Advertisement

ಚಂಡೆಯ ಗಂಡುಗಲಿ ಕೋಟ ಶಿವಾನಂದ 

06:00 AM May 25, 2018 | |

ಜೀವನದ 50 ವಸಂತಗಳಲ್ಲಿ 39 ವರ್ಷ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತನಾಮರಾದವರು ಕೋಟ ಶಿವಾನಂದ. ಕೋಟದ ದಿ| ರಾಮಕೃಷ್ಣ ಮೆರಟ ಮತ್ತು ಜಲಜಾಕ್ಷಮ್ಮನ ಪುತ್ರನಾಗಿ 01-06-1967ರಲ್ಲಿ ಜನಿಸಿದ ಇವರು ಗಿಳಿಯಾರು ಶಾಂಭವಿ ಶಾಲೆಯಲ್ಲಿ 7ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದವರು. 

Advertisement

ಅಮೃತೇಶ್ವರಿ ಮೇಳಕ್ಕೆ ಬಾಲಗೋಪಾಲ ವೇಷಧಾರಿಯಾಗಿ ಆಯ್ಕೆ ಮಾಡಿ ಅಂದಿನ ಭಾಗವತ ನಾರಣಪ್ಪ ಉಪ್ಪೂರರ ಮಾರ್ಗದರ್ಶನದಲ್ಲಿ 4ವರ್ಷ ವೃತ್ತಿ ಮೇಳದ ತಿರುಗಾಟ ಮಾಡಿದ ಶಿವಣ್ಣ ಚಂಡೆ ವಾದನದ ಗೀಳನ್ನು ಹತ್ತಿಸಿಕೊಂಡು ಮನೆಯಲ್ಲಿ ಡಬ್ಬವನ್ನು ಬಾರಿಸುತ್ತ ಗುರುವಿಲ್ಲದೆ ಚಂಡೆವಾದಕರಾದರು. ಮನೆಯ ಪಕ್ಕದ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿದ್ದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಪ್ರೋತ್ಸಾಹವು ಶಿವಣ್ಣರ ಕಲಿಕೆಗೆ ಪ್ರೇರಣೆಯಾಯಿತು. ಹಿರೇ ಮಹಾಲಿಂಗೇಶ್ವರ ಮತ್ತು ಪಂಚಲಿಂಗೇಶ್ವರ ಮೇಳಕ್ಕೆ ಚಂಡೆ ವಾದಕರಾಗಿ ಸೇರ್ಪಡೆಗೊಂಡು ಬಳಿಕ ಕಾಳಿಂಗ ನಾವಡರಿಂದ ಆಹ್ವಾನ, ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆ. ಅಲ್ಲಿ ಹೊಳೆಗದ್ದೆ ದುರ್ಗಪ್ಪ ಗುಡಿಗಾರ ಮತ್ತು ಮಂದಾರ್ತಿ ರಾಮಕೃಷ್ಣರ ಸಾಮಿಪ್ಯದಲ್ಲಿ ಪರಿಪೂರ್ಣ ಚಂಡೆ ವಾದಕರಾಗಿ ರೂಪುಗೊಂಡ ಶಿವಾನಂದರು ಮುಂದೆ ಸಾಲಿಗ್ರಾಮ ಮೇಳದ ಪ್ರಧಾನ ಚಂಡೆವಾದಕರಾದರು.

ಚಂಡೆಯ ಗುಂಡಿಗೆಯಲ್ಲಿ ಅಡಗಿರುವ ನಾದವನ್ನು ಹೊರಹೊಮ್ಮಿಸುವ ಶಿವಾನಂದರ ಕರಚಮತ್ಕೃತಿ ಮೋಹಕವಾದುದು. ಭಾಗವತರ ಹಾಡುಗಾರಿಕೆಗೆ ಭಂಗವಾಗದಂತೆ ರಂಗದಲ್ಲಿ ಕಲಾವಿದನ ಶ್ರಮಕ್ಕೆ ಚೈತನ್ಯದಾಯಕ ಸುಸ್ಪಷ್ಟವಾದ ನುಡಿತದೊಂದಿಗೆ ಆಟಕ್ಕೆ ರಂಗನ್ನು, ರಂಗಕ್ಕೆ ಕಾವನ್ನು ಹೆಚ್ಚಿಸುವ ಕಲಾನೈಪುಣ್ಯತೆ ಅವರದ್ದು. ಸಾಲಿಗ್ರಾಮ ಮೇಳದಲ್ಲಿ 33 ವರ್ಷಗಳ ಯಕ್ಷ ಪ್ರಯಾಣ ಮಾಡುತ್ತಿರುವ ಶಿವಣ್ಣ ಉಭಯತಿಟ್ಟುಗಳ ಚಂಡೆ ವಾದನದಲ್ಲಿ ನಿಷ್ಣಾತರೆನಿಸಿ ಅತಿರಥ-ಮಹಾರಥ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಹಿರಿಮೆ ಶಿವಣ್ಣರಿಗೆ. ಶಿವಣ್ಣ ಎಂದೂ ಪ್ರಶಸ್ತಿ ಸನ್ಮಾನಗಳ ಹಿಂದೆ ಹೋದವರಲ್ಲ. ಆದರೂ ಅವರ  ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.     

ಬೇಳೂರು ವಿಷ್ಣುಮೂರ್ತಿ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next