Advertisement

ದಡದಲ್ಲಿ ಕುಳಿತು ನೀರು ತಿಳಿಯಾಗಲು ಕಾಯುವುದು

01:37 AM Feb 06, 2021 | Team Udayavani |

ಬುದ್ಧ ಮತ್ತು ಅವನ ಶಿಷ್ಯರು ಜತೆಗೂಡಿ ಯಾತ್ರೆ ಹೊರಟಿದ್ದರು. ಯಾತ್ರೆ ಬುದ್ಧನ ಜೀವನವಿಡೀ ವ್ಯಾಪಿಸಿದ ಸಂಗತಿ. ಊರಿಂದೂರಿಗೆ ತೆರಳುತ್ತ ಪ್ರವಚನಗಳ ಮೂಲಕ ತಾನು ಪಡೆದ ಜ್ಞಾನವನ್ನು ಹಂಚುವುದು. ಇದೂ ಅಂಥ ಒಂದು ಪ್ರಯಾಣ.
ಆ ಹೊತ್ತಿಗೆ ಬುದ್ಧನಿಗೆ ಸಾಕಷ್ಟು ವಯಸ್ಸಾಗಿತ್ತು. ನಡೆದು ನಡೆದು ತಡೆಯಲಾಗದ ಆಸರು. ಬೇಸಗೆ ಕಾಲ ಬೇರೆ. ಆತ ತನ್ನ ಶಿಷ್ಯರಲ್ಲಿ ಪ್ರಮುಖನಾದ ಆನಂದನನ್ನು ಕರೆದು ಹೇಳಿದ, “ನಾವು ಬಂದ ದಾರಿಯಲ್ಲೇ ಮೂರ್ನಾಲ್ಕು ಮೈಲು ಹಿಂದೆ ಒಂದು ಪುಟ್ಟ ತೊರೆಯಿದೆ. ಹೋಗಿ ನನ್ನ ಭಿಕ್ಷಾಪಾತ್ರೆಯಲ್ಲಿ ನೀರು ಹಿಡಿದುಕೊಂಡು ಬಾ. ಅಲ್ಲಿಯ ವರೆಗೆ ನಾವು ಇಲ್ಲಿಯೇ ಕುಳಿತಿರುತ್ತೇವೆ’.

Advertisement

ಆನಂದನು ಬುದ್ಧನ ಭಿಕ್ಷಾಪಾತ್ರೆ ಯನ್ನು ಹಿಡಿದುಕೊಂಡು ಹಿಂದಿರುಗಿ ಹೊರಟ. ಅಷ್ಟರಲ್ಲಿ ರೈತರ ಚಕ್ಕಡಿಗಳು ಹಾದುಹೋಗಿ ತೊರೆಯ ನೀರು ಕೆಸರಾಗಿತ್ತು. ಮಣ್ಣು ಮೇಲೆದ್ದಿತ್ತು, ಕೆಲವು ತಾಸುಗಳ ಹಿಂದೆಯಷ್ಟೇ ಸ್ಫಟಿಕಸದೃಶವಾಗಿದ್ದ ನೀರು ರಾಡಿಯಾಗಿತ್ತು. ಕುಡಿಯಲು ಯೋಗ್ಯವಾಗಿರಲಿಲ್ಲ.

ಆನಂದ ಖಾಲಿ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಮರಳಿ ಬಂದ. ನಡೆದಿರುವುದನ್ನು ವಿವರಿಸಿದ. “ನಾವು ಮುಂದಕ್ಕೆ ಹೋಗೋಣ. ನಾಲ್ಕೈದು ಮೈಲು ದೂರದಲ್ಲಿ ಇನ್ನೊಂದು ನದಿ ಇದೆಯಂತೆ. ಅಲ್ಲಿ ನೀರು ಕುಡಿಯ ಬಹುದು’ ಎಂದ.
ಆದರೆ ಬುದ್ಧ ಈ ಸಲಹೆಯನ್ನು ಪುರಸ್ಕರಿಸಲಿಲ್ಲ. “ಬೇಡ. ನೀನು ಮತ್ತೆ ಅದೇ ತೊರೆಯಿರುವಲ್ಲಿಗೆ ಹೋಗು. ಇಷ್ಟು ಹೊತ್ತಿಗೆ ನೀರು ತಿಳಿಯಾಗಿರ ಬಹುದು. ಹ್ಹಾ, ನೀನು ಹೋದಾಗ ನೀರು ಕೆಸರಾಗಿಯೇ ಇದ್ದರೆ ಹಾಗೆಯೇ ಹಿಂದಕ್ಕೆ ಬರಬೇಡ ಅಥವಾ ನೀರಿಗೆ ಇಳಿಯಬೇಡ. ತೊರೆಯ ಬದಿಯಲ್ಲಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೋ. ನೀರನ್ನೇ ನೋಡುತ್ತಿರು. ಅದು ತಿಳಿಯಾದ ಬಳಿಕ ನೀರು ಹಿಡಿದು ಕೊಂಡು ಬಾ.’

