Advertisement
ಬೆಳೆದುಬಂದ ಮನೆ ಪರಿಸರವೇ ಮೊದಲ ಪಾಠಶಾಲೆ. ಅಮ್ಮನೇ ಮೊದಲ ಗುರು ಎನ್ನುತ್ತಾರೆ ಹಿರಿಯರು. ಅದಕ್ಕೆ ಪೂರಕವಾಗಿಯೇ ಅರ್ಪಿತಾ ತಮ್ಮ ಬಾಲ್ಯದ ದಿನಗಳನ್ನು ಖುಷಿಯಿಂದಲೇ ನೆನಪಿಸಿಕೊಳ್ಳುತ್ತಾರೆ. ಅಮ್ಮ ನನ್ನನ್ನು ಆಟ ಆಡಿಸುವಾಗ, ಉಣಿಸುವಾಗ, ತೂಗುವಾಗ, ರಮಿಸುವಾಗ, ಹಾಡುತ್ತಲೇ ಇರುತ್ತಿದ್ದರು. ಮೈಸೂರು ಮಲ್ಲಿಗೆ ಸಂಕಲನದ ಪದ್ಯಗಳು (ಕೆಎಸ್. ನರಸಿಂಹಸ್ವಾಮಿ) ಎಂದರೆ ಅವರಿಗೆ ಬಹು ಪ್ರಿಯ. ಸದಾ ಅದನ್ನೇ ಗುನುಗುತ್ತಿದ್ದರು. ಇದನ್ನು ಎಳವೆಯಿಂದಲೇ ಕೇಳಿ ಕೇಳಿ ಅದಕ್ಕೆ ನನ್ನ ಮನ ಸಂಗೀತಾಸಕ್ತಿಗೆ ನೆಲೆ ಆಯಿತು. ಗಾಯನ ಕಲಿ ಎಂದು ಒಳಗಿನಿಂದಲೇ ಪ್ರೇರಣೆ ನೀಡುತ್ತ ಇತ್ತು. ಒಳಮನದ ದನಿಗೆ ಓಗೊಟ್ಟೆ. ನಾನೂ ಸಂಗೀತ ಕಲಿಯುತ್ತೇನೆ.. ಎಂದು ಕೇಳಿಕೊಂಡೆ. ಅಮ್ಮ ಸ್ಪಂದಿಸಿದರು. ಅದೇ ನನಗೆ ಸಂಗೀತ- ಮತ್ತು ನಂತರ ನೃತ್ಯ ಕಲಿಕೆಗೆ ಪ್ರೇರಣೆ ನೀಡಿತು. ಇಂದು ನಾನು ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆ ಮುಗಿಸಿ, ಅಂತಿಮ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತ ಇದ್ದೇನೆ. ಈ ನಡುವೆ ರಂಗಪ್ರವೇಶಕ್ಕೂ ಸಿದ್ಧಳಾಗಿರುವೆ ಎಂದು ಅರ್ಪಿತಾ ಹೇಳುವಾಗ ಭಾವುಕರಾಗುತ್ತಾರೆ.
Related Articles
ಉದ್ಯೋಗ ನಿಮಿತ್ತ ಉದಯ ನಾಯಕ ಮತ್ತು ಸುವರ್ಣಾ ನಾಯಕ ದಂಪತಿ ಮೈಸೂರಿನಲ್ಲೇ ನೆಲೆಸಬೇಕಾಯಿತು. ಹಾಗಾಗಿ ಅರ್ಪಿತಾ ಓದಿದ್ದು, ಬರೆದದ್ದು, ಹಾಡುವ- ನರ್ತಿಸುವ ಪಾಠ ಕಲಿತದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ. 5ನೇ ವರ್ಷದವಳಿದ್ದಾಗೇ ಗುರು ಸರಸ್ವತಿ ಅವರಲ್ಲಿ ನರ್ತನದ ಮೊದಲ ಹೆಜ್ಜೆ ಕಲಿಕೆ. ನಂತರ ವಿದುಷಿ ಮಿತ್ರಾ ನವೀನ್ ಗರಡಿಯಲ್ಲಿ ಭರತನಾಟ್ಯ ಕಲಿಕೆಗೆ ಶಿಷ್ಯತ್ವ ಸ್ವೀಕಾರ. 17 ವರುಷದ ಕಲಾ ಪಯಣದಲ್ಲಿ ಈಕೆ ಜೂನಿಯರ್, ಸೀನಿಯರ್ ಪರೀಕ್ಷೆಗಳನ್ನು ಅತ್ಯುತ್ತಮ ಶ್ರೇಣಿಯಲ್ಲೇ ಪೂರ್ಣಗೊಳಿಸಿಕೊಂಡು ಇದೀಗ ಪೋಸ್ಟ್ ವಿದ್ವತ್ ಪರೀಕ್ಷೆಗೆ ತಾಲೀಮು ನಡೆಸುತ್ತ ಇದ್ದಾರೆಂಬುದು ವಿಶೇಷ.
