Advertisement

RR; ಅನಾರೋಗ್ಯದಿಂದ ಹಾಸಿಗೆಯಲ್ಲಿ.. ನೋವು ಮರೆಸಿದ ಆಟ: ರಿಯಾನ್‌ ಪರಾಗ್‌

11:59 PM Mar 29, 2024 | Team Udayavani |

ಜೈಪುರ: “ಕಳೆದ ಮೂರು ದಿನಗಳ ಕಾಲ ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದೆ. ನೋವು ನಿವಾರಕ ಮಾತ್ರೆ ಸೇವಿಸಿ ಆಡಲಿಳಿದಿದ್ದೆ. ಆದರೀಗ ಮ್ಯಾಚ್‌ ವಿನ್ನಿಂಗ್‌ ಆಟದಿಂದ ನೋವೆಲ್ಲ ಮರೆತಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ, ರಾಜಸ್ಥಾನ್‌ ತಂಡದ ಗೆಲುವಿನ ಹೀರೋ ರಿಯಾನ್‌ ಪರಾಗ್‌.

Advertisement

ಡೆಲ್ಲಿ ವಿರುದ್ಧ ತವರಿನ ಜೈಪುರ ಅಂಗಳದಲ್ಲಿ ಆಡಲಾದ ಈ ಪಂದ್ಯದಲ್ಲಿ ರಿಯಾನ್‌ ಪರಾಗ್‌ ಅಜೇಯ 84 ರನ್‌ ಬಾರಿಸಿ ರಾಜಸ್ಥಾನ್‌ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಇದರಲ್ಲಿ 25 ರನ್ನುಗಳನ್ನು ಆ್ಯನ್ರಿಚ್‌ ನೋರ್ಜೆ ಅವರ ಕೊನೆಯ ಓವರ್‌ ಒಂದರಲ್ಲೇ ಬಾರಿಸಿದ್ದರು (2 ಸಿಕ್ಸರ್‌, 3 ಫೋರ್‌).

ರಾಜಸ್ಥಾನ್‌ ಗೆಲುವಿನ ಅಂತರ 12 ರನ್‌ ಮಾತ್ರ. ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ 5 ವಿಕೆಟಿಗೆ 185 ರನ್‌ ಮಾಡಿದರೆ, ಡೆಲ್ಲಿ ಕೊನೆಯ ಹಂತದಲ್ಲಿ ಹಿನ್ನಡೆ ಅನುಭವಿಸಿ 5ಕ್ಕೆ 173 ರನ್‌ ಮಾತ್ರ ಗಳಿಸಿತು.

ಭಡ್ತಿ ಪಡೆದ ಪರಾಗ್‌
“ಕಳೆದ 3 ದಿನಗಳಿಂದ ನಾನು ಅನಾರೋಗ್ಯಕ್ಕೊಳಗಾಗಿದ್ದೆ. ನೋವು ನಿವಾರಕ ಮಾತ್ರೆ ತೆಗೆದುಕೊಂಡು ಮಲಗಿದ್ದೆ. ಇಂದು ಚೇತರಿಸಿಕೊಂಡು ಆಡಲಿಳಿದೆ. ಅಷ್ಟೇ ಅಲ್ಲ, ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಲಿಕ್ಕೂ ಸಾಧ್ಯವಾಯಿತು. ಬಹಳ ಖುಷಿಯಾಗಿದೆ’ ಎಂದು ಪರಾಗ್‌ ಹೇಳಿದರು.
ಸಾಮಾನ್ಯವಾಗಿ ರಿಯಾನ್‌ ಪರಾಗ್‌ ಫಿನಿಶರ್‌ ಪಾತ್ರ ವಹಿಸುತ್ತಾರೆ. ಆದರಲ್ಲಿ ಅವರನ್ನು 4ನೇ ಕ್ರಮಾಂಕಕ್ಕೆ ಭಡ್ತಿ ನೀಡಲಾಯಿತು. 36ಕ್ಕೆ 3 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ರಾಜಸ್ಥಾನ್‌ ತಂಡವನ್ನು ಪರಾಗ್‌ ಮೇಲೆತ್ತಿದರು.

“ಸಯ್ಯದ್‌ ಮುಷ್ತಾಕ್‌ ಅಲಿ ಹಾಗೂ ದೇವಧರ್‌ ಟ್ರೋಫಿ ಪಂದ್ಯಾವಳಿಯಲ್ಲಿ ತೋರ್ಪಡಿಸಿದ ಉತ್ತಮ ಫಾರ್ಮ್ ಐಪಿಎಲ್‌ನಲ್ಲಿ ನೆರವಿಗೆ ಬಂತು. ಅಗ್ರ ನಾಲ್ವರಲ್ಲಿ ಒಬ್ಬರು 20ನೇ ಓವರ್‌ ತನಕ ಬ್ಯಾಟಿಂಗ್‌ ಕಾಯ್ದುಕೊಂಡರೆ ದೊಡ್ಡ ಮೊತ್ತ ಪೇರಿಸಬಹುದು. ಮೊದಲ ಪಂದ್ಯದಲ್ಲಿ ಸಂಜು ಭಯ್ನಾ ಈ ಕೆಲಸ ಮಾಡಿದರು’ ಎಂದು ಪರಾಗ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next