Advertisement

ಆಧುನಿಕ ತಂತ್ರಜ್ಞಾನ ಬಳಸಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ

11:12 PM Sep 14, 2022 | Team Udayavani |

ಸರ್‌ ಎಂ. ವಿಶ್ವೇಶ್ವರಯ್ಯ ಬರೀ ಎಂಜಿನಿಯರ್‌ರಿಗಷ್ಟೇ ಅಲ್ಲ, ಎಲ್ಲ ಭಾರತೀಯರಿಗೂ ಪ್ರಾತಃ ಸ್ಮರಣೀಯರು. ಏಕೆಂದರೆ ಭಾರತಕ್ಕೆ ಅವರ ಸೇವೆ ಸ್ವತಂತ್ರ್ಯಾನಂತರವಷ್ಟೇ ಅಲ್ಲದೇ ಸ್ವಾತಂತ್ರ್ಯ ಪೂರ್ವದಲ್ಲೂ ಬ್ರಿಟಿಶ್‌ ಸರಕಾರದ ಆಳ್ವಿಕೆಯಡಿಯಲ್ಲೂ ಲಭಿಸಿತ್ತು. ಇಂದಿನ ಎಂಜಿನಿಯರ್‌ರಿಗೆ ಮಾತ್ರವಲ್ಲದೆ ದೇಶಸೇವೆ ಯಲ್ಲಿ ತೊಡಗಬಯಸುವ ವೃತ್ತಿಪರರಿಗೆ ಮತ್ತು ಜನರಿಗೆ ಅವರ ಆದರ್ಶ ಅನುಕರಣೀಯ. ಅವರ ಕರ್ತವ್ಯ ನಿಷ್ಠೆ ಮತ್ತು ಸೇವಾ ಮನೋಭಾವ, ಯೋಜನೆ ಹಾಗೂ ಯೋಚನೆಗಳಲ್ಲಿನ ದೃಢ ಸಂಕಲ್ಪ ಹಾಗೂ ತಮ್ಮ ಕೊನೆಯುಸಿರಿನವರೆಗೂ ಅವರು ಭಾರತಾಂಬೆಯ ಸೇವೆಯಲ್ಲಿ ತೊಡಗಿಸಿಕೊಂಡುದುದನ್ನು ಸಾರ್ವತ್ರಿಕವಾಗಿ ಶ್ಲಾ ಸಲೇಬೇಕು.

Advertisement

“ಎಂಜಿನಿಯರ್‌’ನ ಪಾತ್ರದ ವ್ಯಾಖ್ಯಾನದಂತೆ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಸೂಕ್ತವಾದ ಪರಿಹಾರವನ್ನು ನೀಡು ವವರಾಗಬೇಕು ಎಂದು ಸರ್‌ ಎಂ.ವಿ. ತೋರಿಸಿಕೊಟ್ಟರು. ಮೊನ್ನೆಯಷ್ಟೇ ರಾಜ್ಯದ ಹಲವೆಡೆ ನಾವು ಅನುಭವಿಸಿದ ಕೃತಕ ನೆರೆಯಂತಹ ಸಮಸ್ಯೆಗಳಿಗೆ ಅವರು ಆಗಲೇ ಶಾಶ್ವತ ಪರಿಹಾರ ವನ್ನು ಹೈದರಾಬಾದ್‌ ಹಾಗೂ ಮುಂಬಯಿಗಳಂತಹ ನಗರಗಳಿಗೆ ಸೂಚಿಸಿದ್ದರು.

ಒಂದು ಉತ್ತಮ ನಗರ ಯೋಜನೆಯನ್ನು ಹೇಗೆ ಮಾಡ ಬೇಕೆನ್ನುವುದರ ಬಗ್ಗೆ ಉದಾಹರಣೆಯಾಗಿ ಮೈಸೂರು ನಗರವನ್ನು ನಮಗೆ ಮಾದರಿಯಾಗಿತ್ತ ಸರ್‌ ಎಂ.ವಿ., ಹಲವು ಬೃಹತ್‌ ಜಲಾಶಯಗಳಿಗೆ ಅಣೆಕಟ್ಟು ನಿರ್ಮಾಣದ ಮೂಲಕ ನೀರಿನ ಉತ್ತಮ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಿದರು.

