಅದೊಂದು ದಿನ ಲವ್‌ ಅಟ್‌ ಫ‌ಸ್ಟ್‌ ಸೈಟ್‌ ಆಗುತ್ತದೆ. ಹಾಗೆ ಲವ್‌ ಆದ ಹುಡುಗಿ, ಏಕ್‌ದಂ ಐ ಲವ್‌ ಯೂ ಎನ್ನುತ್ತಾಳೆ … ಆದರೆ, ವಿಧಿ ಅನ್ನೋದು ಒಂದಿದೆಯಲ್ಲಾ. ಅದು ಅವನ ಹಣೆಯಲ್ಲಿ ಇನ್ನೇನೋ ಬರೆದಿರುತ್ತದೆ. ಲೈಫ್ನಲ್ಲಿ ಸೆಟ್ಲ ಆಗಬೇಕು ಅಂದವನಿಗೆ ಸೈನ್ಯದಿಂದ ಬುಲಾವ್‌ ಬರುತ್ತದೆ. ಅಲ್ಲಿಗೆ ಹೋಗಿ ಕೆಲಸ ಪ್ರಾರಂಭಿಸೋಣ ಎನ್ನುವಷ್ಟರಲ್ಲಿ, ಮನೆ ಬಿಟ್ಟು ಓಡಿಹೋಗುತ್ತಿರುವ ಇನ್ನೊಂದು ಹುಡುಗಿಯ ಪರಿಚಯವಾಗುತ್ತದೆ.

ಆ ಹುಡುಗಿಯನ್ನು ಮನೆಗೆ ಬಿಟ್ಟು ಬರೋಣ ಎಂದು ಹೋಗುವಷ್ಟರಲ್ಲಿ ಇನ್ನೇನೋ ಆಗುತ್ತದೆ. ಅಲ್ಲಿಂದ ಮತ್ತೇನೋ? … ಆರಂಭದಲ್ಲಿ ತಂದೆಯಿಂದ ವೇಸ್ಟ್‌ ಬಾಡಿ ಎನಿಸಿಕೊಳ್ಳುವ ಯುವಕ, ಕೊನೆಗೆ ಎರಡು ದೊಡ್ಡ ಕುಟುಂಬಗಳನ್ನು, ಒಡೆದು ಹೋದ ಊರನ್ನು ಒಂದು ಮಾಡುವಲ್ಲಿಗೆ ಚಿತ್ರ ಮುಗಿಯುತ್ತದೆ. “ಭರ್ಜರಿ’ ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಮೇಲಾಗಿ ಒಂದು ತೆಲುಗು ಶೈಲಿಯ ಕಮರ್ಷಿಯಲ್‌ ಚಿತ್ರ. ಹಾಗಾಗಿ ಇಲ್ಲಿ ಎಲ್ಲವೂ ಸ್ವಲ್ಪ ಹೆಚ್ಚೇ. 10 ಜನರ ಜೊತೆಗೆ ಫೈಟ್‌ ಮಾಡುವ ನಾಯಕ, ಇಲ್ಲಿ ನೂರು ಜನರ ಜೊತೆಗೆ ಫೈಟ್‌ ಮಾಡಿ ಎಲ್ಲರನ್ನೂ ಅಡ್ಡಡ್ಡ ಮಲಗಿಸುತ್ತಾನೆ.

