Advertisement

ಜಿಲ್ಲೆಗೆ ಮತ್ತೆ ಕಾಲಿಟ್ಟಿತೇ ಚರ್ಮಗಂಟು ವ್ಯಾಧಿ?

03:07 PM Sep 23, 2022 | Team Udayavani |

ಧಾರವಾಡ: ಕಳೆದ ಎರಡು ವರ್ಷಗಳ ಹಿಂದೆ ಜಾನುವಾರುಗಳಿಗೆ ತೀವ್ರ ಕಾಡಿದ್ದ ಚರ್ಮಗಂಟು ರೋಗ ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಜಿಲ್ಲೆಯ ರೈತಾಪಿ ವರ್ಗದಲ್ಲಿ ಆತಂಕ, ಭೀತಿಯ ವಾತಾವರಣ ಸೃಷ್ಟಿಸಿದೆ.

Advertisement

2020 ಸೆಪ್ಟೆಂಬರ್‌ ತಿಂಗಳಲ್ಲಿ ತೀವ್ರ ಕಾಣಿಸಿಕೊಂಡು ಜಾನುವಾರುಗಳನ್ನು ಹಿಂಡಿ ಹಿಪ್ಪೆ ಮಾಡಿದ್ದ ಈ ರೋಗ ಇದೀಗ ಮತ್ತೆ ಪತ್ತೆಯಾಗಿದೆ. ಒಂದೇ ವಾರದಲ್ಲಿ 300ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಇದರ ರೋಗ ಲಕ್ಷಣಗಳು ಕಂಡು ಬಂದಿವೆ. ಈಗಾಗಲೇ ಈ ಜಾನುವಾರುಗಳ ಮಾದರಿ ಸಂಗ್ರಹಿಸಿ, ದೃಢೀಕರಣಕ್ಕಾಗಿ ಕಳುಹಿಸಲಾಗಿದೆ.

ಈ ರೋಗ ಲಕ್ಷಣ ಜಾನುವಾರುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ರೋಗ ದೃಢಪಟ್ಟ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆ ಜಿಲ್ಲೆಗೆ ಬಂದಿದ್ದ 25 ಸಾವಿರ ಲಸಿಕೆಯನ್ನು ಈಗಾಗಲೇ ಆರೋಗ್ಯವಂತ ಜಾನುವಾರುಗಳಿಗೆ ನೀಡಿದೆ. ಮತ್ತೆ 25 ಸಾವಿರ ಲಸಿಕೆ ಪೂರೈಕೆಗೆ ಬೇಡಿಕೆಯಿಟ್ಟಿದೆ. ಇನ್ನು ರೋಗ ತಡೆಗೆ ಈಗಾಗಲೇ ಬೆಳಗಾವಿ ಸೇರಿದಂತೆ ಧಾರವಾಡ ಅಕ್ಕಪಕ್ಕದ ಜಿಲ್ಲೆಗಳಲ್ಲಿ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ಈಗಷ್ಟೇ ರೋಗ ಕಾಣಿಸಿಕೊಂಡಿದ್ದು, ಕೂಡಲೇ ನಿಷೇಧ ಹೇರಿದರೆ ರೋಗ ನಿಯಂತ್ರಣ ಸಾಧ್ಯವಾಗಿದೆ.