Advertisement
ಶಾಲಾ ಪರೀಕ್ಷೆಗಳಾದ ಎಸ್ಸೆಸ್ಸೆಲ್ಸಿ, ಪಿಯುಸಿ (ವಿಜ್ಞಾನ), ನಂತರ ಜೆಸಿ ಕಾಲೇಜಿನಲ್ಲಿ ಬಿಇ (ಬಯೋ ಟೆಕ್ನಾಲಜಿ)- ಎಲ್ಲವುಗಳಲ್ಲೂ ಈಕೆ ಅತ್ಯುನ್ನತ ಶ್ರೇಣಿಯನ್ನೇ ಮುಡಿಗೇರಿಸಿಕೊಂಡ ಪ್ರತಿಭಾನ್ವಿತೆ. ಕನ್ನಡದಲ್ಲಿ ನೂರಕ್ಕೆ ನೂರು ಅಂಕವನ್ನು ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಸಾಧನೆಗೆ ಮೈಸೂರು ಜಿಲ್ಲಾಡಳಿತ ಗೌರವಾರ್ಪಣೆ ಮಾಡಿದ್ದು ಸವಿ ಸವಿ ನೆನಪು. ಸಾಂಸ್ಕೃತಿಕ ಕಾರ್ಯಕ್ರಮ, ಕ್ವಿಜ್‌ನೊಂದಿಗೆ ವಾಲಿಬಾಲ್ ಕ್ರೀಡೆಯಲ್ಲೂ ಪ್ರತಿಭೆ ಹೊಮ್ಮಿತು. ಇದಲ್ಲದೇ ಪ್ರತಿಭಾ ಕಾರಂಜಿಯಲ್ಲೂ ಹಲವು ಬಹುಮಾನ. ಬೆಳೆಯುವ ಸಿರಿ ಮೊಳಕೆಯಲ್ಲಿ….
ಸಮರ್ಪಣಾ ಭಾವ ಇರಬೇಕು:ಇಂಜಿನಿಯರಿಂಗ್ ಪದವಿ ಅಧ್ಯಯನ ಸಂದರ್ಭ ಜೆಸಿ ಕಾಲೇಜಿನ ಸಂಗೀತ ಕ್ಲಬ್ ಆಗಿರುವ ‘ನಾದ’ ವನ್ನು ಮುನ್ನಡೆಸುವ ಸಾರಥ್ಯ. ಕವಿತೆ, ಅಂದವಾದ ಬರವಣಿಗೆ, ಸ್ಕೆಚ್ಚಿಂಗ್ ಕಲೆಗಳೂ ಕರಗತವಾದದ್ದು ಹದಿಹರೆಯದ ವಸಂತದಲ್ಲೇ.
ಗುರು ಮಿತ್ರಾ ನವೀನ್‌ರಲ್ಲಿ ನೃತ್ಯ, ವಿದ್ವಾನ್ ನವೀನ್ ಅವರ ಬಳಿ ಶಾಸ್ತ್ರೀಯ ಗಾಯನ ಅಭ್ಯಾಸ ಈಕೆಯನ್ನು ಭರವಸೆಯ ಕಲಾವಿದೆಯನ್ನಾಗಿ ರೂಪಿಸಲು ವರವಾಯಿತು. ಗುರುವಿನ ಕೃಪೆಯನ್ನು ಪ್ರತಿ ಹಂತದಲ್ಲೂ ಸ್ಮರಿಸಿಕೊಳ್ಳುವ ಅರ್ಪಿತಾ, ಸಮರ್ಪಣಾ ಭಾವ ಇದ್ದರೆ ಮಾತ್ರ ಕಲೆ ಒಲಿಯುತ್ತದೆ ಎಂದು ಧನ್ಯತೆಯಿಂದ ಹೇಳುತ್ತಾರೆ. ವಿವಿಧ ಪಾತ್ರಗಳಲ್ಲಿ ….