ಅಣೆಕಟ್ಟುಗಳ ಕೆಲಸದ ಗುಣಮಟ್ಟಕ್ಕೆ ಕೆ.ಆರ್‌.ಎಸ್‌. ಒಂದು ಜೀವಂತ ಉದಾಹರಣೆ. ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಅದೆಷ್ಟೋ ಸೇತುವೆಗಳು, ರಸ್ತೆ ಹಾಗೂ ರೈಲು ಮಾರ್ಗಗಳ ನಿರ್ಮಾಣದಿಂದ ದೇಶಾದ್ಯಂತ ಸಂಪರ್ಕ ಸಾಧಿಸಲು ಬುನಾದಿ ಹಾಕಿದ್ದರು. ಹೀಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ “ಭಾರತ ರತ್ನ’ರಾದ ಸರ್‌ ಎಂ.ವಿ. ಅವರ ಜನ್ಮದಿನವನ್ನು “ಎಂಜಿನಿಯರರ ದಿನ’ವಾಗಿ ಆಚರಿಸುತ್ತಿರುವುದು ಎಂಜಿನಿಯರರಾದ ನಮಗೆಲ್ಲ ಹೆಮ್ಮೆ.

ಸ್ವಾತಂತ್ರ್ಯಾನಂತರ ಭಾರತ ಬಹುತೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದರೂ ಮೂಲ ಸೌಕರ್ಯ ಕೊರತೆ, ನೀರು ಮತ್ತು ನೈರ್ಮಲ್ಯ ಸಮಸ್ಯೆ, ಸದೃಢ ನೆಲೆ ಹಾಗೂ ಸಾರಿಗೆ ವ್ಯವಸ್ಥೆಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಬೇಕಿದ್ದು ಈ ಕ್ಷೇತ್ರದಲ್ಲಿ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಆಧುನಿಕ ತಂತ್ರಜ್ಞಾನವಾದ “ಕೃತಕ ಬುದ್ಧಿಮತ್ತೆ’ (Artificial Intelligence) ಯಂತಹ ಸಾಧನಗಳನ್ನು ಬಳಸಿಕೊಂಡು ಸಿವಿಲ್‌ ಎಂಜಿನಿ ಯರಿಂಗ್‌ ವಿಭಾಗದಲ್ಲಿ ಹೆಚ್ಚಿನ ಗುಣಮಟ್ಟ, ಕ್ರಿಯಾಶೀಲತೆ, ಕಾರ್ಯಕ್ಷಮತೆ ಸಾಧಿಸುವಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ನಮ್ಮ ಪ್ರತಿಭಾವಂತ ಯುವ ಪೀಳಿಗೆಯನ್ನು ಅವಕಾಶ ಕೊರತೆಯಿಂದ ವಿದೇಶಕ್ಕೆ ಹಾರಲು ಬಿಡದೆ ಅವರ ಪ್ರತಿಭೆಯನ್ನು ಗುರುತಿಸಿ ನಮ್ಮ ದೇಶದ ಅಭಿವೃದ್ಧಿಗೆ ಬಳಸಲು ಅವಕಾಶ ಕಲ್ಪಿಸಿಕೊಡಬೇಕಿದೆ. ಇದರಿಂದ ದೇಶ ಸದ್ಯ ಎದುರಿ ಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಇದರಿಂದ ಆರ್ಥಿಕವಾಗಿಯೂ ದೇಶ ಇನ್ನಷ್ಟು ಸಶಕ್ತವಾಗಿ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ.

Advertisement

ಅಂತೆಯೇ ಯುವ ಪೀಳಿಗೆ ಭ್ರಷ್ಟಾಚಾರದ ಸೆಳೆತಕ್ಕೆ ಸಿಲುಕದಂತೆ ಜಾಗೃತಿ ಮೂಡಿಸಿ ಸರ್‌ ಎಂ.ವಿ. ಅವರಂತೆ ಸತ್ಯ, ನಿಷ್ಠೆ ಮತ್ತು ಕಾರ್ಯ ಪ್ರವೃತ್ತತೆಯ ಮನೋಭಾವದಿಂದ ಸಮಾಜಕ್ಕಾಗಿ ದುಡಿಯಲು ಪ್ರೇರೇಪಿಸಿದಾಗ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗುವುದು ದೂರವಿಲ್ಲ.

ಸರ್‌ ಎಂ.ವಿ. ಅವರ ಯೋಚನೆ, ಯೋಜನೆಗಳನ್ನು ಅರಿತು ಅನುಸರಿಸುವುದು ಮತ್ತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯುವ ಎಂಜಿನಿಯರ್‌ರು ಇದನ್ನರಿತಲ್ಲಿ ಸಮಾಜದ ಸಮಸ್ಯೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿ ಯೋಜಿತ ಕೆಲಸಗಳ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿ ಸೂಕ್ತ ಪರಿಹಾರವನ್ನು ನೀಡಿದ್ದೇ ಆದಲ್ಲಿ ಅವರೆಲ್ಲರೂ ಭಾರತದ ಪಾಲಿಗೆ “ರತ್ನ’ ಗಳಾಗುವುದರಲ್ಲಿ ಸಂಶಯವಿಲ್ಲ.

ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು 1860ರ ಸೆಪ್ಟಂಬರ್‌ 15ರಂದು ಮುದ್ದೇನಹಳ್ಳಿಯಲ್ಲಿ ಜನಿಸಿದರು. ಅಸಾಧಾರಣ ಪ್ರತಿಭೆ, ಬುದ್ಧಿಶಕ್ತಿ, ಜ್ಞಾಪಕಶಕ್ತಿಯ ಜತೆಗೆ ಸಮಯ ಪಾಲನೆಯಲ್ಲಿಯೂ ಶಿಸ್ತನ್ನು ರೂಢಿಸಿಕೊಂಡಿದ್ದ ಇವರ ನಡೆನುಡಿ, ಜೀವನ ಶೈಲಿ ಎಲ್ಲವೂ ಶಿಸ್ತುಬದ್ಧವಾಗಿತ್ತು. ದೇಶ ಕಂಡ ಶ್ರೇಷ್ಠ ಎಂಜಿ ನಿಯರ್‌ ಆಗಿದ್ದ ಸರ್‌ ಎಂ.ವಿ. ಅವರು 20ನೇ ಶತಮಾನ ದಲ್ಲಿ ಆಧುನಿಕ ಭಾರತದ ಶಿಲ್ಪಿ ಎಂಬ ಗೌರವಕ್ಕೆ ಪಾತ್ರರಾಗಿ ದ್ದರು. ಸಿವಿಲ್‌ ಎಂಜಿನಿಯರ್‌ ಕ್ಷೇತ್ರ ದಲ್ಲಿ ಅಪಾರ ಸಾಧನೆ ಗೈದ ಇವರು ಅರ್ಥಶಾಸ್ತ್ರಜ್ಞ ರಾಗಿ, ಮುತ್ಸದ್ಧಿಯಾಗಿಯೂ ಖ್ಯಾತ ರಾಗಿದ್ದರು. ದೇಶದಲ್ಲಿ ಕೈಗಾರಿಕೆಗಳು ತಲೆ ಎತ್ತುವಂತೆ ಮಾಡುವಲ್ಲಿಯೂ ಸರ್‌ ಎಂ.ವಿ. ಅವರ ಪರಿಶ್ರಮ ಅಪಾರ. ಬ್ರಿಟಿಶರಿಂದ ನೈಟ್‌ಹುಡ್‌ ಗೌರವ, ಭಾರತ ಸರಕಾರದಿಂದ ಭಾರತರತ್ನ ಗೌರವ ಸಹಿತ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಸರ್‌ ಎಂ.ವಿ. ಅವರಿಗೆ ಲಭಿಸಿದ್ದವು. ಆದರೆ ಈ ಗೌರವ, ಸಮ್ಮಾನಗಳು ಸರ್‌ ಎಂ.ವಿ. ಅವರನ್ನು ಕರ್ತವ್ಯನಿಷ್ಠೆ, ಬದ್ಧತೆ, ಸೇವಾಮನೋಭಾವ ದಿಂದ ಹಿಂದೆ ಸರಿಯುವಂತೆ ಮಾಡಲಿಲ್ಲ. 102 ವರ್ಷಗಳ ತುಂಬು ಬದುಕನ್ನು ಬಾಳಿದ ಎಂ.ವಿ. ಅವರು ನಿಜಾರ್ಥದಲ್ಲಿ ಕಾಯಕಯೋಗಿ. ಅವರು ಅಗಾಧ ಪರಿಶ್ರಮ, ದೂರದೃಷ್ಟಿ ಯಿಂದ ರೂಪಿಸಿದ ಸಮಾಜಮುಖೀ ಯೋಜನೆಗಳ ಫ‌ಲವನ್ನು ಭಾರತ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳ ಜನತೆ ಇಂದಿಗೂ ಉಣ್ಣುತ್ತಿದೆ. ದೇಶ ಕಂಡ ಈ ಅಪ್ರತಿಮ ಎಂಜಿನಿಯರ್‌ರ ಜನ್ಮದಿನವಾದ ಸೆಪ್ಟಂಬರ್‌ 15ರಂದು ಭಾರತದಲ್ಲಿ ಪ್ರತೀ ವರ್ಷ ಎಂಜಿನಿಯರ್‌ರ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಸರ್‌ ಎಂ.ವಿ. ಅವರನ್ನು ಸ್ಮರಿಸಿಕೊಳ್ಳುವ ಜತೆಯಲ್ಲಿ ದೇಶದ ನಿರ್ಮಾತೃಗಳಿಗೆ ಗೌರವ ಸಲ್ಲಿಸುತ್ತ ಬರಲಾಗಿದೆ.

– ಡಾ| ಬಿ. ರಾಘವೇಂದ್ರ ಕೆ. ಹೊಳ್ಳ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next