ರೋಗ ಲಕ್ಷಣಗಳು: ರೋಗಗ್ರಸ್ಥ ದನಗಳಲ್ಲಿ ಅತಿಯಾದ ಜ್ವರ, ಮಂಕು, ಮೂಗು, ಕಣ್ಣುಗಳಿಂದ ನೀರು ಸೋರುವಿಕೆ, ಜೊಲ್ಲು ಸುರಿಸುವುದು ಕಂಡು ಬರುತ್ತದೆ. ರೋಗಗ್ರಸ್ಥ ಪ್ರಾಣಿಗಳಲ್ಲಿ ಜ್ವರ ಕಾಣಿಸಿಕೊಂಡ ಒಂದು ವಾರದಲ್ಲಿ ಮೈತುಂಬಾ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಇವು ದೊಡ್ಡದಾಗಿ ಬೆಳೆದು ಗಾಯಗಳಲ್ಲಿ ಕೀವು ಸೋರಿ, ಚರ್ಮದ ಹಕ್ಕಳೆಗಳಾಗಿ ಕಿತ್ತು ಬರುತ್ತವೆ. ಗರ್ಭ ಧರಿಸಿದ ಜಾನುವಾರುಗಳಲ್ಲಿ ಗರ್ಭಪಾತ ಆಗುತ್ತದೆ. ಜಾನುವಾರುಗಳಲ್ಲಿ ಕಾಯಿಲೆ ಪ್ರಮಾಣ ಶೇ.3-85ರಷ್ಟಿದ್ದು, ಮರಣ ಪ್ರಮಾಣ ಶೇ.1-5 ರಷ್ಟಿದೆ.

ರೋಗ ನಿಯಂತ್ರಣಕ್ಕೆ ಮಾರ್ಗೋಪಾಯ: ರೋಗಪೀಡಿತ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ಬೇರ್ಪಡಿಸಿ, ಕೂಡಲೇ ಚಿಕಿತ್ಸೆಗೊಳಪಡಿಸಬೇಕು. ಪ್ರದೇಶ ನಿರ್ಬಂಧಿಸಿ, ತಕ್ಷಣ ಸಂಪರ್ಕ ತಡೆ ಒದಗಿಸಿ, ಆ ಪ್ರದೇಶದಲ್ಲಿ ಜಾನುವಾರುಗಳ ಸಾಗಾಣಿಕೆ(ಒಳಗೆ ಮತ್ತು ಹೊರಗೆ) ನಿರ್ಬಂಧಿಸಬೇಕು. ಇದರ ಜತೆಗೆ ಪಶುಮೇಳ, ಜಾತ್ರೆ, ಸಂತೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಆದರೆ ಜಿಲ್ಲೆಯಲ್ಲಿ ಇನ್ನೂ ದನದ ಸಂತೆಗೆ ಬ್ರೇಕ್‌ ಬಿದ್ದಿಲ್ಲ.

Advertisement

ಸೋಂಕಿತ ಆಹಾರ, ನೀರು, ವಸ್ತುಗಳು ಮತ್ತು ಮೃತದೇಹಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಈ ಕಾರ್ಯದಲ್ಲಿ ತೊಡಗಿದ ಪಶುವೈದ್ಯರು, ಸಿಬ್ಬಂದಿ ಮತ್ತು ವಾಹನಗಳ ನೈರ್ಮಲ್ಯ ಕ್ರಮಗಳನ್ನು ಅನುಸರಿಬೇಕು. ರೋಗವಾಹಕಗಳ ನಿಯಂತ್ರಣಕ್ಕೆ ಕ್ರಮಗಳನ್ನು ಅನುಸರಿಸಿದರೆ ರೋಗ ಮತ್ತಷ್ಟು ಹರಡುವುದನ್ನು ತಡೆಯಬಹುದು. ಜಾನುವಾರುಗಳ ಮೈ-ತಿಕ್ಕುವುದು, ಮೈಮೇಲೆ ಅಮಿತ್ರಾಜ್‌ ಅಥವಾ ಬೇವಿನ ಎಣ್ಣೆ ಸಿಂಪರಣೆ, ಐವರ್ಮೆಕ್ಷನ್‌ ಚುಚ್ಚುಮದ್ದು ಮತ್ತು ದನದ ಕೊಟ್ಟಿಗೆಗಳಿಗೆ ಕೀಟನಾಶಕಗಳ(ಪರ್ಮೆಥ್ರಿನ್‌, ಒಪಿಸಿ ಅಥವಾ ಕ್ಲೋರೆನೇಟೆಡ್‌ ಹೈಡ್ರೋಕಾರ್ಬನ್‌) ಬಳಕೆ ಮಾಡಬೇಕು. ಕೀಟಗಳ ಕಡಿತ ತಡೆಗಟ್ಟಲು ಜಾನುವಾರುಗಳಿಗೆ ಅಥವಾ ಶೆಡ್ಡಿಗೆ ಸೊಳ್ಳೆ ಪರದೆಗಳನ್ನು ಕೂಡ ಬಳಸಬಹುದು.

