Advertisement

SIT ಎದುರು ಎಚ್‌.ಡಿ.ರೇವಣ್ಣ ಮೊಂಡಾಟ; ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ನಿರಾಕರಣೆ

11:42 PM May 06, 2024 | Team Udayavani |

ಬೆಂಗಳೂರು: ಮಹಿಳೆ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಸೋಮವಾರವೂ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಆದರೆ ತನಿಖೆಗೆ ಅಸಹಕಾರ ತೋರುತ್ತಿರುವ ರೇವಣ್ಣ ಎರಡು ಪ್ರಕರಣಗಳಲ್ಲೂ ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದ್ದಾರೆ.ನಾಲ್ಕು ದಿನಗಳ ಕಾಲ ರೇವಣ್ಣನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

ಅಧಿಕಾರಿಗಳ ವಿಚಾರಣೆಗೆ ರೇವಣ್ಣ ಸಹಕರಿಸುತ್ತಿಲ್ಲ. ಯಾವುದೇ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.

ಅಪಹರಣ ಪ್ರಕರಣದ ಬಗ್ಗೆ ರೇವಣ್ಣಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸತೀಶ್‌ಬಾಬು ಪರಿಚಯವಿದೆಯಾ? ಅವರ ಮೂಲಕ ಮಹಿಳೆಯ ಅಪಹರಣ ಮಾಡಿಸಲು ನೀವೇ ತಿಳಿಸಿ ದ್ದಿರಾ? ಅಪಹರಣ ಮಾಡಿದ್ದರ ಹಿಂದಿನ ಉದ್ದೇಶ ಏನು ಮುಂತಾಗಿ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಪ್ರಶ್ನೆಗಳ ಹೇಳಿಕೆ ಪಡೆದು ಅದನ್ನು ದಾಖಲಿಸಿಕೊಂಡು ಸ್ವ ಇಚ್ಛಾ ಹೇಳಿಕೆಗೆ ಸಹಿ ಮಾಡುವಂತೆ ಹೇಳಿದ್ದಾರೆ. ಆಗ ರೇವಣ್ಣ, ಕೆಲಸದಾಕೆ ಯಾರೆಂಬುದೇ ಗೊತ್ತಿಲ್ಲ. ಆಕೆಯನ್ನು ನೋಡಿಯೇ ಇಲ್ಲ. ಅಪಹರಣ ಪ್ರಕರಣದಲ್ಲೂ ನನ್ನ ಪಾತ್ರ ಇಲ್ಲ. ನೀವೇ ಸೃಷ್ಟಿಸಿಕೊಂಡು ಬರೆದುಕೊಂಡರೆ ನಾನೇನು ಮಾಡಲಿ? ನಾನು ಯಾವುದೇ ಸ್ವಇಚ್ಛಾ ಹೇಳಿಕೆಗೆ ಸಹಿ ಮಾಡುವುದಿಲ್ಲ. ನೀವು ಬೇಕಾದಂತೆ ಬರೆದುಕೊಂಡಿರುವುದಕ್ಕೆ ನಾನು ಸಹಿ ಹಾಕಬೇಕೆ ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೂಂದೆಡೆ ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ವಿಚಾರಣೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ತನಿಖಾಧಿಕಾರಿಗಳ ವಿರುದ್ಧ ಕೂಗಾಡಿದ್ದಾರೆ. ನನಗೆ ಯಾವ ಮಹಿಳೆಯೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ ವಕೀಲರೊಂದಿಗೆ ಚರ್ಚೆ
ನ್ಯಾಯಾಲಯವು ಆರೋಪಿ ರೇವಣ್ಣನಿಗೆ ಪ್ರತಿ ದಿನ ಒಂದು ತಾಸು ತಮ್ಮ ವಕೀಲರ ಜತೆ ಮಾತನಾಡಲು ಅವಕಾಶ ನೀಡಿದೆ. ಹೀಗಾಗಿ ಸೋಮವಾರ ಬೆಳಗ್ಗೆ 9.30ಕ್ಕೆ ಸಿಐಡಿ ಕಚೇರಿಗೆ ಬಂದಿದ್ದ ವಕೀಲರ ಜತೆಗೆ ರೇವಣ್ಣ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇಂದು ರೇವಣ್ಣ
ಜಾಮೀನು ಅರ್ಜಿ ವಿಚಾರಣೆ
ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ. ಸೋಮವಾರ ರೇವಣ್ಣ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿ ಜಾಮೀನಿಗೆ ಅರ್ಹವೇ ಎಂಬುದರ ಬಗ್ಗೆಗಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next