Advertisement

ತಲ್ಲೀನತೆ ಮತ್ತು ಶ್ರದ್ಧಾ ಭಾವಗಳೇ ಕ್ರಿಯಾಶೀಲತೆ ಪ್ರತೀಕ; ಭರತನಾಟ್ಯ ವಿದುಷಿ ರೂಪಶ್ರೀ

04:39 PM Feb 20, 2024 | Team Udayavani |

ಮೈಸೂರು : ಕಲೆ ಮೂಲಕ ಬಿಂಬಿಸುವ ತಲ್ಲೀನತೆ ಮತ್ತು ಶ್ರದ್ಧಾ ಭಾವಗಳೇ ನೃತ್ಯಪಟುವಿನ ಕ್ರಿಯಾಶೀಲತೆ ಪ್ರತೀಕ ಎಂದು
ಹಿರಿಯ ಭರತನಾಟ್ಯ ವಿದುಷಿ ರೂಪಶ್ರೀ ಮಧುಸೂದನ ಹೇಳಿದರು.

Advertisement

ಅವರು ವಿದುಷಿ ಮಿತ್ರಾ ನವೀನ್ ಅವರ ನಾದವಿದ್ಯಾಲಯ ಸಂಸ್ಥೆ ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಕಲಾವಿದೆ ಅರ್ಪಿತಾ ನಾಯಕ ಅವರ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅರ್ಪಿತಾ ಹೆಸರಿಗೆ ತಕ್ಕಂತೆ ನೃತ್ಯವನ್ನು ಸಂಪೂರ್ಣವಾಗಿ, ಸಮರ್ಥವಾಗಿ ಗುರು ಮಿತ್ರಾ ಅವರಿಗೆ ಅರ್ಪಿಸಿ ಧನ್ಯತೆ ಮೆರೆದಿದ್ದಾರೆ. ಅವರೊಬ್ಬ ಕ್ರಿಯಾಶೀಲ ಯುವ ನೃತ್ಯಪಟು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ನೃತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ಕೊಡುಗೆಯಾಗಿ ನೀಡಬಲ್ಲ ಕಲಾವಿದೆ ಅರ್ಪಿತಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದೆ ಅರ್ಪಿತಾ ಅವರ ತಂದೆ ಉದಯ ನಾಯಕ, ತಾಯಿ ಸುವರ್ಣಾ ನಾಯಕ, ಗುರು ಮಿತ್ರಾ ನವೀನ್ ಇತರರು ಇದ್ದರು.
ಹಿಮ್ಮೇಳ: ಕಲಾವಿದೆ ಅರ್ಪಿತಾ ಅವರ ರಂಗಪ್ರವೇಶಕ್ಕೆ ಗುರು ಮಿತ್ರಾ ನವೀನ್ ನಟುವಾಂಗ, ವಿದ್ವಾನ್ ಎಂ. ಎಸ್. ನವೀನ್ ಅಂದಗಾರ್ ಗಾಯನ, ವಿದ್ವಾನ್ ಜಿ.ಎಸ್. ನಾಗರಾಜ್ ಮೃದಂಗ ಮತ್ತು ವಿದ್ವಾನ್ ವಿವೇಕ ಕೃಷ್ಣ ಕೊಳಲು ಪಕ್ಕವಾದ್ಯದಲ್ಲಿ ಸಹಕರಿಸಿದರು.

Advertisement

ನೃತ್ಯದ ಸೊಬಗು ಹೊಮ್ಮಿಸಿದ ಕಲಾವಿದೆ:
ಪುಷ್ಪಾಂಜಲಿಯೊಂದಿಗೆ ಆರಂಭವಾದ ಅರ್ಪಿತಾ ಅವರ ನೃತ್ಯ ಪ್ರಸ್ತುತಿ, ಆನಂದ ನರ್ತನ ಗಣಪತಿ ಕೃತಿ ನೃತ್ತ ಅಭಿನಯದ ಮಿಶ್ರಣವಾಗಿತ್ತು. ಆದಿ ಪೂಜಿತನೂ, ಏಕದಂತನೂ, ಮೂಲಾಧಾರ ಚಕ್ರದ ಅಧಿಪತಿಯೂ ಆದ ಗಣಪತಿಯನ್ನು ಆನಂದ, ಚ್ಚಿದಾನಂದ, ಪರಮಾನಂದ ನರ್ತನ ಗಣಪತಿಯಾಗಿ ವಂದಿಸುವ ಕೃತಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತು.

ಕಲಾರಸಿಕರನ್ನು ಅರ್ಪಿತಾ ಅವರು ತನ್ನತ್ತ ಸೆಳೆದಿದ್ದು ವರ್ಣದ ಸಮರ್ಪಣೆಯ ಮೂಲಕ. ಅದು ಕಲಾವಿದೆಯ ಇಡೀ ಸಾಮರ್ಥ್ಯವನ್ನು, ನೈಪುಣ್ಯವನ್ನು ಪರೀಕ್ಷಿಸುವ ಮಹತ್ತರ ಘಟ್ಟವಾಗಿತ್ತು. ಜಗದ್ರಕ್ಷಕಳಾದ ದೇವಿಯನ್ನು ಪಾರ್ವತಿಯಾಗಿ, ಲಕ್ಷ್ಮಿಯಾಗಿ, ಸರಸ್ವತಿಯಾಗಿ ಸ್ತುತಿಸಿದ್ದಾರೆ. ಸಿಂಹವಾಹಿನಿಯದ ಶಿವನ ಸುಂದರಿಯೇ, ರಾಜರಾಜೇಶ್ವರಿಯೇ, ಓಂಕಾರ ನಾದದಿಂದ ರೂಪಿತಗೊಂಡಿರುವ ನಟರಾಜನ ಮನೋಹರಿಯೇ, ಕಷ್ಟಗಳನ್ನು ಹೋಗಲಾಡಿಸಿ ನಮ್ಮನ್ನು ರಕ್ಷಿಸಿ ಕರುಣೆಯಿಂದ ವರವನ್ನು ದಯಪಾಲಿಸಲು ಬಾ. ಸದಾ ನಿನ್ನ ಚಿಂತೆಯಲ್ಲಿ ನಿನ್ನನ್ನು ನೆನೆಯುವ, ಸ್ಮರಿಸುವ ಮನಸ್ಸನ್ನು ನೀಡಲು ಬಾ ತಾಯಿ ಎಂದು ಭಕ್ತಿ ಪ್ರಧಾನವಾದ ಪದವರ್ಣದ ಪ್ರಸ್ತುತಿಯ ಮೂಲಕ ಅರ್ಪಿತಾ ಕಲೆಗಾರಿಕೆ ಸಾಬೀತು ಪಡಿಸಿದರು.

ಭಾವಪರವಶರಾದ ಶ್ರೋತೃಗಳು:
ಉತ್ತರಾರ್ಧದಲ್ಲಿ ನೃತ್ಯಾಧಿಪತಿ ಶಿವನನ್ನು ಆರಾಧಿಸುವ, ಭೋ ಶಂಭೋ ಶಿವ ಶಂಭೋ ಸ್ವಯಂಭೋ … ಎಲ್ಲರನ್ನು ಭಾವಪರವಶವನ್ನಾಗಿಸಿತು. ನಂತರ ಕೃಷ್ಣ ನೀ ಬೇಗನೆ ಬಾರೋ ದೇವರ ನಾಮವನ್ನು ನರ್ತಿಸಿ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next