2020ರಲ್ಲಿ ಕಾಡಿದ್ದ ರೋಗ: 2020ರ ಸೆಪ್ಟೆಂಬರ್‌ ತಿಂಗಳಲ್ಲಿ 168 ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ ಚರ್ಮ ಗಂಟು ರೋಗವು(ಲಂಪಿ ಸ್ಕಿನ್‌ ಡಿಸೀಸ್‌) ಅಕ್ಟೋಬರ್‌ ತಿಂಗಳಾಂತ್ಯಕ್ಕೆ ಜಿಲ್ಲೆಯ ಐದು ತಾಲೂಕಿನ 291 ಗ್ರಾಮಗಳ 5168 ಜಾನುವಾರುಗಳಲ್ಲಿ ಪತ್ತೆಯಾಗಿತ್ತು. ಈ ಪೈಕಿ 114 ಎಮ್ಮೆ ಸೇರಿ ಉಳಿದಂತೆ ಆಕಳು, ಎತ್ತು, ಕರುಗಳಲ್ಲಿ ಕಾಣಿಸಿಕೊಂಡಿತ್ತು. 1.40 ಲಕ್ಷ ಲಸಿಕೆ ಹಾಕಲಾಗಿತ್ತು.

ರೋಗಕ್ಕೆ ದೇಶಿ ಮನೆಮದ್ದು

ಚರ್ಮ ಗಂಟು ರೋಗಕ್ಕೆ ತುತ್ತಾದ ಜಾನುವಾರುಗಳ ಮೇಲಿನ ಗಾಯಗಳಿಗೆ ಮತ್ತು ರೋಗವಾಹಕಗಳಾದ ಸೊಳ್ಳೆ-ನೊಣಗಳ ಹಾವಳಿ ನಿವಾರಣೆಗಾಗಿ ಮನೆ ಮದ್ದು ಕೂಡ ಸಿದ್ಧಪಡಿಸಬಹುದಾಗಿದೆ. ಅದಕ್ಕಾಗಿ 50 ಗ್ರಾಂ ಹಸಿ ಬೇವಿನ ಎಲೆಗಳು, 50 ಗ್ರಾಂ ತುಳಸಿ ಎಲೆಗಳು, 50 ಗ್ರಾಂ ಮೆಹಂದಿ ಎಲೆಗಳು, 10 ಬೆಳ್ಳುಳ್ಳಿ ಎಸಳುಗಳು ಮತ್ತು 50 ಗ್ರಾಂನಷ್ಟು ಅರಿಶಿಣ ಪುಡಿಯನ್ನು ಚೆನ್ನಾಗಿ ಅರೆದು ಬೇವಿನ ಎಣ್ಣೆಯಲ್ಲಿ (500 ಮಿ.ಲೀ) ಮಿಶ್ರಣ ಮಾಡಿ, ದೇಹದಾದ್ಯಂತ ಮತ್ತು ಶರೀರದ ಮೇಲೆ ಇರುವ ಹುಣ್ಣುಗಳ ಮೇಲೆ 10-15 ದಿನ ನಿಯಮಿತವಾಗಿ ಲೇಪಿಸಬೇಕು.

