Advertisement

ಸಾರ್ವಜನಿಕರ ಬಳಕೆಗಿಲ್ಲ ಸ್ಕೈವಾಕ್‌

12:23 PM Sep 18, 2018 | Team Udayavani |

ಬೆಂಗಳೂರು: ನಗರದ ಪ್ರಮುಖ ಭಾಗಗಳಲ್ಲಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಗಳು ಸಾರ್ವಜನಿಕರ ಬಳಕೆಯಿಂದ ದೂರವಾಗಿದ್ದು, ಸದ್ಯ ನಗರದಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆಗಳು ಜನರಿಗಾಗಿಯೋ ಅಥವಾ ಜಾಹೀರಾತಿಗಾಗಿಯೋ ಎಂಬ ಅನುಮಾನಗಳು ಮೂಡುವಂತಾಗಿದೆ.

Advertisement

ಬಿಬಿಎಂಪಿಯಿಂದ ಸಾರ್ವಜನಿಕರ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಿರುವ ಸ್ಕೈವಾಕ್‌ಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಸ್ಥಳಗಳಲ್ಲಿ ನಿರ್ಮಿಸದಿರುವುದರಿಂದ ಮೇಲ್ಸೇತುವೆಗಳು ಬಳಕೆಯಾಗುತ್ತಿಲ್ಲ.

ಪ್ರಮುಖ ಜಂಕ್ಷನ್‌ಗಳಲ್ಲಿ ನಿರ್ಮಿಸಿದ ಸ್ಕೈವಾಕ್‌ಗಳಲ್ಲಿ ಲಿಫ್ಟ್ಗಳು ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ವಯಸ್ಸಾದವರು ಅಪಾಯದ ನಡುವೆಯೇ ರಸ್ತೆ ದಾಟಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್‌ಗಳನ್ನು ನಿರ್ಮಿಸುವುದು ಉದ್ದೇಶವಾಗಿದ್ದರೂ, ಹೆಚ್ಚು ಬಳಕೆಯಾಗುತ್ತಿರುವ ಜಾಹೀರಾತು ಪ್ರದರ್ಶನಕ್ಕೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಅದಕ್ಕೆ ಪೂರಕವೆಂಬಂತೆ ಪಾಲಿಕೆ ಸಹ ಪಾದಾಚಾರಿಗಳಿಗೆ ಅಗತ್ಯವಿರುವ ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಿಸದೆ, ಜಾಹೀರಾತು ಪ್ರದರ್ಶನಕ್ಕೆ ಯೋಗ್ಯವೆನಿಸಿದ ಸ್ಥಳಗಳಲ್ಲಿ ಮಾತ್ರ ಸ್ಕೈವಾಕ್‌ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ. ಈಗಾಗಲೇ ನಗರದಲ್ಲಿರುವ ಶೇ.90ರಷ್ಟು ಪಾದಚಾರಿ ಸುರಂಗ ಮಾರ್ಗ (ಸಬ್‌ವೇ)ಗಳು ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಇದೀಗ ಸ್ಕೈವಾಕ್‌ಗಳೂ ಅದೇ ಸಾಲು ಸೇರುತ್ತಿವೆ.

ಹೆಚ್ಚುತ್ತಲೇ ಇದೆ ಸ್ಕೈವಾಕ್‌ಗಳ ಸಂಖ್ಯೆ: ಪಾಲಿಕೆಯಿಂದ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈವಾಕ್‌ಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಮೊದಲಿಗೆ 80 ಸ್ಥಳಗಳಲ್ಲಿ ಸ್ಕೈವಾಕ್‌ ನಿರ್ಮಿಸಲು ಉದ್ದೇಶಿಸಿದ್ದ ಪಾಲಿಕೆ, ಇದೀಗ 153 ಕಡೆ ಸ್ಥಳ ಗುರುತಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫ‌ಲಕಗಳ ಪ್ರದರ್ಶನ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸ್ಕೈವಾಕ್‌ಗಳಿಗೆ ಬೇಡಿಕೆ ಬಂದಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. 

