ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಂಗ ಸಂಸ್ಥೆ ಯಕ್ಷ ಶಾಲ್ಮಲಾ ನೀಡುವ ದಿ. ಎಮ್.ಎ. ಹೆಗಡೆ ದಂಟ್ಕಲ್ ಪ್ರಶಸ್ತಿಗೆ ಯಕ್ಷಗಾನದ ವಿದ್ವಾಂಸ, ಹಿರಿಯ ಕಲಾವಿದ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ
ಅಧ್ಯಕ್ಷ ಡಾ. ಜಿ ಎಲ್ ಹೆಗಡೆ ಕುಮಟಾ ಆಯ್ಕೆಯಾಗಿದ್ದಾರೆ.
ಡಾ. ಜಿ.ಎಲ್.ಹೆಗಡೆ ಅವರು ಯಕ್ಷಗಾನ ಸಂಶೋಧಕರಾಗಿದ್ದು ತಮ್ಮದೇ ಆದ ಯಕ್ಷಗಾನ ಸಂಶೋಧನಾ ಕೇಂದ್ರದ ಮೂಲಕ ಕಲೆಯ ಕುರಿತಾದ ಬಹುಮುಖಿ ಕಾರ್ಯವನ್ನು ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ತಿಟ್ಟುಗಳಲ್ಲಿ ಒಂದಾದ ಕರ್ಕಿ ಸಂಪ್ರದಾಯದ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರು. ಯಕ್ಷಗಾನ ಮತ್ತು ತಾಳಮದ್ದಳೆ ಕ್ಷೇತ್ರದಲ್ಲಿ ಪ್ರಸಿದ್ಧ ಕಲಾವಿದರೂ ಹೌದು. ಜಿ ಎಲ್ ಹೆಗಡೆಯವರಿಗೆ ಅಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆಯಲಿರುವ ಯಕ್ಷೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಯಕ್ಷಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ತಿಳಿಸಿದ್ದಾರೆ.