ಮಣಿಪಾಲ: ಶಾಸಕರಾಗಿದ್ದ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಚುನಾವಣೆಗೆ ಕೆಲವೇ ದಿನಗಳ ಮೊದಲು ಪಕ್ಷ ಸೇರಿದ ಡಾ.ರಾಜೇಶ್ ಗೌಡ ಅವರು ಮೊದಲ ಪ್ರಯತ್ನದಲ್ಲೇ ಜಯದ ನಗು ಬೀರಿದ್ದಾರೆ. ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಶಿರಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಇಂದು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು. ಅಂಚೆ ಮತ ಎಣಿಕೆಯಿಂದಲೇ ಮುನ್ನಡೆ ಸಾಧಿಸಿದ್ದ ರಾಜೇಶ್ ಗೌಡ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡರು. ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ರಾಜೇಶ್ ಗೌಡಗೆ ತೀವ್ರ ಸ್ಪರ್ಧೆ ಒಡ್ಡಿದರು.
20 ನೇ ಸುತ್ತಿನ ಎಣಿಕೆಯ ನಂತರ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು 63299 ಮತಗಳನ್ನು ಪಡೆದರು. ಕಾಂಗ್ರೆಸ್ ನ ಟಿ.ಬಿ ಜಯಚಂದ್ರ ಅವರು 52914 ಮತ ಪಡೆದರೆ, ಜೆಡಿಎಸ್ ನ ಅಮ್ಮಾಜಮ್ಮ ಅವರು ಕೇವಲ 28745 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.
ಇದನ್ನೂ ಓದಿ:ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಮುನಿರತ್ನನೇ ಕಿಂಗ್: ಎದುರಾಳಿ ಕುಸುಮಾ ಎದುರು ಭರ್ಜರಿ ಜಯ
ರಾಜೇಶ್ ಗೌಡ ಅವರು ಗೆಲುವಿನತ್ತ ಮುನ್ನುಗ್ಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ನಡೆಯುವ ಪಾಲಿಟೆಕ್ನಿಕ್ ಕಾಲೇಜಿನತ್ತ ಆಗಮಿಸಿದರು. ಜೈಕಾರ ಕೂಗುತ್ತಾ ಶಿರಾ ಕ್ಷೇತ್ರದಲ್ಲಿ ಮೊದಲ ಜಯದ ಸಂಭ್ರಮವನ್ನು ಆಚರಿಸಿದರು.
ವಿಜಯೇಂದ್ರ ಶಕ್ತಿ: 2019ರ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ಚುನಾವಣೆಯ ಉಸ್ತುವಾರಿ ವಹಿಸಿ ಗೆಲುವು ದೊರಕಿಸಿದ್ದ ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಶಿರಾದಲ್ಲೂ ಉಸ್ತುವಾರಿ ವಹಿಸಿದ್ದರು. 2018ರ ಚುನಾವಣೆಯಲ್ಲಿ 10% ಮತವನ್ನೂ ಪಡೆಯಲು ವಿಫಲವಾಗಿದ್ದ ಬಿಜೆಪಿ ಈ ಬಾರಿ ಗೆಲುವು ಪಡೆದಿದ್ದು, ಕರ್ನಾಟಕ ಬಿಜೆಪಿ ಪಾಲಿಗೆ ವಿಜಯೇಂದ್ರ ಹೊಸ ಅಸ್ತ್ರವಾಗಿದ್ದಾರೆ.