Advertisement

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

11:53 PM Apr 18, 2024 | Team Udayavani |

ಮುಲ್ಲಾನ್‌ಪುರ್‌: ಮುಂಬೈ ಇಂಡಿಯನ್ಸ್‌ ತಂಡವು ಗುರುವಾರದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದೆದುರು 9 ರನ್ನುಗಳ ಜಯ ಸಾಧಿಸಿದೆ.

Advertisement

ಮುಂಬೈ ಸೂರ್ಯಕುಮಾರ್‌ ಯಾದವ್‌ ಮತ್ತು ತಿಲಕ್‌ ವರ್ಮ ಅವರ ಅಮೋಘ ಆಟದಿಂದಾಗಿ 7 ವಿಕೆಟಿಗೆ 192 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಅಮೋಘ ಹೋರಾಟ ಸಂಘಟಿಸಿದರೂ ಕೊನೆಯಲ್ಲಿ ಬಿಗಿ ದಾಳಿ ಎದುರಿಸುವಲ್ಲಿ ವಿಫಲವಾಯಿತು. 19.1 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟಾಗಿ ಸೋಲು ಒಪ್ಪಿಕೊಂಡಿತು.

14 ರನ್ನಿಗೆ 4 ವಿಕೆಟ್ ಕಳೆದುಕೊಂಡ ಪಂಜಾಬ್ ಅದಾಗಲೇ ಸೋಲು ಅನುಭವಿಸಿತು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಹರ್‌ಪ್ರೀತ್ ಸಿಂಗ್ ಭಾಟಿಯಾ 13 ಮತ್ತು ಶಶಾಂಕ್ ಸಿಂಗ್ 41 ರನ್ ಗಳಿಸಿ ತಂಡಕ್ಕೆ ನೆರವಾದರು. ಜಿತೇಶ್ ಶರ್ಮ 9 ರನ್ ಗಳಿಸಿ ಔಟಾದರು. ಆ ಬಳಿಕ ಅಬ್ಬರಿಸಿದ ಅಶುತೋಷ್ ಶರ್ಮ 28 ಎಸೆತಗಳಲ್ಲಿ 61 ರನ್ ಚಚ್ಚಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಕೆಟ್ಟ ಹೊಡೆತಕ್ಕೆ ಮುಂದಾಗಿ ಜೆರಾಲ್ಡ್ ಕೋಟ್ಜಿ ಎಸೆದ ಚೆಂಡನ್ನು ನಬಿ ಕೈಗಿತ್ತು ನಿರ್ಗಮಿಸಿದರು. ಹರ್‌ಪ್ರೀತ್ ಬ್ರಾರ್ 21 ರನ್ ಗಳಿಸಿ ಔಟಾದರು. ರಬಾಡಾ ಕೊನೆಯಲ್ಲಿ ಸಿಕ್ಸರ್ ಸಿಡಿಸಿ ಆಶಾವಾದ ಮೂಡಿಸಿದರಾದರೂ ರನ್ ಔಟ್ ಆಗುವ ಮೂಲಕ ಪಂದ್ಯ ಕಳೆದುಕೊಂಡರು.

ಪಂಜಾಬ್ ಆಗ್ರ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಗಳಾದ ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೊಸೊವ್, ಸ್ಯಾಮ್ ಕರಾನ್, ಲಿಯಾಮ್ ಲಿವಿಂಗ್‌ಸ್ಟೋನ್ ತೀವ್ರ ವೈಫಲ್ಯ ಅನುಭವಿಸಿದುದು ಸೋಲಿಗೆ ಕಾರಣವಾಯಿತು.

ಮುಂಬೈ ಪರ ವೇಗಿ ಬುಮ್ರಾ ಮತ್ತು ಕೋಟ್ಜಿ ಬಿಗಿ ದಾಳಿ ನಡೆಸಿ ತಲಾ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಪಾಂಡ್ಯ, ಗೋಪಾಲ್ ಮತ್ತು ಮಧ್ವಾಲ್ ತಲಾ 1 ವಿಕೆಟ್ ಕಿತ್ತರು.