Advertisement

ನಯಾಪೈಸೆ ನಿರ್ವಹಣೆ ಇಲ್ಲ: ಈಗಾಗಲೇ ಮೇಖ್ರೀ ವೃತ್ತ, ನೆಹರು ತಾರಾಲಯ, ಎನ್‌.ಆರ್‌.ಚೌಕ, ಬಸವೇಶ್ವರ ವೃತ್ತ, ಕಸ್ತೂರಬಾ ರಸ್ತೆ ಸೇರಿದಂತೆ ನಗರದ 22 ಕಡೆ ಸ್ಕೈವಾಕ್‌ ನಿರ್ಮಿಸಲಾಗಿದೆ. ಇಲ್ಲಿ ಗುತ್ತಿಗೆ ಪಡೆದ ಏಜೆನ್ಸಿಗಳು ಕಡ್ಡಾಯವಾಗಿ ಸ್ಕೈವಾಕ್‌ಗಳಲ್ಲಿ ಮೆಟ್ಟಿಲ ಜತೆಗೆ ಲಿಫ್ಟ್ ಅಥವಾ ಎಸ್ಕಲೇಟರ್‌, ಸಿಸಿ ಕ್ಯಾಮೆರಾ ಅಳವಡಿಸಿ, ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕಾಗಿದೆ.

ಆದರೆ ಈ ಪೈಕಿ 8 ಕಡೆಗಳಲ್ಲಿ ಲಿಫ್ಟ್ ಸೌಲಭ್ಯವಿಲ್ಲ. ಎಸ್ಕಲೇಟರ್‌ ಅಳವಡಿಸಿರುವುದು ಕೋರಮಂಗಲ ಫೋರಂ ಬಳಿ ಮಾತ್ರ. ಇನ್ನು ಉಳಿದ ಕಡೆಗಳಲ್ಲಿ ವಿದ್ಯುತ್‌ ಅಥವಾ ನಿರ್ವಹಣೆ ಸಮಸ್ಯೆಯಿಂದ ಲಿಫ್ಟ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವೆಡೆ ಏಜೆನ್ಸಿಯವರು ವಿದ್ಯುತ್‌ ಉಳಿಸಲೆಂದು ಲಿಫ್ಟ್ಗಳನ್ನು ನಿಲ್ಲಿಸುತ್ತಿದ್ದಾರೆ ಎಂಬ ಆರೋಪಗಳೂ ಇವೆ. 

ಪಿಪಿಪಿ ಮಾದರಿಯಲ್ಲಿ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಪಾಲಿಕೆ ಜಾಗ ಮಾತ್ರ ನೀಡುತ್ತದೆ. ಉಳಿದಂತೆ ಜಾಹೀರಾತು ಕಂಪನಿಗಳು ತಮ್ಮ ಬಂಡವಾಳ ಹಾಕಿ ನಿರ್ಮಿಸಲಿದ್ದು, 30 ವರ್ಷ ಅವುಗಳ ನಿರ್ವಹಣೆ ನೋಡಿಕೊಳ್ಳಲಿವೆ. ಅದರಂತೆ ಗುತ್ತಿಗೆದಾರರು ಪಾಲಿಕೆಗೆ ಪ್ರತಿ ವರ್ಷ ನೆಲ ಬಾಡಿಗೆ ಹಾಗೂ ಜಾಹೀರಾತು ಶುಲ್ಕ ಪಾವತಿಸಬೇಕು. 

ಪಾಲಿಕೆಗೂ ಆದಾಯ: ಸ್ಕೈವಾಕ್‌ಗಳಿಂದ ಪಾಲಿಕೆಗೂ ಕೋಟ್ಯಂತರ ರೂ. ಆದಾಯ ಬರಲಿದೆ. ಸ್ಥಳ ಹಾಗೂ ಅಳತೆಗೆ ಅನುಗುಣವಾಗಿ ಪ್ರತಿ ಸ್ಕೈವಾಕ್‌ನಿಂದ ಸರಾಸರಿ ವಾರ್ಷಿಕ 8ರಿಂದ 10 ಲಕ್ಷ ರೂ. ನೆಲಬಾಡಿಗೆ ಹಾಗೂ ಜಾಹೀರಾತು ಶುಲ್ಕ ಬರುತ್ತದೆ. ಈಗಾಗಲೇ 22 ಸ್ಕೈವಾಕ್‌ಗಳಿಂದ ಹಾಗೂ ಹಿಂದೆ ಇದ್ದ ನಾಲ್ಕು ಸ್ಕೈವಾಕ್‌ಗಳಿಂದ ವಾರ್ಷಿಕ ಎರಡೂವರೆ ಕೋಟಿ ರೂ. ಆದಾಯ ಬಂದಿದೆ.

