Advertisement
ಸಿರಿಧಾನ್ಯಗಳೆಂದರೆ ನಮಗೆ ಗೊತ್ತಿರುವ ಹಾಗೆ ರಾಗಿ, ನವಣೆ, ಸಜ್ಜೆ, ಊದಲು, ಬರಗು, ಕೊರಲೆ ಮುಂತಾದವುಗಳು. ಇವುಗಳನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಬೆಳೆಗಳನ್ನು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿಯೂ ಬೆಳೆಯಬಹುದು.
Related Articles
Advertisement
ರಾಗಿ ತಿಂದವ ನಿರೋಗಿ: ರಾಗಿಯಲ್ಲಿ ಕಡಿಮೆ ಕೊಬ್ಬಿನ ಅಂಶವಿದೆ. ಪ್ರತಿ 10ಗ್ರಾಂ.ನಲ್ಲಿ 13ಗ್ರಾಂ ಮಾತ್ರ. ಆದ್ದರಿಂದ ಹೆಚ್ಚು ತೂಕ ಹೊಂದಿದವರಿಗೆ ರಾಗಿ ಉತ್ತಮ. ಅದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಸುಣ್ಣದಂಶ ಹೊಂದಿದ್ದು ಹಲ್ಲು, ಎಲಬುಗಳು ಗಟ್ಟಿಯಾಗಲು ಅನುಕೂಲವಾಗುತ್ತದೆ. ರಾಗಿಯಲ್ಲಿ ಪ್ರತಿ 10ಗ್ರಾಂ.ಗೆ 330 ಮಿ.ಗ್ರಾಂ ಸುಣ್ಣದಂಶ ಇರುತ್ತದೆ. ನಾರಿನಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಮಲಬದ್ಧತೆ ಮತ್ತು ಹ್ರದಯ ರೋಗಗಳನ್ನು ಇದು ತಡೆಗಟ್ಟುತ್ತದೆ.
ಸಿರಿಧಾನ್ಯಗಳ ಸಂಸ್ಕರಣೆ: ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಸುವ ದೃಷ್ಟಿಯಿಂದ ಸಮರ್ಪಕ ಕೊಯ್ಲೋತ್ತರ ಸಂಸ್ಕರಣೆ ಪದ್ಧತಿಗಳು ಹೆಚ್ಚಿನ ಸಹಾಯಕ್ಕೆ ಬರುತ್ತವೆ. ಈಗ ಬೆಳೆಯಲಾಗುತ್ತಿರುವ ಆಹಾರ ಧಾನ್ಯಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರಾಥಮಿಕ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ಸರಿಯಾದ ಲಾಭ ದೊರೆಯುತ್ತಿಲ್ಲ.
ಪ್ರತಿವರ್ಷ 20 ಬಿಲಿಯನ್ ಮೌಲ್ಯದ ಆಹಾರ ಧಾನ್ಯ ಹಾಳು: ಪ್ರತಿವರ್ಷ ಭಾರತದಲ್ಲಿ ಸುಮಾರು 20ಬಿಲಿಯನ್ ಮೌಲ್ಯದ ಆಹಾರ ಧಾನ್ಯ ಹಾಳಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಹೊಲಗಳಲ್ಲಿ ಸಂಗ್ರಹಣೆ, ನಿರ್ವಹಣೆ ಪದ್ಧತಿ ಹಾಗೂ ಇನ್ನಿತರೆ ಮೂಲಭೂತ ವ್ಯವಸ್ಥೆಗಳಾದ ವಿದ್ಯುತ್, ಸಾಗಾಣಿಕೆ, ಶೀತಲೀಕರಣ ಘಟಕ, ಕೊಯ್ಲು ನಂತರದ ಜ್ಞಾನ ಬಳಕೆ ಇಲ್ಲದಿರುವುದು. ಬೇರೆ ಧಾನ್ಯಗಳಿಗೆ ಹೋಲಿಸಿದಾಗ ಸಿರಿಧಾನ್ಯಗಳ ಸಂಗ್ರಹಣಾ ಸಾಮರ್ಥ್ಯ ಹೆಚ್ಚು.
