Advertisement
ನ.22ರವರೆಗೆ ಪಶು ಸಂಗೋಪನಾ ಇಲಾಖೆ ನೀಡಿರುವ ಮಾಹಿತಿ ಅನ್ವಯ ಜಿಲ್ಲೆಯ ಐದು ತಾಲೂಕಿನ 228 ಗ್ರಾಮಗಳಲ್ಲಿ ಚರ್ಮ ಗಂಟು ರೋಗ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಇದಲ್ಲದೇ ಚರ್ಮ ಗಂಟು ರೋಗಕ್ಕೆ 288 ಜಾನುವಾರುಗಳು ಮೃತಪಟ್ಟಿದ್ದು, ಈ ಪೈಕಿ ಹುಬ್ಬಳ್ಳಿಯಲ್ಲಿಯೇ ಅಧಿಕ 79 ಜಾನುವಾರುಗಳು ಅಸುನೀಗಿವೆ.
Related Articles
Advertisement
ಸಂತೆ ನಿಷೇಧಿಸಿದರೂ ಮರಣ ಮೃದಂಗ
ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಸೆ.27ರಿಂದ ಅ.26ರವರೆಗೆ ಜಿಲ್ಲಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಹಾಗೂ ಜಾನುವಾರು ಸಾಗಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಇಷ್ಟಾದರೂ ದಿನದಿಂದ ದಿನಕ್ಕೆ ರೋಗ ಉಲ್ಬಣಗೊಂಡ ಕಾರಣ ನ.30ರವರೆಗೂ ನಿಷೇಧ ವಿಸ್ತರಿಸಿದೆ. ಆರಂಭದಲ್ಲಿ ಜಿಲ್ಲೆಯ ಬರೀ ಎರಡು ತಾಲೂಕಿನಲ್ಲಿದ್ದ ರೋಗ ಇದೀಗ ಐದು ತಾಲೂಕಿನಲ್ಲಿ ಕಂಡುಬಂದಿದೆ. ಎರಡು ವರ್ಷದ ಹಿಂದೆ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಂಡುಬಂದಿದ್ದರೂ ಇದರಿಂದ ಜಾನುವಾರುಗಳು ಮೃತಪಟ್ಟಿರಲಿಲ್ಲ. ಆದರೆ ಈ ಸಲ ಜಾನುವಾರುಗಳ ಮರಣ ಮೃದಂಗವೇ ಆಗುತ್ತಿದೆ.
ಚರ್ಮ ಗಂಟು ರೋಗದಿಂದ ರೈತಾಪಿ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ರೋಗಕ್ಕೆ ಬಲಿಯಾದ ಜಾನುವಾರು ಮಾಲೀಕರಿಗೆ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ. ಈವರೆಗೆ ಜಿಲ್ಲೆಗೆ ಮಂಜೂರಾದ ಒಟ್ಟು ಪರಿಹಾರ ಮೊತ್ತ 62 ಲಕ್ಷ 40 ಸಾವಿರ ಇದೆ. ಈ ಪೈಕಿ 7.95 ಲಕ್ಷ ಮಾತ್ರ ಬಿಡುಗಡೆ ಆಗಿದೆ. ಜಿಲ್ಲೆಯಲ್ಲಿ ಸಂಚಾರಿ ಆಸ್ಪತ್ರೆ ಬಿಟ್ಟು 113 ಪಶು ಆಸ್ಪತ್ರೆ ಇದೆ. ಪಶು ಸಂಗೋಪನೆ ಇಲಾಖೆಯ ಕೆಲ ವೈದ್ಯರು, ಸಿಬ್ಬಂದಿ ಬೇರೆ ಬೇರೆ ಕಡೆ ನಿಯೋಜನೆಯಲ್ಲಿದ್ದಾರೆ. ಹೀಗಾಗಿ ಸರ್ಕಾರ ಅವರನ್ನು ಮಾತೃ ಇಲಾಖೆಗೆ ಮರಳಿ ಕರೆ ತರಬೇಕು. ತಾತ್ಕಾಲಿಕವಾಗಿ ನಿವೃತ್ತರಾದವರನ್ನು ಸೇವೆಗೆ ನಿಯೋಜಿಸಬೇಕು. ಪರಿಹಾರ ಮೊತ್ತ ಏರಿಸಬೇಕು. ಈ ಕುರಿತು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗುವುದು. ಬಸವರಾಜ ಕೊರವರ, ಜನಜಾಗೃತಿ ಸಂಘದ ಅಧ್ಯಕ್ಷ
ಜಿಲ್ಲೆಯಲ್ಲಿ ಒಟ್ಟು 2.33 ಲಕ್ಷ ಜಾನುವಾರುಗಳಿದ್ದು, ಇದರಲ್ಲಿ ದನ, ಎಮ್ಮೆ, ಎತ್ತುಗಳು ಒಳಗೊಂಡ 1.87 ಲಕ್ಷ ಜಾನುವಾರುಗಳಿವೆ. ಈ ಪೈಕಿ ಈಗಾಗಲೇ 1,33,012 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದಂತೆ ಬೇಕಿರುವ ಲಸಿಕೆ ಎರಡ್ಮೂರು ದಿನಗಳಲ್ಲಿ ಬರಲಿದ್ದು, ಆದಷ್ಟು ಬೇಗ ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕುತ್ತೇವೆ. –ಡಾ| ಮನೋಹರ ಪಿ. ದ್ಯಾಬೇರಿ, ಪಶು ಪಾಲನಾ ಇಲಾಖೆ ಉಪನಿರ್ದೇಶಕರ ಕಚೇರಿ ಮುಖ್ಯ ಪಶುವೈದ್ಯಾಧಿಕಾರಿ
-ವಿಶೇಷ ವರದಿ