ನೃತ್ಯ ಕಲಿಯುತ್ತಲೇ ಗುರುವಿನೊಂದಿಗೆ ಅರ್ಪಿತಾ ಹಲವು ವೇದಿಕೆ ಕಾರ್ಯಕ್ರಮಗಳನ್ನೂ ನೀಡಿದ್ದಾರೆಂಬುದು ಗಮನಾರ್ಹ. ಮೈಸೂರು ದಸರಾ ಉತ್ಸವ, ನೂಪುರ ಉತ್ಸವ, ಕೃಷ್ಣ ಜಯಂತಿ, ನವರಾತ್ರಿ ಉತ್ಸವ- ನಾದ ನೃತ್ಯೋಪಾಸನಾ- ಇವುಗಳಲ್ಲಿ ಅರ್ಪಿತಾ ಅವರ ಸಹ ನರ್ತನ ಕಲಾಗಾರಿಕೆಯನ್ನು ಕಲಿಸಿತು. ಇದಲ್ಲದೇ ವಿಶೇಷ ನೃತ್ಯ ರೂಪಕಗಳಲ್ಲಿ ಅರ್ಪಿತಾ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು. ಆದಿಪೂಜ್ಯಾದಲ್ಲಿ ಶಿವನಾಗಿ, ಧರ್ಮ ವಿಜಯದಲ್ಲಿ ರಾವಣನಾಗಿ, ಶ್ರೀಕೃಷ್ಣ ವಿಲಾಸದಲ್ಲಿ ಯಶೋದೆಯಾಗಿ ಈಕೆ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದು ಗಮನಾರ್ಹ. ನಾನೂ ಶಿಕ್ಷಕಿ ಆಗಬೇಕು:
ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ತಕ್ಷಣ ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಕಂಪನಿಗಳು ಉದ್ಯೋಗದ ಕರೆ ನೀಡಿದವು. ಆದರೆ ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆ ಪೂರ್ಣ ಮಾಡಲೇಬೇಕು ಎಂಬ ಹಟತೊಟ್ಟ ಅರ್ಪಿತಾ, ಮೈಸೂರನ್ನೇ ನೆಲೆ ಮಾಡಿಕೊಂಡರು. ಇಲ್ಲೇ ಉದ್ಯೋಗ ಪಡೆದರು. ಫೆ. 17ರಂದು ರಂಗಪ್ರವೇಶ ಮಾಡಿದ ನಂತರ ಸೋಲೋ ಪ್ರದರ್ಶನ ನೀಡಲು ಅಣಿಯಾಗಬೇಕು. ಮುಂದೆ ನಾನೂ ನೃತ್ಯ ಶಿಕ್ಷಕಿ ಆಗಬೇಕು. ನನ್ನ ಗುರು ಮಿತ್ರಾ ಅವರಂತೆ ನೂರಾರು ಮಕ್ಕಳಿಗೆ ನರ್ತನ ಪಾಠ ಮಾಡಬೇಕು. ವೃತ್ತಿ ಮಾಡುತ್ತಲೇ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ- ಬೆಳೆಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ ಅರ್ಪಿತಾ. ಶನಿವಾರ ನರ್ತನ ಪ್ರಸ್ತುತಿ
ವಿದುಷಿ ಮಿತ್ರಾ ನವೀನ್ ಅವರ ಶಿಷ್ಯೆ, ಮೈಸೂರಿನ ನಾದ ವಿದ್ಯಾಲಯದ ವಿದ್ಯಾರ್ಥಿನಿ ಅರ್ಪಿತಾ ನಾಯಕ ಭರತನಾಟ್ಯ ರಂಗಪ್ರವೇಶ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಫೆ. 17ರ ಸಂಜೆ 5ಕ್ಕೆ ವಿಜೃಂಭಿಸಲಿದೆ. ಬೆಂಗಳೂರಿನ ನೃತ್ಯಗಂಗಾ ಪ್ರದರ್ಶನ ಕಲಾ ಕೇಂದ್ರದ ನಿರ್ದೇಶಕಿ ವಿದುಷಿ ರೂಪಶ್ರೀ ಮಧುಸೂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಶಾಸಕ ಟಿ.ಎಸ್. ಶ್ರೀವತ್ಸ ಸಾಕ್ಷಿಯಾಗಲಿದ್ದಾರೆ. ವಿದುಷಿ ಮಿತ್ರಾ ನವೀನ್, ಉದಯನಾಯಕ ಮತ್ತು ಸುವರ್ಣಾ ನಾಯಕ ದಂಪತಿ ಉಪಸ್ಥಿತರಿರಲಿದ್ದಾರೆ. ಯಕ್ಷ ರಂಗ – ಬಯಲಾಟದ ತವರು ಗೋಕರ್ಣದಿಂದ ಅಜ್ಜಿ (ತಂದೆಯವರ ತಾಯಿ) ಗಿರಿಜಾ ಅವರು ಮೊಮ್ಮಗಳ ನರ್ತನ ಮಹೋತ್ಸವ ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸಿದ್ದಾರೆ. ವಂಶದ ಕುಡಿಗಳು ಕಲೆ- ಸಾಹಿತ್ಯ- ಸಂಗೀತದ ಯುವ ರಾಯಭಾರಿಗಳಾದರೆ ಆ ಖುಷಿಯೇ ಅನನ್ಯ. ಅಮೋಘ. ಅಪೂರ್ವ. ಲೇಖನ -ಶ್ರೀರಾಮ