ಕಾವೇರಿಯಿಂದ ಚೀನಾದ ಸಮಸ್ಯೆಯವರೆಗೂ, ಎಲ್ಲವನ್ನೂ ಅತೀ ಸುಲಭವಾಗಿ ಬಗೆಹರಿಸುತ್ತಾನೆ. ಹಾಡುತ್ತಾನೆ, ಕುಣಿಯುತ್ತಾನೆ, ಡ್ರಾಮಾ ಮಾಡುತ್ತಾನೆ, ಕಾಮಿಡಿ ಮಾಡುತ್ತಾನೆ, ಕಣ್ಣೀರು ಸುರಿಸುತ್ತಾನೆ … ಕೊನೆಗೆ ಪ್ರತಿ ತಾಯಿಯೂ ಬಯಸುವ ಮಗನಾಗಿ, ಪ್ರತಿ ಹುಡುಗಿಯೂ ಆಸೆಪಡುವ ಒಬ್ಬ ಹುಡುಗನಾಗಿ, ಪ್ರತಿ ದೇಶವೂ ಬಯಸುವ ಒಬ್ಬ ಅತ್ಯುತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾನೆ. ಈ ತರಹದ ಕಥೆ, ಚಿತ್ರ ಯಾವುದೂ ಕನ್ನಡಿಗರಿಗೆ ಹೊಸದಲ್ಲ. ಆ ಚಿತ್ರದ ಒಂದು ದೃಶ್ಯ, ಇನ್ನೊಂದು ಚಿತ್ರದ ಒಂದು ಟ್ರಾಕ್‌, ಮತ್ತೂಂದು ಚಿತ್ರದ ಇನ್ನಾವುದೋ ಅಂಶಗಳು ಪ್ರೇಕ್ಷಕರಿಗೆ ಆಗಾಗ ನೆನಪಿಗೆ ಬರಬಹುದು.

ಆದರೆ, ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರವನ್ನು ಹೇಗೆ ರೂಪಿಸಬೇಕು ಎಂಬುದು ನಿರ್ದೇಶಕ ಚೇತನ್‌ ಕುಮಾರ್‌ಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಇಡೀ ಚಿತ್ರವನ್ನು ಜೋಡಿಸಿದ್ದಾರೆ ಅವರು. ಪ್ರೇಮ, ಸ್ನೇಹ, ಹಾಡುಗಳು, ಕಾಮಿಡಿ, ತಾಯಿ ಸೆಂಟಿಮೆಂಟ್‌, ತರಲೆ, ಫ್ಯಾಮಿಲಿ ಡ್ರಾಮಾ, ಬಿಲ್ಡಪ್‌ … ಹೀಗೆ ಎಲ್ಲಾ ವಿಷಯಗಳನ್ನು ಹದವಾಗಿ ಬೆರೆಸಿರುವ ಅವರು, ಆ್ಯಕ್ಷನ್‌ ದೃಶ್ಯಗಳಿಗೆ ಸ್ವಲ್ಪ ಜಾಸ್ತಿಯೇ ಒತ್ತು ಕೊಟ್ಟಿದ್ದಾರೆ. ಅದಕ್ಕೆ ಕಾರಣ ಧ್ರುವಗಿರುವ ಇಮೇಜ್‌ ಇದ್ದರೂ ಇರಬಹುದು.

Advertisement

ಮಿಕ್ಕಂತೆ ಸಾಕಷ್ಟು ಟ್ವಿಸ್ಟ್‌ಗಳನ್ನು ಇಟ್ಟಿರುವ ಚೇತನ್‌, ಯಾವುದೇ ದೃಶ್ಯ ಹೆಚ್ಚು ಬೋರ್‌ ಹೊಡೆಸದಂತೆ ನಿರೂಪಿಸುತ್ತಾ ಹೋಗುತ್ತಾರೆ.  ಹಾಗಂತ ಅದ್ಭುತ, ವಿಶೇಷ ಎಂದೆಲ್ಲಾ ಹೇಳುವುದು ಕಷ್ಟ. ಒಂದು ಕಮರ್ಷಿಯಲ್‌ ಸಿನಿಮಾವನ್ನು ಹೇಗೆ ನಿರೂಪಿಸಬೇಕೋ, ಒಂದು ದೃಶ್ಯವನ್ನು ಎಷ್ಟು ಅದ್ಧೂರಿಯಾಗಿ ತೋರಿಸಬೇಕೋ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನ ಮೇಲೇಳದಂತೆ ಹೇಗೆ ಒಂದರ ಹಿಂದೊಂದು ಟ್ವಿಸ್ಟ್‌ ಕೊಡಬೇಕೋ ಎನ್ನುವುದು ಅವರಿಗೆ ಗೊತ್ತಿದೆ.

