Advertisement

ಆರಕ್ಕೇರಿದ ಆರು ಬೋಗಿ ರೈಲುಗಳು

06:11 AM Mar 02, 2019 | Team Udayavani |

ಬೆಂಗಳೂರು: ತಿಂಗಳ ಅಂತರದಲ್ಲಿ “ನಮ್ಮ ಮೆಟ್ರೋ’ಗೆ ಮತ್ತೂಂದು ಆರು ಬೋಗಿಗಳ ರೈಲು ಸೇರ್ಪಡೆಗೊಂಡಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ ಎರಡು ರೈಲುಗಳು ಆರು ಬೋಗಿಗಳಿಗೆ ಪರಿವರ್ತನೆ ಆಗಲಿವೆ. 

Advertisement

ಪೂರ್ವ-ಪಶ್ಚಿಮ ಕಾರಿಡಾರ್‌ (ಬೈಯಪ್ಪನಹಳ್ಳಿ-ನಾಯಂಡಹಳ್ಳಿ)ನಲ್ಲಿ ಶುಕ್ರವಾರ ಆರು ಬೋಗಿಗಳ ಒಂದು ರೈಲನ್ನು ಪರಿಚಯಿಸಲಾಗಿದೆ. ಈ ಮೂಲಕ ಹೆಚ್ಚುವರಿ ಬೋಗಿಗಳ ಮೆಟ್ರೋ ರೈಲುಗಳ ಸಂಖ್ಯೆ ಈಗ ಆರಕ್ಕೆ ಏರಿಕೆಯಾಗಿದೆ. ಈ ಹಿಂದೆ ಜ. 28ರಂದು ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಆರು ಬೋಗಿಯ ಮೊದಲ ರೈಲು ಸೇವೆಯನ್ನು ಆರಂಭಿಸಲಾಗಿತ್ತು. 

ಮಾರ್ಚ್‌ ಅಂತ್ಯಕ್ಕೆ ಇನ್ನೂ ಎರಡು ಆರು ಬೋಗಿಗಳ ರೈಲುಗಳು ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ಕಾರ್ಯಾಚರಣೆ ಆರಂಭಿಸಲಿವೆ. ಅಲ್ಲದೆ, ಏಪ್ರಿಲ್‌ ನಂತರ ಆರು ಬೋಗಿಗಳ ಇನ್ನೂ ಮೂರ್‍ನಾಲ್ಕು ರೈಲುಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ತದನಂತರ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಇನ್ನಷ್ಟು ಆರು ಬೋಗಿಗಳ ರೈಲುಗಳು ಬರಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ತಿಳಿಸಿದೆ. 

ಮೂರು ಬೋಗಿಗಳ ರೈಲು ಗರಿಷ್ಠ 800ರಿಂದ 900 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದೆ. ಆರು ಬೋಗಿಗಳ ರೈಲು ದುಪ್ಪಟ್ಟು ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಏಕಕಾಲದಲ್ಲಿ ಹೆಚ್ಚು ಜನರನ್ನು ಕೊಂಡೊಯ್ಯುವುದರಿಂದ ಶೇ.15ರಷ್ಟು ವಿದ್ಯುತ್‌ ಉಳಿತಾಯ ಕೂಡ ಆಗಲಿದೆ.

ತುರ್ತು ಸಂದರ್ಭಗಳಲ್ಲಿ ಹೊಸದಾಗಿ ಜೋಡಣೆ ಮಾಡಿದ ಹೆಚ್ಚುವರಿ ಬೋಗಿಗಳ (ಮೂರು) ಯೂನಿಟ್‌ ಅನ್ನು ಪ್ರತ್ಯೇಕಗೊಳಿಸಿ ಚಾಲನೆ ಮಾಡುವ ಸೌಲಭ್ಯವೂ ಇದರಲ್ಲಿದ್ದು, ಇದಕ್ಕಾಗಿ ಸ್ವಯಂಚಾಲಿತ ಪೆಂಡಂಟ್‌ ಕಂಟ್ರೋಲ್‌ ಆಪರೇಷನ್‌ ವ್ಯವಸ್ಥೆ ಅಳವಡಿಸಲಾಗಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ. 

Advertisement

ಮತ್ತೆ ಕೈಕೊಟ್ಟ ಮೆಟ್ರೋ; ಪರದಾಡಿದ ಪ್ರಯಾಣಿಕರು: ಉತ್ತರ-ದಕ್ಷಿಣ ಕಾರಿಡಾರ್‌ (ನಾಗಸಂದ್ರ-ಯಲಚೇನಹಳ್ಳಿ)ನಲ್ಲಿ ಶುಕ್ರವಾರ ತಾಂತ್ರಿಕ ದೋಷದಿಂದಾಗಿ ಮೆಟ್ರೋ ಸೇವೆಯಲ್ಲಿ ಸುಮಾರು ಒಂದು ತಾಸು ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು. 

ಮಧ್ಯಾಹ್ನ 2.25ರ ಸುಮಾರಿಗೆ ಚಿಕ್ಕಪೇಟೆ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಇಡೀ ಮಾರ್ಗದುದ್ದಕ್ಕೂ ಬರುವ ನಿಲ್ದಾಣಗಳಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಪರಿಣಾಮ ಉದ್ದೇಶಿತ ಮಾರ್ಗದಲ್ಲಿ ಮೂರು ಟ್ರಿಪ್‌ಗ್ಳನ್ನು ರದ್ದುಗೊಳಿಸಲಾಯಿತು.

ಇದರ ಬಿಸಿ ಸಾವಿರಾರು ಜನರಿಗೆ ತಟ್ಟಿತು. ದಿಢೀರ್‌ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಸಂಪಿಗೆ ರಸ್ತೆ, ಚಿಕ್ಕಪೇಟೆ ನಿಲ್ದಾಣಗಳಲ್ಲಿನ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಲಾಯಿತು. ಕಾದು ಕಾದು ಸುಸ್ತಾದ ಪ್ರಯಾಣಿಕರು ಬಸ್‌, ಟ್ಯಾಕ್ಸಿ ಮತ್ತು ಆಟೋ ಮೊರೆಹೋದರು. 3.25ಕ್ಕೆ ಮೆಟ್ರೋ ಸೇವೆ ಪುನರಾರಂಭಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next