Advertisement

ಪೇದೆ ನೇಮಕಕ್ಕೂ ಏಕಗವಾಕ್ಷಿ ಪದ್ಧತಿ

12:23 PM Feb 21, 2017 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಪೊಲೀಸ್‌ ಪೇದೆ ವಿಭಾಗಗಳ ಸಿಬ್ಬಂದಿ ನೇಮಕಾತಿ ಹಾಗೂ ತರಬೇತಿ ಪ್ರಕ್ರಿಯೆಯಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿದ್ದ ಕೋಟ್ಯಂತರ ರೂ. ನಷ್ಟಕ್ಕೆ ಬ್ರೇಕ್‌ ಹಾಕಲು ರಾಜ್ಯ ಪೊಲೀಸ್‌ ಇಲಾಖೆ ನಿರ್ಧರಿಸಿದೆ. 

Advertisement

ಈ ನಿಟ್ಟಿನಲ್ಲಿ ನಾಗರಿಕ, ಜಿಲ್ಲಾ ಮೀಸಲುಪಡೆ(ಡಿಎಆರ್‌) ಕೆಎಸ್‌ಆರ್‌ಪಿ, ಸಿಎಆರ್‌ (ನಗರ ಮೀಸಲು ಪಡೆ)ವಿಭಾಗಗಳಿಗೆ ಏಕಗವಾಕ್ಷಿ ನೇಮಕ ಪದ್ಧತಿ ಜಾರಿಗೊಳಿಸಲು ಹೊಸ ನಿಯಮಾವಳಿ ರಚಿಸಬೇಕೆಂಬ ಹೊಸ ಪ್ರಸ್ತಾವನೆಯನ್ನು ಡಿಜಿಪಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರೂಪಿಸಿದೆ.

ಆರ್‌.ಕೆ.ದತ್ತಾ ಅವರು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲೇ ಇಂತಹದ್ದೊಂದು ಕರಡು ನಿಯಮಾವಳಿ ಸಿದ್ಧಪಡಿಸಿಕೊಂಡು, ಇಲಾಖೆಯಲ್ಲಿ ಬಹಳ ವರ್ಷಗಳಿಂದ ತಲೆನೋವಾಗಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

ಕರಡು ನಿಯಮಾವಳಿಯಲ್ಲಿ, ನಾಲ್ಕು ಪೊಲೀಸ್‌ ವಿಭಾಗಗಳ ಸಿಬ್ಬಂದಿಯಲ್ಲಿ ಸಾಮರಸ್ಯ, ಸಮಾನ ತರಬೇತಿ, ವೃತ್ತಿಕೌಶಲ ಬಳಕೆಗೆ ಸಮಾನ ಅವಕಾಶ, ಸಿಬ್ಬಂದಿ ಕೊರತೆ ನೀಗಿಸುವುದು, ನಿಗದಿತ ಸಮಯದಲ್ಲಿ ವರ್ಗಾವಣೆ ಭಾಗ್ಯ, ಆರ್ಡರ್ಲಿ ಪದ್ಧತಿಗೆ ಮುಕ್ತಿ, ಡಿಎಆರ್‌/ಸಿಎಆರ್‌ ವಿಭಾಗಗಳನ್ನು ಜಿಲ್ಲಾ ಪೊಲೀಸ್‌ ವಿಭಾಗಕ್ಕೆ ವಿಲೀನ, ಕೆಎಸ್‌ಆರ್‌ಪಿ, ಸಿವಿಲ್‌, ಐಆರ್‌ಬಿ,ಕೆಎಸ್‌ಐಎಸ್‌ಎಫ್ ಬೆಟಾಲಿಯನ್‌ಗಳನ್ನು ಒಂದೇ ಕೇಡರ್‌ ಅಡಿಯಲ್ಲಿ ತರುವುದು. ಜತೆಗೆ 1997ರ ರಾಷ್ಟ್ರೀಯ ಪೊಲೀಸ್‌ ಆಯೋಗದ 7ನೇ ವರದಿ ಯಥಾವತ್‌ ಜಾರಿಗೊಳಿಸುವ ಉದ್ದೇಶವನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.

ಡಿಜಿಪಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರೂಪಿಸಿರುವ ಪ್ರಸ್ತಾವನೆ ಪ್ರತಿ ಉದಯವಾಣಿಗೆ ಲಭ್ಯವಾಗಿದ್ದು, ಪೊಲೀಸ್‌ ಇಲಾಖೆಯ ಹೊಸ ಸುಧಾರಣೆಗಳಿಗೆ ಮುಂದಡಿ ಎಂದೇ ಬಿಂಬಿಸಲಾಗುತ್ತಿರುವ ಈ  ಪ್ರಸ್ತಾವನೆ ಸದ್ಯದಲ್ಲಿಯೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಲಿದ್ದು, ಮುಖ್ಯಮಂತ್ರಿಗಳ ಅಂಕಿತದ ಬಳಿಕ ಮುಂಬರುವ ಪೊಲೀಸ್‌ ಪೇದೆಗಳ ನೇಮಕಾತಿಗೆ ಏಕಗವಾಕ್ಷಿ ಪದ್ಧತಿ ಜಾರಿಯಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

ದುಂದುವೆಚ್ಚ ಕಡಿವಾಣ: ನಾಲ್ಕು ವಿಭಾಗಗಳ ಪೊಲೀಸ್‌ ಪೇದೆಗಳ ನೇಮಕಾತಿ ಪ್ರತ್ಯೇಕವಾಗಿ ನಡೆಯಲಿದ್ದು  ಪ್ರತ್ಯೇಕ ತರಬೇತಿ ನೀಡಲಾಗುತ್ತದೆ. ಆರಂಭದಲ್ಲಿ ಡಿಎಆರ್‌, ಸಿಎಆರ್‌, ಕೆಎಸ್‌ಆರ್‌ಪಿ ವಿಭಾಗಗಳಿಗೆ ಆಯ್ಕೆಯಾಗುವ ಸಿಬ್ಬಂದಿ ವೃತ್ತಿಜೀವನ ಪೂರ್ತಿ ಇಲ್ಲಿಯೇ ಕಳೆಯುವ ಅನಿವಾರ್ಯತೆಯಿದೆ. ಹೀಗಾಗಿ ಬಹುತೇಕ ಸಿಬ್ಬಂದಿ ಸಿವಿಲ್‌  ವಿಭಾಗ, ಪಿಎಸ್‌ಐ ಆಯ್ಕೆಯಾಗುವ ಅನಿವಾರ್ಯತೆಗೆ ಮೊರೆಹೋಗುತ್ತಾರೆ.

ಹೀಗಾಗಿ ವೃತ್ತಿಗೆ ಸೇರಿದ ಎರಡು ಮೂರು ವರ್ಷಗಳಲ್ಲಿಯೇ ಸಿವಿಲ್‌, ಪಿಎಸ್‌ಐ ನೇಮಕಕ್ಕೆ ಪರೀಕ್ಷೆ ಬರೆದು ಆಯ್ಕೆಯಾಗಲಿದ್ದಾರೆ. ಪರಿಣಾಮ ಮತ್ತೂಂದು ಬಾರಿ ತರಬೇತಿ ಪಡೆಯಲಿದ್ದು ಸರಕಾರದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ. ಅಲ್ಲದೆ ಆಯ್ಕೆಯಾದ ಅಭ್ಯರ್ಥಿಗಳ ಸ್ಥಾನ ಖಾಲಿ ಉಳಿಯಲಿದ್ದು, ಮುಂದಿನ ಬಾರಿ ನೇಮಕಾತಿ ಆಗುವ ತನಕ ಸಿಬ್ಬಂದಿ ಕೊರತೆ ಉಂಟಾಗಲಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