ಅಕ್ಕಿ ಹಾಗೂ ಗೋಧಿಗೆ ಬಳಸಲಾಗುವ ಮಷಿನ್‌ಗಳನ್ನು ಸಿರಿಧಾನ್ಯಗಳಿಗೂ ಉಪಯೋಗಿಸಲಾಗುತ್ತದೆ. ಹೊರ ಕವಚ ಹಾಗು ಉಳಿದಿರುವ ಧಾನ್ಯಗಳನ್ನು ಕುಟ್ಟಿ ಬೇರ್ಪಡಿಸಲಾಗುತ್ತದೆ. ಸಂಸ್ಕರಣಾ ಪದ್ಧತಿ ಹೆಚ್ಚಿನ ಸಮಯ ಹಾಗೂ ಶ್ರಮದಾಯಕ ಆಗಿರುವದರಿಂದ ಸಿರಿಧಾನ್ಯಗಳಾದ ಸಾವೆ, ನವಣೆ ಉಪಯೋಗ ಕಡಿಮೆಯಾಗಿದೆ. ಇಂದಿನ ದಿನಗಳಲ್ಲಿ ಮಾಲ್ಟ ತಯಾರಿಕೆಯಲ್ಲಿ ಸಿರಿ ಧಾನ್ಯಗಳ ಬಳಕೆಯನ್ನು ಕೈಗಾರಿಕೆ ಪ್ರಮಾಣದಲ್ಲಿ ಬಳಸಲಾಗಿದೆ.
ಸಿರಿಧಾನ್ಯಗಳ ಮೌಲ್ಯವರ್ಧನೆ: ಸಿರಿಧಾನ್ಯಗಳಿಂದ ಮೌಲ್ಯವರ್ಧಿತ ಆಹಾರಗಳನ್ನು ತಯಾರಿಸಬಹುದು. ರಾಗಿ ಇಡ್ಲಿ, ರಾಗಿ ದೋಸಾ, ರಾಗಿ ಮಾಲ್ಟ, ರಾಗಿ ಬಿಸ್ಕೆಟ್. ಅದೇ ರೀತಿ ಬೇರೆ ಸಿರಿಧಾನ್ಯಗಳಿಂದ ಅಂದರೆ ನವಣೆ, ಸಾವೆ, ಬರಗು ಇತ್ಯಾದಿಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು. ಸಾಂಪ್ರದಾಯಿಕ ಆಹಾರಗಳಾದ ಹೋಳಿಗೆ, ಅನ್ನ, ಉಪ್ಪಿಟ್ಟು, ಬಿಸಿಬೇಳೆಬಾತ್, ದೋಸೆ, ಇಡ್ಲಿಯನ್ನು ತಯಾರಿಸಬಹುದು.
ರೊಟ್ಟಿ, ಚಪಾತಿ, ಚಕ್ಕುಲಿ, ಉಂಡೆ ತಯಾರಿಕೆಯಲ್ಲೂ ಇವುಗಳನ್ನು ಬೆರೆಸಬಹುದು. ಅದೇ ರೀತಿ ಹಲವಾರು ಸಂಸ್ಕರಣಾ ವಿಧಾನಗಳಿಂದ ಅಂದರೆ ಪಾಲಿಶ್ ಮಾಡುವುದು, ಹಿಟ್ಟು ಮಾಡುವುದು, ಮೊಳಕೆ ಕಟ್ಟುವುದು, ಅರಳು ಹುರಿಯುವುದರಿಂದ ಉತ್ತಮ ಆಹಾರ ಪಡೆಯಬಹುದು. ಸಾವೆ ಮತ್ತು ನವಣೆಯಲ್ಲಿ ಶೇ.8ರಷ್ಟು ನಾರಿನಂಶ ಇದೆ. ಹೀಗಾಗಿ ಹೆಚ್ಚು ತೂಕ ಇರುವವರಿಗೆ ಹಾಗೂ ಸಕ್ಕರೆ ರೋಗಿಗಳಿಗೆ ಸೂಕ್ತ ಆಹಾರವಾಗಿದೆ.
* ಮಹಾದೇವ ವಡಗಾಂವ