Advertisement

ಶುದ್ಧೀಕರಣ ಘಟಕಗಳ ಬಾಗಿಲು ಬಂದ್‌

11:46 AM Mar 19, 2020 | Naveen |

ಸಿರುಗುಪ್ಪ: ಗ್ರಾಮೀಣ ಜನರು ಶುದ್ಧ ನೀರು ಕುಡಿದು ಆರೋಗ್ಯವಂತರಾಗಿರಬೇಕೆಂದು ರಾಜ್ಯ ಸರ್ಕಾರ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದೆ. ಆದರೆ ಎಲ್ಲೆಡೆ ಅಳವಡಿಸಿರುವ ಶುದ್ಧ ನೀರಿನ ಘಟಕಗಳಿಗೆ ಸಮರ್ಪಕ ನಿರ್ವಹಣೆಯಿಲ್ಲೇ ಇಂದು ಅಶುದ್ಧ ನೀರಿನ ಘಟಕಗಳಾಗಿ ಬಾಗಿಲು ಮುಚ್ಚಿಕೊಂಡಿವೆ.

Advertisement

ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಎಚ್‌.ಕೆ. ಪಾಟೀಲ್‌ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಸಚಿವರಾಗಿದ್ದ ವೇಳೆಯಲ್ಲಿ ಗ್ರಾಮೀಣ ಭಾಗದ ಜನರು ಶುದ್ಧ ಕುಡಿಯುವ ನೀರು ಸೇವನೆ ಮಾಡಬೇಕು ಎಂದು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜನಸಂಖ್ಯೆಗನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಆರಂಭದಲ್ಲಿ ಐದಾರು ತಿಂಗಳ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕ ನಿರ್ವಹಣೆ ಇಲ್ಲದೆ ಅನೇಕ ಕಡೆ ಬಾಗಿಲು ಮುಚ್ಚಿಕೊಂಡಿವೆ.

ತಾಲೂಕಿನ 27 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಒಟ್ಟು 110 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 92 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಆರ್‌.ಎಸ್‌.ಅಕ್ವಾ ಕಂಪನಿಗೆ ರಿಪೇರಿ ಬಂದಿರುವ ಘಟಕಗಳನ್ನು ಸರಿಪಡಿಸಲು ಟೆಂಡರ್‌ ನೀಡಲಾಗಿದ್ದು, ಆರ್‌.ಎಸ್‌.ಅಕ್ವಾ ಕಂಪನಿಯವರು ರಿಪೇರಿಗೆ ಬಂದ 12 ಘಟಕಗಳಲ್ಲಿ 10 ಘಟಕಗಳನ್ನು ರಿಪೇರಿ ಮಾಡಲಾಗಿದ್ದು, ಕರೂರು ಮತ್ತು ಹಳೇಕೋಟೆ ಗ್ರಾಮದಲ್ಲಿರುವ 2 ಘಟಕಗಳ ರಿಪೇರಿ ಕಾರ್ಯ ಮಾತ್ರ ಬಾಕಿಯಿದೆ. ಇನ್ನೂ 4 ಘಟಕಗಳು ಉದ್ಘಾಟನೆಯಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ವಾಸ್ತವವಾಗಿ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲವೆನ್ನುವುದು ತಾಲೂಕಿನ ಜನರ ಅರೋಪವಾಗಿದೆ. ಆರಂಭದಲ್ಲಿ ಖಾಸಗಿ ಏಜೆನ್ಸಿಗಳು ಘಟಕಗಳನ್ನು ಅಳವಡಿಸಿ ಗ್ರಾಪಂಗೆ ಹಸ್ತಾಂತರಿಸಿವೆ. ಶುದ್ಧ ಕುಡಿಯುವ ನೀರಿನ ಘಟಕಗಳ ಏನೇ ನಿರ್ವಹಣೆ ಇದ್ದರೂ ಅದನ್ನು ಅಳವಡಿಸಿರುವ ಖಾಸಗಿ ಏಜೆನ್ಸಿಯವರೇ ಮಾಡಬೇಕಿತ್ತು, ಆದರೆ ಘಟಕಗಳ ನಿರ್ವಹಣೆ ವೆಚ್ಚ ದುಬಾರಿಯಾಗುತ್ತಿದ್ದಂತೆ ಗ್ರಾಪಂಗಳು ಘಟಕಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ತಾಲೂಕಿನ ಕೆಲವು ಘಟಕಗಳಿಗೆ ಬೀಗ ಬಿದ್ದಿವೆ.