Advertisement

ಮುಂಬೈ ಆಡಿದ 7ನೇ ಪಂದ್ಯದಲ್ಲಿ 3ನೇ ಗೆಲುವು ತನ್ನದಾಗಿಸಿಕೊಂಡಿತು. ಪಂಜಾಬ್ ಆಡಿದ 7ನೇ ಪಂದ್ಯದಲ್ಲಿ 5 ನೇ ಸೋಲು ಅನುಭವಿಸಿತು.

ಮುಂಬೈ ಅಬ್ಬರ
ಆರಂಭದಲ್ಲಿ ನಿಧಾನ ಗತಿಯಲ್ಲಿ ಆಡಿದ್ದ ಸೂರ್ಯ ಕುಮಾರ್‌ ಆಬಳಿಕ ಬಿರುಸಿನ ಆಟವಾಡಿದರು. ಕೇವಲ 53 ಎಸೆತಗಳಲ್ಲಿ 78 ರನ್‌ ಗಳಿಸಿದ ಅವರು ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಅವರು 7 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು. ರೋಹಿತ್‌ ಶರ್ಮ ಅವರೊಂದಿಗೆ ದ್ವಿತೀಯ ವಿಕೆಟಿಗೆ 81 ರನ್ನುಗಳ ಜತೆಯಾಟ ನಡೆಸಿದ ಅವರು ತಂಡ ದೊಡ್ಡ ಮೊತ್ತ ಪೇರಿಸಲು ನೆರವಾದರು. ರೋಹಿತ್‌ 25 ಎಸೆತಗಳಿಂದ 2 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 36 ರನ್‌ ಹೊಡೆದರು. ಐಪಿಎಲ್‌ನಲ್ಲಿ 250ನೇ ಪಂದ್ಯವನ್ನಾಡಿದ ರೋಹಿತ್‌ 6,500 ರನ್‌ ಪೂರ್ತಿಗೊಳಿಸಿದರು.

ಕೊನೆ ಹಂತದಲ್ಲಿ ಟಿಮ್‌ ಡೇವಿಡ್‌, ತಿಲಕ್‌ ವರ್ಮ ಬಿರುಸಿನ ಆಟ ಪ್ರದರ್ಶಿಸಿದ್ದರಿಂದ ಮುಂಬೈಯ ಮೊತ್ತ 192 ತಲುಪುವಂತಾಯಿತು. ಇದು ಐಪಿಎಲ್‌ನ ಹೊಸ ತಾಣದಲ್ಲಿ ದಾಖಲಾದ ಗರಿಷ್ಠ ಮೊತ್ತವೂ ಆಗಿದೆ. ಡೇವಿಡ್‌ 7 ಎಸೆತಗಳಿಂದ 14 ರನ್‌ ಹೊಡೆದರೆ ವರ್ಮ 18 ಎಸೆತ ಎದುರಿಸಿದ್ದು 34 ರನ್‌ ಗಳಿಸಿ ಅಜೇಯರಾಗಿ ಉಳಿದರು. 2 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು.

ಬಿಗು ದಾಳಿ ಸಂಘಟಿಸಿದ ಹರ್ಷಲ್‌ ಪಟೇಲ್‌ 31 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು. ನಾಯಕ ಸ್ಯಾಮ್‌ ಕರನ್‌ 41 ರನ್ನಿಗೆ 2 ವಿಕೆಟ್‌ ಪಡೆದರು.

ಸ್ಯಾಮ್‌ ಕರನ್‌ ನಾಯಕರಾಗಿ ಮುಂದುವರಿಕೆ
ಶಿಖರ್‌ ಧವನ್‌ ಭುಜದ ನೋವಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಈ ಪಂದ್ಯದಲ್ಲೂ ಆಡುತ್ತಿಲ್ಲ. ಅವರ ಬದಲಿಗೆ ಸ್ಯಾಮ್‌ ಕರನ್‌ ತಂಡವನ್ನು ಮುನ್ನಡೆಸಿದರು. ಪಂಜಾಬ್‌ ತಂಡವು ಜಾನಿ ಬೇರ್‌ಸ್ಟೋ ಬದಲಿಗೆ ರೀಲಿ ರೋಸೊ ಅವರನ್ನು ಕರೆಸಿಕೊಂಡಿದೆ. ಅಥರ್ವ ಟೈಡ್‌ ಕೂಡ ಈ ಪಂದ್ಯದಲ್ಲಿ ಆಡಲಿಲ್ಲ.ಮುಂಬೈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next