Advertisement

ಆರನೇ ವೇತನ ಆಯೋಗ ಕಾರ್ಯಾರಂಭ

07:20 AM Jul 23, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಸ್ಥಾಪಿಸಿರುವ ಆರನೇ ವೇತನ ಆಯೋಗ ತನ್ನ ಕೆಲಸ ಆರಂಭಿಸಿದ್ದು, ಆದಷ್ಟು ಶೀಘ್ರ ವರದಿ ಕೊಡುವ ನಿಟ್ಟಿನಲ್ಲಿ ಜುಲೈ 27ರಿಂದ ಸರ್ಕಾರಿ ನೌಕರರ ಸಂಘಟನೆಗಳೊಂದಿಗೆ ಸಮಾಲೋಚನೆ ಆರಂಭಿಸಲಿದೆ.

Advertisement

ಇದರ ಜತೆಗೆ ಪ್ರಶ್ನಾವಳಿಗಳನ್ನೂ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸಮಾಲೋಚನೆ, ಪ್ರಶ್ನಾವಳಿಗಳಿಗೆ ಉತ್ತರ
ಪಡೆಯುವುದು, ಸರ್ಕಾರಿ ನೌಕರರ ಸಂಘಟನೆಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಗೆ ಕಾಲಮಿತಿ
ನಿಗದಿಪಡಿಸಿರುವ ಆಯೋಗ, ಇವೆಲ್ಲವನ್ನೂ ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಿದೆ. ನಂತರ
ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಲಾಗುತ್ತದೆ.

ಒಂದು ವೇಳೆ ವರದಿ ವಿಳಂಬವಾಗುವುದಾದರೆ ಮಾತ್ರ ನೌಕರರಿಗೆ ಮಧ್ಯಂತರ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ
ಶಿಫಾರಸು ಮಾಡಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಕುರಿತು ಮಾಹಿತಿ ನೀಡಿದ ಆಯೋಗದ ಅಧ್ಯಕ್ಷರೂ ಆಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌.ಶ್ರೀನಿವಾಸಮೂರ್ತಿ, ಜುಲೈ 27ರಿಂದ ಸರ್ಕಾರಿ ನೌಕರರೊಂದಿಗೆ ಸಮಾಲೋಚನೆ ಆರಂಭಿಸಿ ಆಗಸ್ಟ್‌ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಸರ್ಕಾರಿ ನೌಕರರ ನೋಂದಾಯಿತ ಸಂಘಗಳು ಮತ್ತು ಇತರರೊಂದಿಗೆ ಸಮಾಲೋಚನಾ ಸಭೆಗಳನ್ನು ಏರ್ಪಡಿಸುವ ಕುರಿತು ಆಯೋಗವು ಪ್ರಶ್ನಾವಳಿಗಳನ್ನುಸಿದಟಛಿಪಡಿಸಿದೆ. ಈ ಪ್ರಶ್ನಾವಳಿಗಳಿಗೆ ಉತ್ತರ ಸಲ್ಲಿಸುವುದರ ಜತೆಗೆ ಇತರೆ ವಿಚಾರಗಳೇನಾದರೂ ಇದ್ದಲ್ಲಿ ಆ ಕುರಿತು ಮಾಹಿತಿ ಸಲ್ಲಿಸುವಂತೆ ಸರ್ಕಾರಿ ನೌಕರರು,  ಪಿಂಚಣಿದಾರರು, ನೌಕರರ ಮತ್ತು ಪಿಂಚಣಿದಾರರ ಸಂಘಗಳಿಗೆ ಸೂಚಿಸಲಾಗಿದೆ ಎಂದರು.

Advertisement

ಏಳು ರೀತಿಯ ಪ್ರಶ್ನಾವಳಿ: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದಂತೆ ಏಳು ಪ್ರತ್ಯೇಕ ಪ್ರಶ್ನಾವಳಿಗಳನ್ನು ಆಯೋಗವು ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ. ಪ್ರಶ್ನಾವಳಿಗಳ ಜತೆಗೆ ಸರ್ಕಾರಿ ನೌಕರರ ಪ್ರಸ್ತುತ ವೇತನ ರಚನೆಯ ವಿವರಗಳಿರುವ ಟಿಪ್ಪಣಿಗಳನ್ನೂ ನೀಡಲಾಗಿದೆ ಎಂದು ತಿಳಿಸಿದರು.ಇದಲ್ಲದೆ, ಸಮಾಲೋಚನೆ ಪ್ರಕ್ರಿಯೆಯಲ್ಲಿ ಸಂಸತ್‌ ಸದಸ್ಯರು, ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು, ಪ್ರಮುಖ ಚುನಾಯಿತ ಸಂಸ್ಥೆಗಳ ಸದಸ್ಯರು, ಸರ್ಕಾರದ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರಂತಹ ಹಿರಿಯ ಅಧಿಕಾರಿಗಳ ಅಭಿಪ್ರಾಯಗಳನ್ನು ಪಡೆಯಲೂ ಉದ್ದೇಶಿಸಲಾಗಿದೆ. ಸಾರ್ವಜನಿಕರು ಮತ್ತು ನೌಕರರ ಅಭಿಪ್ರಾಯ ಪಡೆಯಲು ಆಯ್ದ ಜಿಲ್ಲಾ ಕೇಂದ್ರಗಳಲ್ಲೂ ಆಯೋಗದ ಸಭೆ ನಡೆಸಲಾಗುವುದು ಎಂದು ಹೇಳಿದರು.

