Advertisement

ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಗೆ ಆದ್ಯತೆ ಅನಿವಾರ್ಯ

10:02 PM Jun 23, 2019 | Lakshmi GovindaRaj |

ಚಾಮರಾಜನಗರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅನಿವಾರ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಹೇಳಿದರು.

Advertisement

ತಾಲೂಕಿನ ಸಂತೆಮರಹಳ್ಳಿಯ ಡಿಎಂ ಚಾರಿಟಬಲ್‍ ಟ್ರಸ್ಟ್‌ನಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ, ವಿವಿಧ ಉಚಿತ ತರಬೇತಿ ಕೋರ್ಸುಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಕೌಶಲ್ಯವಿರಬೇಕು: ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಕೇವಲ ಶಿಕ್ಷಣ ಇದ್ದರೆ ಸಾಲದು. ಜತೆಗೆ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿತುಕೊಳ್ಳುವ ಅನಿವಾರ್ಯವಿದೆ. ಕೌಶಲ್ಯ ಇಲ್ಲದಿದ್ದರೆ ಶಿಕ್ಷಣ ಹೊಂದಿದ್ದರು ಸಹ ಉದ್ಯೋಗ ಸಿಗದಂತಾಗುತ್ತದೆ ಎಂದು ಎಚ್ಚರಿಸಿದರು.

ವಿವಿಧ ಕೋರ್ಸ್‌ ವ್ಯಾಸಂಗ ಮಾಡಿ: ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣ ಹೊಂದಿದ್ದರೂ ಪೂರಕವಾದ ತರಬೇತಿ ಕೌಶಲ್ಯಗಳನ್ನು ಪಡೆಯದೆ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಕಾರಣ ಹೆಣ್ಣು ಮಕ್ಕಳನ್ನು ಪೋಷಕರು ಪಟ್ಟಣಗಳಿಗೆ ತರಬೇತಿಗಾಗಿ ಅವರಲ್ಲಿರುವ ಪ್ರತಿಭೆಯನ್ನು ಕಮರುವಂತೆ ಮಾಡಲಾಗುತ್ತಿದೆ.

ಇಂತಹ ಪರಿಸ್ಥಿತಿಯನ್ನು ಪೋಷಕರು ಸೃಷ್ಟಿಸಬಾರದು ಹಾಗೆಯೇ ವಿದ್ಯಾರ್ಥಿನಿಯರು ಕೂಡ ತಮ್ಮ ಪೋಷಕರನ್ನು ಮನವೊಲಿಸಿ ಕಂಪ್ಯೂಟರ್‌ ಮತ್ತು ವಿವಿಧ ರೀತಿಯ ಕೋರ್ಸ್‌ಗಳನ್ನು ಕಲಿಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

Advertisement

ನಿಜಕ್ಕೂ ಸಂತೋಷದ ವಿಷಯ: ಶಿಕ್ಷಣ ಪಡೆದ ಗೃಹಿಣಿಯರು ಮನೆಯಿಂದ ಹೊರಗೆ ಬರುವುದೇ ಕಷ್ಟ ಎನ್ನುವ ಪರಿಸ್ಥಿತಿ ಇನ್ನೂ ಕೆಲವು ಹಳ್ಳಿಗಳಲ್ಲಿ ಇದೆ. ಇದರಿಂದ ಹೆಣ್ಣು ಮಕ್ಕಳು ಶಿಕ್ಷಣ ಕಲಿತಿದ್ದರೂ ಪ್ರಯೋಜನಕ್ಕೆ ಬಾರದಂತೆ ಆಗುತ್ತಿದೆ. ಇದನ್ನು ಕಡಿಮೆ ಮಾಡಲು ಸಂತೆಮರಹಳ್ಳಿಯ ಸುತ್ತಮುತ್ತ ಕೆಲವು ಗೃಹಿಣಿಯರು ಕಂಪ್ಯೂಟರ್‌ ಮತ್ತು ವಿವಿಧ ಕೋರ್ಸ್‌ಗಳಿಗೆ ಆಸಕ್ತಿವಹಿಸಿ ಬರುತ್ತಿರುವುದು ನಿಜಕ್ಕೂ ಸಂತೋಷದ ವಿಷಯ ಎಂದು ಪ್ರಶಂಸಿಸಿದರು.

ಇಂಗ್ಲಿಷ್‌ ತರಬೇತಿ ನೀಡುತ್ತಿರುವುದು ಶ್ಲಾಘನೀಯ: ಕೌಶಲ್ಯ ಅಭಿವೃದ್ಧಿ ಕೋರ್ಸುಗಳನ್ನು ನಡೆಸುವ ಸಂಸ್ಥೆಗಳು ಸಂತೆಮರಹಳ್ಳಿ ಸುತ್ತಮುತ್ತ ಇರಲಿಲ್ಲ. ಇಂತಹ ಗ್ರಾಮದಲ್ಲಿ ಡಿಎಂ ಚಾರಿಟಬಲ್‍ ಟ್ರಸ್ಟ್‌ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್‌, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ತರಬೇತಿ ಹಾಗೂ ನ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಹೆಣ್ಣು ಮಕ್ಕಳೇ ಹೆಚ್ಚು: ಡಿಎಂ ಚಾರಿಟಬಲ್‍ ಟ್ರಸ್ಟ್‌ನಲ್ಲಿ ತರಬೇತಿ ಪಡೆಯುತ್ತಿರುವರಲ್ಲಿ ಹೆಣ್ಣುಮಕ್ಕಳ ಹೆಚ್ಚಾಗಿದ್ದಾರೆ. ಅದರಲ್ಲೂ ಎಸ್‍ಎಸ್‍ಎಲ್‌ಸಿ , ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದವರಿದ್ದಾರೆ. ಇಂಥವರು ನಿಜಕ್ಕೂ ಉನ್ನತ ಶಿಕ್ಷಣ ಪಡೆದು ಐಎಎಸ್‌ ಮತ್ತು ಐಪಿಎಸ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಸಲಹೆ ನೀಡಿದರು.

ಪೂರ್ಣಾವಧಿ ಕೋರ್ಸ್‌ ಮಾಡಿ: ಬಿಎಂ ಚಾರಿಟಬಲ್‍ ಟ್ರಸ್ಟ್‌ ನಡೆಸುತ್ತಿರುವ ತರಬೇತಿ ಕೇಂದ್ರದಲ್ಲಿ ಕೆಲವು ಉತ್ಸಾಹಿ ಯುವಕರಿದ್ದಾರೆ. ಇವರು ವಿವಿಧ ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳನ್ನು ಕೇವಲ ಒಂದೆರಡು ತಿಂಗಳ ಅವರಿಗೆ ಮಾತ್ರ ಸೀಮಿತಗೊಳಿಸದೆ ಪೂರ್ಣಾವಧಿಯ ಕೋರ್ಸ್‌ಗಳನ್ನು ಮಾಡಿದರೆ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಲತಾಕುಮಾರಿ ಅವರಿಗೆ ಸನ್ಮಾನಿಸಿದರು.
ಸಂಸ್ಥೆಯ ವ್ಯವಸ್ಥಾಪಕ ಆರ್‌. ಶಿವು, ಸಹ ವ್ಯವಸ್ಥಾಪಕರಾದ ಜೆ. ಕಿರಣ್, ಹಾಗೂ ಪೂಜಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next