ನವದೆಹಲಿ:ಸಿಂಗಲ್ ಬ್ರ್ಯಾಂಡ್ ರಿಟೇಲ್, ನಿರ್ಮಾಣ ಹಾಗೂ ಏರ್ ಇಂಡಿಯಾದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ನೀತಿಯಲ್ಲಿನ ಪ್ರಮುಖ ಬದಲಾವಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸಿಂಗಲ್ ಬ್ರ್ಯಾಂಡ್ ರಿಟೇಲ್ ನಲ್ಲಿ ಶೇ.100ರಷ್ಟು ಹಾಗೂ ಸರ್ಕಾರಿ ಸ್ವಾಮಿತ್ವದ ಏರ್ ಇಂಡಿಯಾದಲ್ಲಿ ಶೇ.49ರಷ್ಟು ವಿದೇಶಿ ನೇರ ಬಂಡವಾಳ(ಎಫ್ ಡಿಐ) ಹೂಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ವಿದೇಶಿ ವಿಮಾನಯಾನ ಸಂಸ್ಥೆ ಸರ್ಕಾರದ ಅನುಮೋದನೆ ಮೂಲಕ ಏರ್ ಇಂಡಿಯಾ ಸಂಸ್ಥೆಯಲ್ಲಿ ಶೇ.49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಹುದಾಗಿದೆ. ಇದರಿಂದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಲ್ಲಿ ಮತ್ತಷ್ಟು ಉತ್ತಮ ಸೇವೆ ನೀಡುವ ಯೋಜನೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಏರ್ ಇಂಡಿಯಾದ ಸಮರ್ಥ ನಿರ್ವಹಣೆ ಹಾಗೂ ಮಾಲೀಕತ್ವ ಭಾರತೀಯರಲ್ಲಿಯೇ ಉಳಿಯಬೇಕು ಎಂಬ ಉದ್ದೇಶದೊಂದಿಗೆ ಗರಿಷ್ಠ ಶೇ. 49ರಷ್ಟು ನೇರ ಅಥವಾ ಪರೋಕ್ಷ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ.
Related Articles
ಸದ್ಯ ಸಿಂಗಲ್ ಬ್ರ್ಯಾಂಡ್ ರಿಟೇಲ್ ಕ್ಷೇತ್ರದಲ್ಲಿ ಶೇ.49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಲು ಅವಕಾಶ ಇದ್ದು, ಅದಕ್ಕಿಂತ ಹೆಚ್ಚು (ಶೇ.100) ಹೂಡಿಕೆ ಮಾಡಬೇಕಿದ್ದರೆ ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿದೆ ಎಂದು ವರದಿ ತಿಳಿಸಿದೆ.
ವ್ಯವಹಾರವನ್ನು ಸುಲಲಿತಗೊಳಿಸುವ ನಿಟ್ಟಿನಲ್ಲಿ ಎಫ್ ಡಿಐ ನಿಯಮಾವಳಿಯನ್ನು ಉದಾರೀಕರಣಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಹಿಂದೆ ಯುಪಿಎ ಸರ್ಕಾರ ಏರ್ ಇಂಡಿಯಾದಲ್ಲಿ ಎಫ್ ಐಡಿ ಹೂಡಿಕೆ ಬಗ್ಗೆ ಪ್ರಸ್ತಾಪವಿಟ್ಟಾಗ ವಿಪಕ್ಷದಲ್ಲಿದ್ದ ಭಾರತೀಯ ಜನತಾ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಏತನ್ಮಧ್ಯೆ ಸಿಂಗಲ್ ಬ್ರ್ಯಾಂಡ್ ರಿಟೇಲ್ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕೊಟ್ಟಿರುವುದಕ್ಕೆ ಆಲ್ ಇಂಡಿಯಾ ಟ್ರೇಡರ್ಸ್ ವಿರೋಧಿಸಿದೆ.