ಒಟ್ಟಾರೆಯಾಗಿ ಆರನೇ ವೇತನ ಆಯೋಗವು ಸುಮಾರು 5.2 ಲಕ್ಷ ಸರ್ಕಾರಿ ನೌಕರರ ವೇತನ ರಚನೆ ಮತ್ತು ಅವರಿಗೆ ವಿವಿಧ ವೇತನಗಳ ಪರಿಷ್ಕರಣೆ ಬಗ್ಗೆ ಶಿಫಾರಸು ಮಾಡಬೇಕಾಗಿದೆ. ಈ ಶಿಫಾರಸುಗಳು ಸುಮಾರು 5.56 ಲಕ್ಷ ಪಿಂಚಣಿದಾರರು ಹಾಗೂ 1.5 ಲಕ್ಷ ಸ್ಥಳೀಯ ಸಂಸ್ಥೆಗಳ, ಅನುದಾನಿತ ಶಿಕ್ಷಣ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

ಎಲ್ಲಿಗೆ ಉತ್ತರ ಸಲ್ಲಿಸಬೇಕು? ಏಳು ರೀತಿಯ ಪ್ರಶ್ನಾವಳಿಗಳನ್ನು ಸಿದಟಛಿಪಡಿಸಿರುವ ಆಯೋಗ ಅದನ್ನು ತನ್ನ ವೆಬ್‌ಸೈಟ್‌  ನಲ್ಲಿ ಪ್ರಕಟಿಸಿದ್ದು, ಇವುಗಳಿಗೆ ಉತ್ತರ ಹಾಗೂ ಆಯೋಗಕ್ಕೆ ಸಲ್ಲಿಸಬೇಕಾದ ಇನ್ಯಾವುದೇ ಮಾಹಿತಿ, ಮನವಿಗಳನ್ನು ಕಾರ್ಯದರ್ಶಿ, 6ನೇ ವೇತನ ಆಯೋಗ, ಕಾμ ಬೋರ್ಡ್‌ ಬಿಲ್ಡಿಂಗ್‌ (ಮೊದಲನೇ ಮಹಡಿ), ಡಾ.ಅಂಬೇಡ್ಕರ್‌ ವೀದಿ, ಬೆಂಗಳೂರು-1 ಈ ವಿಳಾಸಕ್ಕೆ ಕಳುಹಿಸುವಂತೆ ಕೋರಿದೆ.

ದಕ್ಷರಿಗೆ ಇನ್‌ಸೆಂಟಿವ್‌? ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರನ್ನು ಪ್ರೋತ್ಸಾಹಿಸಲು ನೌಕರರ ಸಾಧನೆ ಆಧರಿಸಿ ಇನ್‌ಸೆಂಟಿವ್‌ ನೀಡುವ ಕುರಿತಂತೆ ಪರಿಶೀಲಿಸಿ ವರದಿ ನೀಡಲು ರಾಜ್ಯ ಸರ್ಕಾರ ಆರನೇ ವೇತನ ಆಯೋಗಕ್ಕೆ ಸೂಚನೆ ನೀಡಿದೆ. ಕಾರ್ಪೋರೇಟ್‌ ಕಂಪನಿಗಳು ತನ್ನ ಉತ್ತಮ ನೌಕರರನ್ನು ಪ್ರೋತ್ಸಾಹಿಸಲು ಇನ್‌ಸೆಂಟಿವ್‌ ನೀಡುತ್ತವೆ. ಅದೇ ಮಾದರಿಯಲ್ಲಿ ಸರ್ಕಾರಿ ನೌಕರರಿಗೂ ಇನ್‌ಸೆಂಟಿವ್‌ ನೀಡುವ ಕುರಿತು 
ಪರಿಶೀಲಿಸುವಂತೆ ಸರ್ಕಾರ ಸೂಚಿಸಿದೆ ಎಂದು ಆಯೋಗದ ಅಧ್ಯಕ್ಷ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ವೇತನ ಆಯೋಗವು ವರದಿ ನೀಡುವಾಗ, ಸರ್ಕಾರಿ ನೌಕರರ ವೇತನ ಹೆಚ್ಚಳದ ಜತೆಗೆ ಆಡಳಿತ ಸುಧಾರಣೆ
ಬಗ್ಗೆಯೂ ಶಿಫಾರಸು ಗಳನ್ನು ಮಾಡುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಗಮನಹರಿಸುತ್ತದೆ. ಆ ನಿಟ್ಟಿನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿರಬಹುದು. ಅಂತಿಮವಾಗಿ ಇಲಾಖಾ ಮುಖ್ಯಸ್ಥರು ನೀಡುವ ವರದಿ ಆಧರಿಸಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಹೀಗಾಗಿ ಹುದ್ದೆಗಳ ಕಡಿತ, ಹೊರಗುತ್ತಿಗೆ ವಿಚಾರದಲ್ಲಿ ಈಗ ಏನೂ ಹೇಳಲು ಸಾಧ್ಯವಿಲ್ಲ
.
– ಬಿ.ಪಿ.ಮಂಜೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next