ಜಾನುವಾರು ಸಾಂಕ್ರಾಮಿಕ ರೋಗ

ಚರ್ಮಗಂಟು ರೋಗವು ಕ್ಯಾಪ್ರಿಫಾಕ್ಸ್‌ ಕುಟುಂಬಕ್ಕೆ ಸೇರಿದ ವೈರಾಣುವಿನಿಂದ ಜಾನುವಾರುಗಳಿಗೆ ಹರಡುತ್ತದೆ. ಆಕಳುಗಳು ಮತ್ತು ಎಮ್ಮೆಗಳಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದ ಹಾಲಿನ ಉತ್ಪಾದನೆ ಶೇ.15-20 ಕಡಿಮೆಯಾಗುತ್ತದೆ. ರೋಗವಾಹಕಗಳಾದ ಯಾವುದೇ ಕಚ್ಚುವ ನೊಣ, ಉಣ್ಣೆ, ಸೊಳ್ಳೆಗಳಿಂದ ಹರಡುತ್ತದೆ. ರೋಗಗ್ರಸ್ಥ ಪ್ರಾಣಿಗಳ ಗಾಯಗಳ ನೇರ ಸಂಪರ್ಕದಿಂದ ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಗಳಿಂದ, ಹಾಲು ಮತ್ತು ವೀರ್ಯದಿಂದಲೂ ಕಾಣಿಸಿಕೊಳ್ಳುತ್ತದೆ. ಆದರೆ ಈ ರೋಗವು ಪ್ರಾಣಿಜನ್ಯವಲ್ಲ.(ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ)

51 ಗ್ರಾಮಗಳಲ್ಲಿ ಸೋಂಕು ಪತ್ತೆ

ಜಿಲ್ಲೆಯ ಕುಂದಗೋಳ ಹಾಗೂ ನವಲಗುಂದ ತಾಲೂಕಿನ 51 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈ ಭಾಗದ 298 ಜಾನುವಾರುಗಳಲ್ಲಿ ರೋಗ ದೃಢಪಟ್ಟಿದ್ದು, ಈ ಪೈಕಿ 65 ಜಾನುವಾರು ಈಗಾಗಲೇ ಚೇತರಿಕೆ ಕಂಡಿವೆ. ಉಳಿದಂತೆ 233 ಜಾನುವಾರುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನು ಈ ರೋಗ ಪತ್ತೆಯಾದ 51 ಗ್ರಾಮಗಳ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯ ಗ್ರಾಮಗಳ ಆರೋಗ್ಯವಂತ ಜಾನುವಾರುಗಳಿಗೆ ಮೇಕೆ ಸಿಡುಬಿನ ಲಸಿಕೆ ಹಾಕುವ ಕಾರ್ಯ ಸಾಗಿದೆ. ಜಿಲ್ಲೆಯ ಗಡಿ ಭಾಗದಲ್ಲೂ ವೈದ್ಯರ ತಂಡವು ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯ (ಆಡಳಿತ) ಮುಖ್ಯ ಪಶುವೈದ್ಯಾಧಿಕಾರಿ ಡಾ| ಮನೋಹರ ಪಿ. ದ್ಯಾಬೇರಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಚರ್ಮ ಗಂಟು ರೋಗ ಜಿಲ್ಲೆಯಲ್ಲಿಯೂ ಪತ್ತೆಯಾಗಿದ್ದು, 25 ಸಾವಿರ ಲಸಿಕೆ ಆಗಲೇ ನೀಡಲಾಗಿದೆ. ಇನ್ನು 25 ಸಾವಿರ ಲಸಿಕೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ರೋಗ ಹತೋಟಿಗಾಗಿ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟಕ್ಕೂ ನಿಷೇಧ ಮಾಡಲು ಕ್ರಮ ಕೈಗೊಳ್ಳಲಾಗುವುದು.  -ಉಮೇಶ ಕೊಂಡಿ, ಉಪನಿರ್ದೇಶಕರು, ಪಶುಪಾಲನಾ ಇಲಾಖೆ

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next