ಆನಂದನಿಗೆ ಸ್ವಲ್ಪ ಸಿಟ್ಟು ಬಂತು. ಅದೇ ತೊರೆಯಿಂದ ನೀರು ತರಬೇಕು ಎಂದು ಹಠ ಹಿಡಿಯುತ್ತಿರುವುದೇಕೆ ಎಂದು ಮನಸ್ಸಿನಲ್ಲೇ ಆಲೋಚಿಸಿದ. ಆದರೆ ಬುದ್ಧನ ಮಾತಲ್ಲವೆ! ನಿರುಪಾಯ ವಾಗಿ ಮರಳಿ ಹೊರಟು ಹೋದ.
ತೊರೆ ಇದ್ದಲ್ಲಿಗೆ ತಲುಪಿದಾಗ ಬುದ್ಧ ಹೇಳಿದ್ದು ನಿಜವಾಗಿತ್ತು. ಕೊಳೆತ ತರಗೆಲೆಗಳು ತಳದಲ್ಲಿ ತಂಗಿದ್ದವು. ಆದರೆ ನೀರು ಸಂಪೂರ್ಣ ತಿಳಿ ಯಾಗಲು ಇನ್ನೂ ಕೊಂಚ ಹೊತ್ತು ಬೇಕಿತ್ತು.

ಬುದ್ಧ ಹೇಳಿದ ಹಾಗೆಯೇ ಆನಂದ ದಡದಲ್ಲಿ ಸುಮ್ಮನೆ ಕುಳಿತ. ನೀರು ತಿಳಿ ಯಾಗುತ್ತಿರುವುದನ್ನು ನೋಡ ನೋಡು ತ್ತಿದ್ದಂತೆಯೇ ಬುದ್ಧ ನೀರು ತರಿಸುವುದರ ಮೂಲಕ ಏನನ್ನು ಹೇಳಲು ಹೊರಟಿ ದ್ದಾನೆ ಎಂಬುದು ಆನಂದ ಮನಸ್ಸಿಗೆ ಸ್ಫುರಣೆಯಾಗತೊಡಗಿತ್ತು. ತಿಳಿನೀರನ್ನು ಎತ್ತಿಕೊಂಡು ಬಂದು ಬುದ್ಧನಿಗೆ ಕುಡಿಯಲು ಕೊಟ್ಟ ಆನಂದ ಅವನ ಕಾಲಿಗೆರಗಿದ. “ನೀರು ತಂದು ಕೊಟ್ಟದ್ದಕ್ಕಾಗಿ ನಾನು ನಿನಗೆ ಕೃತಜ್ಞ ನಾಗಿರಬೇಕು. ಆದರೆ ನೀನೇ ನನ್ನ ಕಾಲಿಗೆ ಎರಗುತ್ತಿದ್ದೀಯಲ್ಲ’ ಎಂದು ನುಡಿದ ಗೌತಮ ಬುದ್ಧ.

Advertisement

“ನೀವು ಅಲ್ಲಿಂದಲೇ ನೀರು ತರಲು ಹೇಳಿದಾಗ ಸಿಟ್ಟುಗೊಂಡೆ. ಆದರೆ ದಂಡೆ ಯಲ್ಲಿ ಕುಳಿತು ನೀರು ಶುಭ್ರವಾಗುತ್ತಿ ರುವುದನ್ನು ನೋಡುತ್ತಿದ್ದಂತೆ ನಿಮ್ಮ ಆಂತರ್ಯ ಹೊಳೆಯಿತು’ ಎಂದ ಆನಂದ.

ಯಾವುದೋ ಘಟನೆಗಳಿಂದಾಗಿ ಆಗೀಗ ನಮ್ಮ ಮನಸ್ಸು ಕೂಡ ರಾಡಿ ಯಾಗುತ್ತದೆ. ಆಲೋಚನೆಗಳು, ಭಾವನೆ ಗಳು ಮೇಲೇಳುತ್ತವೆ. ಆದರೆ ಸುಮ್ಮನೆ ಕುಳಿತು ಅವುಗಳನ್ನು ಗಮನಿ ಸುತ್ತಿರ ಬೇಕು. ಪ್ರತಿಕ್ರಿಯಿಸಲು ಹೊರ ಟರೆ ಮತ್ತೆ ನೀರಿಗಿಳಿದ ಸ್ಥಿತಿ – ರಾಡಿ ಮತ್ತೆ ಮೇಲೇಳುತ್ತದೆ. ಬದಿಯಲ್ಲಿ ಕುಳಿತು ರಾಡಿ ತಳದಲ್ಲಿ ತಂಗಿ ಮನಸ್ಸು ತಿಳಿಯಾಗುವುದನ್ನು ಕಾಯಬೇಕು.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next