Advertisement
ಆರಂಭದಲ್ಲಿ ಅಲರಿಪುವನ್ನು ಬೆರೆಸಿದ “ಶ್ರೀವಿಘ್ನರಾಜಮ್ ಭಜೆ…’ ಎಂಬ ಗಂಭೀರನಾಟ್ಟ ರಾಗದ ಖಂಡಛಾಪು ತಾಳದಲ್ಲಿರುವ ಗಣಪತಿ ಸ್ತುತಿಯೊಂದಿಗೆ ನೃತ್ಯವನ್ನು ಆರಂಭಿಸಿ ತುಂಬ ಭಿನ್ನವಾಗಿ ಅಭಿನಯಿಸಿದರು. ಅರೆಮಂಡಿ ಅಡವಿನಲ್ಲಿ ವಿಶೇಷವಾಗಿ ಗಮನ ಸೆಳೆಯುವ ಈ ಕಲಾವಿದೆ ಗಣಪತಿಯ ವಿವಿಧ ಭಾವಭಂಗಿಗಳನ್ನು ಮನೋಜ್ಞವಾಗಿ ಅಭಿನಯಿಸಿ ತೋರಿಸಿದರು. ವಿ| ಶಾರದಾ ಮಣಿಯವರು ಇದಕ್ಕೆ ಕೊರಿಯೊಗ್ರಫಿ ಮಾಡಿದ್ದಾರೆ.
ಅನಂತರ ಮುತ್ತುಸ್ವಾಮಿ ದೀಕ್ಷಿತರ ರಚನೆಯಾದ ಕೇದಾರ ರಾಗದ ಮಿಶ್ರಛಾಪು ತಾಳದ “ಆನಂದನಟನ ಪ್ರಕಾಶಮ…’ ಎಂಬ ಸಾಹಿತ್ಯವನ್ನು ಅಭಿನಯಿಸಿದರು. ನೃತ್ತ ಮತ್ತು ನೃತ್ಯ ಎರಡರಲ್ಲೂ ಗಮನ ಸೆಳೆಯುವ ಅಯನಾ ಭರವಸೆಯ ಕಲಾವಿದೆ ಎಂಬುದನ್ನು ಈ ಅಭಿನಯವು ತೋರಿಸಿಕೊಟ್ಟಿತು.ಅನಂತರ “ನಯತವ ಬಾಲಮಿಮಂ’ ಎಂಬ ಗಣಪಯ್ಯ ಹೊಳ್ಳ ಅವರ ರಚನೆಯನ್ನು ಕೈಗೆತ್ತಿಕೊಂಡರು. ಇದು ಹಂಸವಿನೋದಿನಿ ರಾಗದಲ್ಲಿದ್ದು ಆದಿ ತಾಳಕ್ಕೆ ನಿಬದ್ಧವಾದ ರಚನೆಯಾಗಿದೆ. ಕೃಷ್ಣನ ಬಾಲಲೀಲೆಗಳನ್ನು ಗೋಪಿಕೆ ಅಭಿನಯಿಸಿ, ರಮಿಸಿ ಸುಖಪಡುವ ಭಾಗವನ್ನು ಸುಂದರವಾಗಿ ನಿರೂಪಿಸಲಾಗಿದೆ. ಅತಿಸೂಕ್ಷ್ಮ ಭಾವಗಳನ್ನು, ವಿವರಗಳನ್ನು ನೈಜವಾಗಿ ಬಿಂಬಿಸಿರುವುದು ಈ ಅಭಿನಯದಲ್ಲಿನ ವೈಶಿಷ್ಟ್ಯವಾಗಿ ಕಂಡಿತು. ಮಧುವಂತಿ ರಾಗದ ಆದಿತಾಳದಲ್ಲಿರುವ ತಿಲ್ಲಾನವು ಉಲ್ಲೇಖಕ್ಕೆ ಅರ್ಹವಾದದ್ದು. ಲಾಲ್‌ಗುಡಿ ಜಯರಾಮನ್ ರಚನೆಗೆ ನೃತ್ಯಪಟು ರಮಾ ವೈದ್ಯನಾಥನ್ ಕೊರಿಯೊಗ್ರಫಿ ಮಾಡಿದ್ದಾರೆ. ನೃತ್ತದ ಹಲವು ಭಾವಭಂಗಿಗಳಿಗೆ ಈಗಾಗಲೇ ಹೆಸರಾಗಿರುವ ಅಯನಾ ತಿಲ್ಲಾನವನ್ನು ಮನೋಜ್ಞವಾಗಿ ಅಭಿನಯಿಸಿದರು. ನಟುವಾಂಗದಲ್ಲಿ ವಿ| ಶಾರದಾಮಣಿ ಶೇಖರ್ ಸಹಕರಿಸಿದರು. ಕುಮಾರಿ ರಜನಿ ಚಿಪ್ಳೂಣ್‌ಕರ್ ನೃತ್ಯದ ಹಾಡುಗಾರಿಕೆಗೆ ಹೊಸಬರಾದರೂ ಒಳ್ಳೆಯ ಕಂಠ ಇರುವುದರಿಂದ ಯಾವುದೇ ತೊಡಕುಗಳಿಲ್ಲದೆ ಉತ್ತಮ ನಿರ್ವಹಣೆ ನೀಡಿದರು. ವಿ| ರಾಜನ್ ಪಯ್ಯನ್ನೂರ್ ಅವರ ಮೃದಂಗ ಸಹಕಾರ ಉತ್ತಮವಾಗಿತ್ತು. ಕೊಳಲಿನಲ್ಲಿ ಅಭಿಷೇಕ್ ಸಹಕಾರ ನೀಡಿದರು.
Related Articles
Advertisement