ಬಳಸಲು ಜನರ ಹಿಂದೇಟು: ಪ್ರಸ್ತುತ ನಗರದಲ್ಲಿ 33 ಸ್ಕೈವಾಕ್‌ಗಳು ಸಾರ್ವಜನಿಕ ಬಳಕೆಗೆ ಮುಕ್ತವಾಗಿದ್ದರೂ, ಜನ ಅವುಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುತ್ತಿಲ್ಲ. ಈ ಕುರಿತು ಜನರನ್ನು ಪ್ರಶ್ನಿಸಿದರೆ, ಸಮಯದ ಅಭಾವ, ಲಿಫ್ಟ್ ಇಲ್ಲ, ಮೆಟ್ಟಿಲು ಹತ್ತಬೇಕು, 10 ಸೆಕೆಂಡ್‌ ರಸ್ತೆ ದಾಟಲು ಎರಡು – ಮೂರು ನಿಮಿಷ ಯಾಕೆ ಬೇಕು, ಸ್ವತ್ಛತೆ ಇಲ್ಲ, ರಾತ್ರಿ ವೇಳೆ ಭದ್ರತೆ ಇರಲ್ಲ ಎಂಬಿತ್ಯಾದಿ ಉತ್ತರಗಳನ್ನು ನೀಡುತ್ತಾರೆ. 

ವಾರಕ್ಕೆ ಎರಡು ದಿನ ಲಿಫ್ಟ್ಗಳಲ್ಲಿ ತಾಂತ್ರಿಕ ಸಮಸ್ಯೆ ಇರುತ್ತದೆ. ಏಜೆನ್ಸಿಯವರಿಗೆ ತಿಳಿಸಿದರೆ, ಮೆಕ್ಯಾನಿಕ್‌ ಬಂದು ರಿಪೇರಿ ಮಾಡಲು ಒಂದು ದಿನಬೇಕು. ಎಲ್ಲ ಸರಿ ಇದ್ದರೂ ಜನ ಸ್ಕೈವಾಕ್‌ ಬಳಸುವುದಿಲ್ಲ.
-ನಿಂಗಪ್ಪ (ಹೆಸರು ಬದಲಿಸಲಾಗಿದೆ), ಸ್ಕೈವಾಕ್‌ ಭದ್ರತಾ ಸಿಬ್ಬಂದಿ

ಪಾದಚಾರಿ ಮೇಲ್ಸೇತುವೆಯ ಲಿಫ್ಟ್ಗಳು ಸದಾ ಹಾಳಾಗಿರುತ್ತವೆ. ಇನ್ನು ಮೆಟ್ಟಿಲು ಹತ್ತಿ ಇಳಿದರೆ ಕಾಲು ನೋವು ಬರುತ್ತವೆ. ಹೀಗಾಗಿ ಅನಿವಾರ್ಯವಾಗಿ ಅಪಾಯದ ನಡುವೆಯೂ ರಸ್ತೆ ದಾಟುತ್ತೇವೆ.
-ರಂಗನಾಥ್‌, ಪಾದಚಾರಿ

-ಬಳಕೆಗೆ ಮುಕ್ತವಾದವುಗಳು    22
-ಕಾಮಗಾರಿ ಪ್ರಗತಿಯಲ್ಲಿ    10
-ಕಾಮಗಾರಿ ಆರಂಭವಾಗಬೇಕಿರುವುದು    48 
-ಟೆಂಡರ್‌ ಪರಿಶೀಲನೆ ಹಂತ    27
-ಟೆಂಡರ್‌ ಕರೆದಿರುವುದು    19
-ಟೆಂಡರ್‌ ಕರೆಯಬೇಕಿರುವುದು    16
-ಹಳೇ ಸ್ಕೈವಾಕ್‌    11
-ಒಟ್ಟು ಸ್ಕೈವಾಕ್‌ಗಳು    142

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next