ಮತ್ತೆ ಸರ್ಕಾರ ನಿರ್ವಹಣೆ ಮಾಡಲು ಲ್ಯಾಂಡ್‌ ಆರ್ಮಿಗೆ ವಹಿಸಿತ್ತು. ಆದರೂ ಅದು ಸಹ ಸಮರ್ಪಕ ನಿರ್ವಹಣೆ ಮಾಡದೆ ಇರುವುದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಜವಾಬ್ದಾರಿ ಹೊತ್ತುಕೊಂಡು ಪಾಳುಬಿದ್ದ ನೀರಿನ ಘಟಕಗಳನ್ನು ಟೆಂಡರ್‌ ಮೂಲಕ ದುರಸ್ತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಶುದ್ಧ ಕುಡಿಯುವ ನೀರಿನ ಘಟಕಗಳ ಮುಖ್ಯ ಸಮಸ್ಯೆಯೆಂದರೆ ನಿರ್ವಹಣೆ. ಖಾಸಗಿ ಸಂಸ್ಥೆಗಳು ಅಳವಡಿಸಿದ ಘಟಕಗಳನ್ನು 5 ವರ್ಷ ಅವರೇ ನಿರ್ವಹಣೆ ಮಾಡಬೇಕಿತ್ತು. ಸಹಕಾರ ಸಂಘಗಳು ಅಳವಡಿಸಿದ ಘಟಕಗಳನ್ನು ಅವರೇ ನಿರ್ವಹಣೆ ಮಾಡಬೇಕಿತ್ತು. ಕೆಆರ್‌ ಐಡಿಸಿಎಲ್‌ ಅಳವಡಿಸಿರುವ ಘಟಕಗಳನ್ನು ಸ್ಥಳೀಯ ಗ್ರಾಪಂನವರು ನಿರ್ವಹಣೆ ಮಾಡಬೇಕಾಗಿತ್ತು. ಆದರೆ ಘಟಕಗಳ ನಿರ್ವಹಣೆ ವೆಚ್ಚ ಮತ್ತು ಸಿಬ್ಬಂದಿ ವೇತನ ಭರಿಸಬೇಕಾದ ಹೊರೆ ಗ್ರಾಪಂಗಳ ಮೇಲೆ ಬಿದ್ದಿರುವ ಪರಿಣಾಮ ಗ್ರಾಪಂ ಅಧಿಕಾರಿಗಳು ಘಟಕಗಳ ನಿರ್ವಹಣೆಗೆ ಮೀನಮೇಷ ಎಣಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಎಲ್ಲಾ ಘಟಕಗಳ ನಿರ್ವಹಣೆಯ ಹೊಣೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೀಡಿದೆ. ಹಾಳಾದ ಘಟಕಗಳನ್ನು ದುರಸ್ತಿಗೊಳಿಸಿ ಸಮರ್ಪಕ ನಿರ್ವಹಣೆ ಮಾಡಲಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ತಾಲೂಕಿನಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕ ನಿರ್ವಹಣೆ ಇಲ್ಲದೆ ಕೆಲವು ಕಡೆ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಸರ್ಕಾರ ಸೂಕ್ತ ನಿರ್ವಹಣೆ ಮಾಡಿ ಜನರಿಗೆ ಶುದ್ಧ ಕುಡಿಯುವ ನೀರೊದಗಿಸಬೇಕು. ಗ್ರಾಮದಲ್ಲಿ 2 ವರ್ಷದ ಹಿಂದೆ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಈ ಘಟಕವು ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವೈ.ಕೃಷ್ಣಾರೆಡ್ಡಿ,
ಕರೂರು ಗ್ರಾಮಸ್ಥರು.

ತಾಲೂಕಿನ 27 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಒಟ್ಟು 110 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 92 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಆರ್‌.ಎಸ್‌.ಅಕ್ವಾ ಕಂಪನಿಗೆ ರಿಪೇರಿ ಬಂದಿರುವ ಘಟಕಗಳನ್ನು ಸರಿಪಡಿಸಲು ಟೆಂಡರ್‌ ನೀಡಲಾಗಿದ್ದು, ಆರ್‌.ಎಸ್‌.ಅಕ್ವಾ ಕಂಪನಿಯವರು ರಿಪೇರಿಗೆ ಬಂದ 12 ಘಟಕಗಳಲ್ಲಿ 10 ಘಟಕಗಳನ್ನು ರಿಪೇರಿ ಮಾಡಲಾಗಿದೆ. ಕರೂರು ಮತ್ತು ಹಳೇಕೋಟೆ ಗ್ರಾಮದಲ್ಲಿರುವ 2 ಘಟಕಗಳ ರಿಪೇರಿ ಕಾರ್ಯ ಮಾತ್ರ ಬಾಕಿಯಿದೆ. ಇನ್ನೂ 4 ಘಟಕಗಳು ಉದ್ಘಾಟನೆಯಾಗಿಲ್ಲ.
ಹೊಕ್ರಾಣಿ, ಎಇಇ, ಗ್ರಾಮೀಣ
ಕುಡಿಯುವ ನೀರು-ನೈರ್ಮಲ್ಯ ಇಲಾಖೆ

„ಆರ್‌.ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next