ಚಿಕ್ಕಂದಿನಿಂದಲೂ ನನಗೆ ಹಾಡುವುದೆಂದರೆ ಬಹಳ ಇಷ್ಟ. ಅಮ್ಮ, ದಿನವೂ ದೇವರನಾಮಗಳನ್ನು ಹಾಡುತ್ತಿದ್ದಳು. “ಗಜಮುಖನೆ ಗಣಪತಿಯೇ…’, “ಶರಣುಶರಣಯ್ಯ…’ ಹೀಗೆ ದಿನಾ ಸಂಜೆ ಅವಳು ದೇವರಿಗೆ ದೀಪ ಹಚ್ಚಿ ಐದಾರು ಹಾಡುಗಳನ್ನು ಹಾಡುತ್ತಿದ್ದರೆ, ನಾನೂ- ತಂಗಿಯೂ ಅವಳೊಂದಿಗೆ ದನಿಗೂಡಿಸುತ್ತಿದ್ದೆವು. ಹೀಗಾಗಿ ನನಗೆ ಈ ಹಾಡುಗಳೆಲ್ಲ ಬಾಯಿಪಾಠವಾಗಿದ್ದವು. ಹಾಡಿನ ಪ್ರತಿಭೆಯನ್ನು ತೋರಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೆ.
ನಾನಾಗ 5ನೇ ತರಗತಿಯಲ್ಲಿದ್ದೆ. ಅವತ್ತು ಕೊನೆಯ ಪಿರಿಯಡ್‌ನ ಸಬ್ಜೆಕ್ಟ್ ಟೀಚರ್ ಬಂದಿರಲಿಲ್ಲ. ಅವರ ಬದಲಿಗೆ ಬಂದ ಸರ್, “ಯಾರಾದರೂ ಹಾಡು ಹಾಡುವವರಿದ್ರೆ ಹಾಡಿ’ ಎಂದರು. ಒಂದಿಬ್ಬರು ಹುಡುಗರು ಬಂದು ಯಾವುದೋ ಸಿನಿಮಾ ಹಾಡಿನ ಎರಡು ಸಾಲುಗಳನ್ನು ಹಾಡಿದರು. ಅವರಿಗೆ ಮುಂದಿನ ಸಾಲು ಗೊತ್ತಿರಲಿಲ್ಲ. ನಾನು ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದೆ. ಕೈ ಎತ್ತಿದೆ. ಸರ್ ಕರೆದು ಹಾಡೆಂದರು. “ಗಜಮುಖನೆ ಗಣಪತಿಯೇ..’ ಹಾಡು ಹಾಡಿದೆ. ಮೇಷ್ಟ್ರಿಗೆ ಖುಷಿಯಾಯಿತು. “ಮುಂದಿನವಾರ ಹಾಡಿನ ಸ್ಪರ್ಧೆ ಇದೆ. ಹೆಸರು ಕೊಡಮ್ಮ’ ಎಂದರು. ನನಗೆ ಬಹುಮಾನ ಬಂದಷ್ಟೇ ಖುಷಿಯಾಯಿತು! ಸ್ಪರ್ಧೆಯ ದಿನ ಬಂತು. ನನ್ನ ಸರದಿಯೂ ಬಂತು. ನಾನು ಮೈಕ್ ಎದುರು ನಿಂತು ಶರಣು ಶರಣಯ್ಯ ಶರಣು ಬೆನಕ.. ಎಂದು ಇನ್ನೂ ಶುರು ಮಾಡಿದ್ದಷ್ಟೇ, ಅಷ್ಟೊತ್ತಿಗೆ ಮೂವರು ತೀರ್ಪುಗಾರರಲ್ಲಿ ಒಬ್ಬ ಮೇಡಂ ಪಟ್ಟನೆ ಬೆಲ್ ಹೊಡೆದುಬಿಟ್ಟರು.