ಹೊಸ ಬದಲಾವಣೆ ಏನು?: 1997ರ ರಾಷ್ಟ್ರೀಯ ಪೊಲೀಸ್‌ ಆಯೋಗದ 7ನೇ ವರದಿ ಯಥಾವತ್‌ ಜಾರಿಯಾದರೆ, ನಾಲ್ಕು ವಿಭಾಗಗಳಿಗೆ ಏಕಕಾಲದಲ್ಲಿ ಪರೀಕ್ಷೆ ಹಾಗೂ ತರಬೇತಿ ನೀಡಬೇಕು. ಬಳಿಕ ಪೇದೆಗಳಿಗೆ ಆರಂಭದಲ್ಲಿ ಕೆಎಸ್‌ಆರ್‌ಪಿ ಕರ್ತವ್ಯಕ್ಕೆ ನಿಯೋಜಿಸಬೇಕು. ನಂತರ ಡಿಎಆರ್‌, ಸಿಎಆರ್‌ ವಿಭಾಗಗಳಿಗೆ ವರ್ಗಾವಣೆಯಾದ ಬಳಿಕ ಅಂತಿಮವಾಗಿ ಸಿವಿಲ್‌ ಪೇದೆಯಾಗಿ ವರ್ಗಾವಣೆಯಾಗಬೇಕು. ಈ ಹಂತದಲ್ಲಿ ನಿಗದಿತ ಸಮಯಕ್ಕನುಗುಣವಾಗಿ ಬಡ್ತಿಯೂ ದೊರೆಯಲಿದೆ.

ಸಿಎಆರ್‌/ಡಿಎಆರ್‌ ವಿಲೀನ: ಡಿಎಆರ್‌ ಹಾಗೂ ಸಿಎಆರ್‌ ವಿಭಾಗದ ಪೇದೆಗಳು ವೃತ್ತಿ ಜೀವನ ಪರ್ಯಂತ ಸ್ಟಾಂಡಿಂಗ್‌ ಗಾರ್ಡ್‌, ಗನ್‌ಮ್ಯಾನ್‌, ಆರೋಪಿತರ ಬೆಂಗಾವಲು, ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಆರ್ಡರ್ಲಿಗಳಾಗಿ ಸೇವೆ ಸಲ್ಲಿಸಬೇಕಾಗಿರುತ್ತದೆ. ಈ ಹಳೆಯ ಪದ್ಧತಿ ಸಿಬ್ಬಂದಿಗೆ ಅಸಮಾಧಾನ ಉಂಟಾಗುವಂತೆ ಮಾಡಿದೆ. ಹೀಗಾಗಿ ಹೊಸ ನಿಯಮ ಜಾರಿಗೊಳಿಸಿದರೆ ಕಾಲಕಾಲಕ್ಕೆ ವೃತ್ತಿ ಬದಲಾವಣೆಯಿಂದ ಹೊಸ ಚೈತನ್ಯ, ಹೊಸ ಸಾಹಸಗಳಿಗೆ ಅಣಿಯಾಗುವಂತಹ ಅವಕಾಶಗಳನ್ನು ಕಲ್ಪಿಸಿದಂತಾಗುತ್ತದೆ.

ಹೊಸ ನೇಮಕಾತಿ ಪದ್ಧತಿ ಅನಿವಾರ್ಯ
ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಹಿಮಾಚಲ ಪ್ರದೇಶದಲ್ಲಿ ಜಾರಿಯಿರುವ ಏಕಗವಾಕ್ಷಿ ನೇಮಕಾತಿ ಪದ್ಧತಿ, ಐದೂ ರಾಜ್ಯಗಳಲ್ಲಿ ಪೊಲೀಸ್‌ ವಿಭಾಗಗಳ ಆಂತರಿಕ ವರ್ಗಾವಣೆ ಕ್ರಮ, ನ್ಯಾ. ಕೆಟಿ ಥಾಮಸ್‌ ಆಯೋಗ (2006),1997ರ ರಾಷ್ಟ್ರೀಯ ಪೊಲೀಸ್‌ ಆಯೋಗದ 7ನೇ ವರದಿಯ ಅಂಶಗಳನ್ನು ಉಲ್ಲೇಖೀಸಿರುವ  ಉನ್ನತ ಮಟ್ಟದ ಸಮಿತಿ, ಪೊಲೀಸ್‌ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಹೊಸ ನೇಮಕಾತಿ ಪದ್ಧತಿ ಜಾರಿಗೊಳಿಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದೆ.

 * ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next