ಕಟಪಾಡಿ: ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿನೋಬಾ ನಗರ ಶ್ಮಶಾನ ಬಳಿಯ ಕಾಂಕ್ರೀಟ್ ರಸ್ತೆಯಲ್ಲಿ ನೀರು ಹರಿಯುವ ತೋಡಿಗೆ ಅಡ್ಡಲಾಗಿ ಹಾಕಲಾದ ಕಾಂಕ್ರೀಟ್ ಸ್ಲ್ಯಾಬ್ ಗಳು ಮುರಿದು ರಸ್ತೆ ಸಂಚಾರ ಕಷ್ಟಕರವಾಗಿದ್ದು, ಅಪಾಯದ ಸೂಚನೆ ನೀಡುತ್ತಿದೆ.
ತೌಡಬೆಟ್ಟು-ಪಳ್ಳಿಗುಡ್ಡೆ ಸಂಪರ್ಕಕ್ಕೆ ಮುಖ್ಯರಸ್ತೆ ಇದಾಗಿದ್ದು, ಇಲ್ಲಿನ ಶಾಲಾ ವಾಹನಗಳು, ಖಾಸಗಿ ವಾಹನಗಳು ಅಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿರುತ್ತದೆ. ವಾಹನ ದಟ್ಟಣೆ, ಜನತೆಯ ಬೇಡಿಕೆಗನುಗುಣವಾಗಿ ಇಲ್ಲಿನ ರಸ್ತೆಗೆ ಕಾಂಕ್ರೀಟ್ ಹಾಕಲಾಗಿರುತ್ತದೆ. ಇದರ ನಡುವೆ ನೀರು ಹರಿಯುವ ತೋಡೊಂದಿದ್ದು, ಅಲ್ಲಿ ಅಡ್ಡಲಾಗಿ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ನಿರ್ಮಿಸಿ ರಸ್ತೆಯ ಸುಗಮ ಸಂಚಾರಕ್ಕೆ ಕಾಮಗಾರಿ ನಡೆದಿದೆ.
ಆದರೆ ಕಳೆದ ಕೆಲ ವರ್ಷಗಳಿಂದ ಇಲ್ಲಿ ಅಳವಡಿಸಲಾದ ಕಾಂಕ್ರೀಟ್ ಸ್ಲ್ಯಾಬ್ ಗಳು ಮುರಿದು ವಾಹನ ಸಂಚಾರಕ್ಕೆ ಆಡಚಣೆಯಾಗುತ್ತಿದೆ. ಕಾಂಕ್ರೀಟ್ ಸ್ಲ್ಯಾಬ್ ಗಳ ನಿರ್ಮಾಣಕ್ಕೆ ಅಳವಡಿಸಲಾದ ಕಬ್ಬಿಣದ ಸರಳುಗಳು ಮೇಲೆದ್ದು ಪಾದಾಚಾರಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಮಳೆಗಾಲ ಮತ್ತು ರಾತ್ರಿಯ ವೇಳೆಯಲ್ಲಿ ಈ ಸ್ಪಾಟ್ ತುಂಬಾ ಅಪಾಯಕಾರಿಯಾಗಿದ್ದು ಕೆಲ ಮಂದಿ ಮಕ್ಕಳು, ಸೈಕಲ್ ಸವಾರರು ಬಿದ್ದಿರುತ್ತಾರೆ. ವಾಹನಗಳು ಸರ್ಕಸ್ ಸವಾರಿಯ ಮೂಲಕ ಸಂಚರಿಸುತ್ತಿದೆ. ಸಂಬಂಧ ಪಟ್ಟವರು ಕೂಡಲೇ ಎಚ್ಚೆತ್ತು ಮುಂದೆ ಬಂದೊದಗಬಹುದಾದ ಗಂಭೀರ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಇದನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಮತ್ತು ಅಪಾಯಕ್ಕೆ ತಡೆಯೊಡ್ಡಬೇಕಾಗಿ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇಲ್ಲಿ ಒಂದು ಲಾರಿಯು ಬ್ಯಾಲೆನ್ಸ್ ತಪ್ಪಿ ವಾಲಿತ್ತು. ಸೈಕಲ್ ಸವಾರರು ಬಿದ್ದಿರುತ್ತಾರೆ. ಮಕ್ಕಳು ಕಾಂಕ್ರೀಟ್ ಸ್ಲಾ$Âಬ್‌ಗಳ ನಡುವೆ ಸಿಲುಕುತ್ತಿದ್ದಾರೆ. ಕಬ್ಬಿಣದ ಸರಳುಗಳು ಅಪಾಯಕಾರಿಯಾಗಿದೆ. ಶಾಶ್ವತವಾಗಿ ಇದಕ್ಕೆ ಪರಿಹಾರ ಕಾಮಗಾರಿ ನಡೆಸಬೇಕಾದ ತೀರಾ ಅವಶ್ಯಕತೆ ಇದೆ. ಕೋಟೆ ಗ್ರಾಮ ಪಂಚಾಯತ್ ಈ ಬಗ್ಗೆ ಸುವ್ಯವಸ್ಥೆಯನ್ನು ಕಲ್ಪಿಸಲಿ
– ಅನ್ವರ್ ಹುಸೈನ್, ಸ್ಥಳೀಯ ನಿವಾಸಿ
ಎರಡು ಫ್ಯಾಕ್ಟರಿಗಳಿಗೆ ಈ ಭಾಗವಾಗಿ ಸಂಚರಿಸುವ ಅಧಿಕ ಭಾರದ ಘನವಾಹನ ಸಂಚರಿಸಿ ಈ ಸಮಸ್ಯೆ ತಲೆದೋರಿದೆ. ಪೂರ್ಣ ಪ್ರಮಾಣದಲ್ಲಿ ಶಾಶ್ವತವಾಗಿ ಸರಿಪಡಿಸಲು ಲಕ್ಷಕ್ಕೂ ಮಿಕ್ಕಿ ಅನುದಾನದ ಅವಶ್ಯಕತೆ ಇದ್ದು ಜಿಲ್ಲಾ ಪಂಚಾಯತ್ ಅಥವಾ ತಾಲೂಕು ಪಂಚಾಯತ್ ಸದಸ್ಯರ ಅನುದಾನಕ್ಕಾಗಿ ಬೇಡಿಕೆ ಇರಿಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ
– ರತ್ನಾಕರ ಕೋಟ್ಯಾನ್, ಸ್ಥಳೀಯ ವಾರ್ಡು ಸದಸ್ಯ,
ಕೋಟೆ ಗ್ರಾಮ ಪಂಚಾಯತ್