ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವಂತೆ ಎಸ್ ಐಟಿ ಅಧಿಕಾರಿಗಳು ಸಿಬಿಐ ಅಧಿಕಾರಿಗಳಿಗೆ ಇಂಟರ್ ಪೋಲ್ ಮೂಲಕ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Kaatera; ಬರಹಗಾರರಿಗೆ ರಾಕ್‌ಲೈನ್ ಕಾರು ಗಿಫ್ಟ್
ಮತ್ತೊಂದೆಡೆ ಪ್ರಜ್ವಲ್ ಮತ್ತು ಎಚ್ ಡಿ ರೇವಣ್ಣ ಸತತ ಎರಡನೇ ಬಾರಿಗೆ ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಎಸ್ ಐಟಿ 2ನೇ ಲುಕ್ ಔಟ್ ನೋಟಿಸ್ ಹೊರಡಿಸಿದೆ. ಅಷ್ಟೇ ಅಲ್ಲ ಪ್ರಜ್ವಲ್ ಮತ್ತು ಎಚ್ ಡಿ ರೇವಣ್ಣ ವಿರುದ್ಧ 500ಕ್ಕೂ ಅಧಿಕ ನಾಗರಿಕರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಹಿರಂಗ ಪತ್ರ ಬರೆದಿದ್ದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿರುವುದಾಗಿ ವರದಿ ವಿವರಿಸಿದೆ.
ಶನಿವಾರ (ಮೇ 04) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದರು. ಈ ತಂಡ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ಎಸ್ ಐಟಿ ತಂಡ ಪ್ರಜ್ವಲ್ ತಂದೆ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದೆ. ಅಪಹರಣ ಪ್ರಕರಣ ದಾಖಲಾಗುತ್ತಿದ್ದಂತೆ ರೇವಣ್ಣಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ರೇವಣ್ಣ ತೋಟದ ಮನೆಯ ಕೆಲಸಕ್ಕಿಂತ ಮಹಿಳೆ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದ ನಂತರ ರೇವಣ್ಣ ಅವರು ತನ್ನ ತಾಯಿಯನ್ನು ಅಪಹರಿಸಿರುವಾಗಿ ಪುತ್ರ ಠಾಣೆಗೆ ದೂರು ನೀಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ 40ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ, ಅಗತ್ಯದ ಪುರಾವೆಗಳನ್ನು ಸಂಗ್ರಹಿಸಿರುವುದಾಗಿ ವರದಿ ತಿಳಿಸಿದೆ.
ಏನಿದು ಬ್ಲೂ ಕಾರ್ನರ್: ಭಾರತದಲ್ಲಿ ವಂಚನೆ, ಗಂಭೀರ ಅಪರಾಧ ಎಸಗಿ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಸಿಬಿಐ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಹೊರಡಿಸುತ್ತದೆ.
ಬಹುತೇಕ ಪ್ರಕರಣಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ರೆಡ್ ಕಾರ್ನರ್ ನೋಟಿಸ್ ಅಂದರೆ, ಜಗತ್ತಿನ ಯಾವುದೇ ಕಡೆಯಲ್ಲಿರುವ ಆರೋಪಿಯನ್ನು ಹಸ್ತಾಂತರಿಸಲು ವಿನಂತಿ ಮಾಡುವುದಾಗಿದೆ.
ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವುದು ಯಾಕೆಂದರೆ ಇಂಟರ್ ಪೋಲ್ ವಿದೇಶಿ ಸಂಸ್ಥೆಗಳ ನೆರವಿನೊಂದಿಗೆ ಆರೋಪಿಯ ಕುರಿತು ಮಾಹಿತಿಯನ್ನು ಸಂಗ್ರಹಿಸುವುದಾಗಿದೆ.