Advertisement

ಅರವತ್ತು ರೂಪಾಯಿಗಳ ಸೀರೆ

06:00 AM May 22, 2018 | |

ನನಗೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಂಪ್ರದಾಯಿಕ ತತ್ವಗಳಿಗೆ ಅಂಟಿಕೊಂಡಿದ್ದ ಅಣ್ಣನಿಂದ ಸಮ್ಮತಿ ದೊರಕಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ನನಗೆ ಅಂದಿನ ದಿನಗಳಲ್ಲಿ ಉದ್ಯೋಗ ದೊರೆಯುವುದು ಕಷ್ಟವಾಗಿರಲಿಲ್ಲ. ನಮ್ಮ ಮನೆತನದಲ್ಲಿ ಹೆಣ್ಣುಮಕ್ಕಳು ಯಾರೂ ಕೆಲಸಕ್ಕೆ ಹೋಗಬಾರದು ಎಂಬ ಆಜ್ಞೆ ಅಣ್ಣನಿಂದ. ತಂದೆಯನ್ನು ಕಳೆದುಕೊಂಡಿದ್ದ ನಾವು ಅವನ ಮಾತಿಗೆ ತಲೆ ಬಾಗಲೇಬೇಕಾಗಿತ್ತು. ಕಿತ್ತು ತಿನ್ನುವ ಬಡತನ. ಸಣ್ಣಪುಟ್ಟ ಬೇಕು ಬೇಡಗಳಿಗೂ ಮನೆಯವರನ್ನು ಅವಲಂಬಿಸಬೇಕಾಗಿತ್ತು. 

Advertisement

ಅಂಥ ಸಮಯದಲ್ಲಿ ನನಗೆ ನೆರವಾದವಳು ನನ್ನ ಗೆಳತಿ. ಆ ದಿನಗಳಲ್ಲಿ ಮಹಿಳಾ ಸಮಾಜದಿಂದ ಬಾಸ್ಕೆಟ್‌ಗಳನ್ನು ಹೆಣೆಸಿ, ಒಂದಕ್ಕೆ ಹನ್ನೆರಡು ರೂಪಾಯಿಗಳಂತೆ ಕೊಡುತ್ತಿದ್ದರು. ಅವುಗಳನ್ನು ಒಬ್ಬಳೇ ಮಾಡಿ ಪೂರೈಸುವ ಅರ್ಹತೆಯಿದ್ದರೂ ಆ ಗೆಳತಿ ನನ್ನ ಕಷ್ಟವನ್ನು ನೋಡಿ, ಅದರಲ್ಲಿ ಅರ್ಧವನ್ನು ನನಗೂ ವಹಿಸಿ ನಾನೂ ಅಲ್ಪಸ್ವಲ್ಪ ದುಡ್ಡು ಗಳಿಸುವಂತೆ ಮಾಡಿದಳು.

ಮಹಿಳಾ ಮಂಡಳಿಯವರು ಸದಸ್ಯೆಯರಿಂದ ಹಣ ಸಂಗ್ರಹಿಸಿ, ಅದನ್ನು ಅಂಚೆ ಕಚೇರಿಯ ಉಳಿತಾಯ ಖಾತೆಗೆ ತಿಂಗಳು ತಿಂಗಳೂ ಠೇವಣಿ ಇಡುತ್ತಿದ್ದರು. ಅದನ್ನು ಬರೆದು ಕಚೇರಿಗೆ ಕಳುಹಿಸುವ ಜವಾಬ್ದಾರಿಯನ್ನು ನನಗೇ ವಹಿಸಿ, ತಿಂಗಳಿಗೆ ಮೂವತ್ತು ರೂಪಾಯಿಗಳಂತೆ ಕೊಡುತ್ತಿದ್ದರು. 

ಈ ಎಲ್ಲಾ ಹಣವನ್ನು ಸಂಗ್ರಹಿಸಿ, ಅಂಚೆ ಕಚೇರಿಯಲ್ಲಿಟ್ಟು ಅದರಿಂದ 60-70 ರೂಪಾಯಿಗಳನ್ನು ತೆಗೆದು ನನ್ನ ಅಮ್ಮನಿಗೆ ಒಂದು ಸೀರೆ ತೆಗೆದುಕೊಟ್ಟೆ. ಹೊರಗಡೆ ಉಟ್ಟುಕೊಂಡು ಹೋಗಲು ಒಂದು ಒಳ್ಳೆಯ ಸೀರೆಯೂ ಇಲ್ಲದಿದ್ದ ಅವರಿಗೆ ಇದು ಪೀತಾಂಬರದಂತೆ ಭಾಸವಾಗಿ ಸೀರೆಯನ್ನು ಕಂಡು ಗಳಗಳನೆ ಅತ್ತಿದ್ದರು. ಅದನ್ನು ಅವರು ನಾಲ್ಕಾರು ಸಲ ಉಟ್ಟಿರಬಹುದು. ನಂತರ ದುರದೃಷ್ಟಕ್ಕೆ ಹಾಸಿಗೆ ಹಿಡಿದುಬಿಟ್ಟರು. 

ಸೀರೆಯ ಮೌಲ್ಯ ಎಷ್ಟೇ ಇರಲಿ, ಅದನ್ನು ಅವರು ಎಷ್ಟು ಬಾರಿಯೇ ಉಟ್ಟಿರಲಿ, ನನ್ನ ಅಮ್ಮನಿಗೆ ಮೊದಲ ಸಂಪಾದನೆಯಿಂದ ತೆಗೆದುಕೊಟ್ಟ ಉಡುಗೊರೆ ಅದು ಎಂಬ ತೃಪ್ತಿ ನನ್ನಲ್ಲಿ ಇನ್ನೂ ಮಾಸಿಲ್ಲ. 

Advertisement

ಪುಷ್ಪಲತಾ ಎನ್‌.ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next