ಅದನ್ನು ಶ್ರದ್ಧೆಯಿಂದ ಮಾಡಿ ತೋರಿಸಿದ್ದಾರೆ ಅವರು. ಹಾಗಾಗಿಯೇ ಸರಿಯೋ, ತಪ್ಪೋ, ಲಾಜಿಕ್ಕೋ, ಮ್ಯಾಜಿಕ್ಕೋ … ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಧ್ರುವ ಸರ್ಜಾರ ಎರಡು ಪ್ಲಸ್‌ಪಾಯಿಂಟ್‌ ಎಂದರೆ, ಒಂದು ಮಾತು, ಇನ್ನೊಂದು ಹೊಡೆದಾಟ. ಅವೆರೆಡನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಚೇತನ್‌, ಅದೇ ತರಹದ ಪಾತ್ರವನ್ನು ಧ್ರುವಗೆ ಸೃಷ್ಟಿ ಮಾಡಿದ್ದಾರೆ. ಹಾಗಾಗಿ ಧ್ರುವ ಇಲ್ಲಿ ಹೆಚ್ಚು ಕಷ್ಟಪಟ್ಟಿಲ್ಲ. ಸಲೀಸಾಗಿ ತಮ್ಮ ಕೆಲಸ ಮುಗಿಸಿದ್ದಾರೆ. ರಚಿತಾ ಮತ್ತು ಹರಿಪ್ರಿಯಾ ಇಬ್ಬರೂ ಮುದ್ದಾಗಿ ಕಾಣಿಸಿಕೊಳ್ಳುವುದಷ್ಟೇ ಅಲ್ಲ, ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಇನ್ನು ತಾರಾ, ಸುಚೇಂದ್ರ ಪ್ರಸಾದ್‌, ಶ್ರೀನಿವಾಸಮೂರ್ತಿ, ಸುಮಿತ್ರಮ್ಮ, ಅವಿನಾಶ್‌ ಎಲ್ಲರೂ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಾಧು ಕೋಕಿಲ ಒಂದಿಷ್ಟು ಹೊತ್ತು ನಗಿಸಿ ಹೋಗುತ್ತಾರೆ. ಸಾಹಸ ನಿರ್ದೇಶಕರಾದ ಗಣೇಶ್‌ ಮತ್ತು ವಿಜಯ್‌ ಜಾಸ್ತಿ ಹೊತ್ತು ಆವರಿಸುತ್ತಾರೆ. ಹರಿಕೃಷ್ಣ ಒಂದೆರೆಡು ಹಾಡುಗಳಿಂದ ಖುಷಿಕೊಡುತ್ತಾರೆ. ಶ್ರೀಷ ಕೂದುವಳ್ಳಿ ಪ್ರತಿ ದೃಶ್ಯವನ್ನೂ ಅದ್ಧೂರಿಯಾಗಿ ಸೆರೆಹಿಡಿದಿದ್ದಾರೆ. ಹೀಗೆ ಎಲ್ಲರೂ ತಮ್ಮ ಕೈಚಳಕ ತೋರಿಸುವುದರಿಂದ, ಚಿತ್ರ “ಭರ್ಜರಿ’ಯಾಗಿ ಬಿಡುಗಡೆಯಾಗಿದೆ.

ಚಿತ್ರ: ಭರ್ಜರಿ
ನಿರ್ದೇಶನ: ಚೇತನ್‌ ಕುಮಾರ್‌
ನಿರ್ಮಾಣ: ಕನಕಪುರ ಶ್ರೀನಿವಾಸ್‌
ತಾರಾಗಣ: ಧ್ರುವ ಸರ್ಜಾ, ರಚಿತಾ ರಾಮ್‌, ಹರಿಪ್ರಿಯಾ, ತಾರಾ, ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ಅವಿನಾಶ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next