ಪಕ್ಕದಲ್ಲಿದ್ದ ಸರ್- “ಯಾಕ್ರೀ ಬೆಲ್ ಒತ್ತಿದ್ರಿ? 3 ನಿಮಿಷ ಟೈಂ ಇದೆಯಲ್ಲ. ಹಾಡ್ಲಿ ಬಿಡ್ರಿ…’ ಎಂದರು ಪಾಪ. ಆದರೆ ಆ ಮೇಡಂ ಅದೇನ್ ದನೀರಿ… ದಪ್ಪ ಎಮ್ಮಿ ಹಂಗ್ ಅಂದಾಗ ಮುಂದಿನ ಸಾಲಿನಲ್ಲಿ ಕುಳಿತವರೆಲ್ಲ ಘೊಳ್ಳನೆ ನಕ್ಕುಬಿಟ್ಟರು. ನನಗೆ ಅವಮಾನದಿಂದ ನಾಲಿಗೆಯ ದ್ರವವೆಲ್ಲ ಆರಿ ಹೋಗಿತ್ತು! ಮನೆಗೆ ಬಂದು ಮನಸೋ ಇಚ್ಛೆ ಅತ್ತೆ!. ಅದೇ ಕೊನೆ. ಆಮೇಲೆ ನಾನೆಂದೂ ಹಾಡುವ ಸ್ಪರ್ಧೆಗೆ ಹೋಗಲೇ ಇಲ್ಲ. ದೊಡ್ಡವ ಳಾದ ಮೇಲೂ ಹಾಡುತ್ತಿರಲಿಲ್ಲ. ಯಾರದಾ ದರೂ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದರೆ ಅಮ್ಮ ಹಾಡುತ್ತಿದ್ದರು. ಅವರ ಜೊತೆಗೆ ನನಗೂ ಹಾಡೆಂದು ಒತ್ತಾಯಿಸಿದರೂ ನಾನು ಮಾತ್ರ ಹಾಡುತ್ತಿರಲಿಲ್ಲ. “ನನ್ನ ಧ್ವನಿ ಚೆನ್ನಾ ಗಿಲ್ಲ’ ಎಂದು ಬಾಲ್ಯ ದಲ್ಲಿ ಆ ಮೇಡಂ ನುಡಿದ ಕಹಿನುಡಿ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದು ಹೋಗಿತ್ತು! ಮುಂದೆ ನನಗೆ ಮದುವೆಯಾಯಿತು. ಮಗಳೂ ಹುಟ್ಟಿದಳು. ಎಷ್ಟು ಮುದ್ದೋ, ಅಷ್ಟೇ ಹಠಮಾರಿ ಮಗು! ಯಾರು ಎಷ್ಟು ತೊಟ್ಟಿಲು ತೂಗಿದರೂ ನಿದ್ದೆ ಮಾಡುತ್ತಿರಲಿಲ್ಲ. ನನ್ನಮ್ಮ ದೇವರಿಗೆ ಹಾಡಿದ್ದಕ್ಕಿಂತ ದುಪ್ಪಟ್ಟು ಹಾಡು ಹಾಡಿದರೂ ಮಗು ಮಲಗಲೊಲ್ಲದು! ಎಲ್ಲರೂ ಸುಸ್ತಾಗಿ, “ನಿನ್ನ ಮಗಳಿಗೆ ನೀನೇ ಹಾಡಿ ಮಲಗಿಸು..’ ಎಂದಾಗ, ” ಶ್ರೀ ಚಕ್ರಧಾರಿಗೆ ಶಿರಬಾಗಿ
ಲಾಲಿ…’ ಎಂದು ನನ್ನೆದೆಯ ಪ್ರೀತಿಯನ್ನೆಲ್ಲ ಧಾರೆಯೆರೆದು ಹಾಡಿದ್ದೇ ತಡ; ನನ್ನ ಮಗಳು ನಿದ್ದೆಗೆ ಜಾರಿದ್ದಳು! ಅದರ ಮೇಲೆ ಅವಳು ನನ್ನ ಹಾಡಿಗೆ ಮಾತ್ರ ಮಲಗುತ್ತಿದ್ದಳು. ನನ್ನ ಸ್ವರವೂ ಇಂಪಾಗಿದೆ ಅಥವಾ ಕೇಳಲು ಪರವಾಗಿಲ್ಲ ಎಂದು ನನಗೆ ತಿಳಿಯಲು ನನ್ನ ಮಗಳು ಹುಟ್ಟಿ ಬರಬೇಕಾಯಿತು!
– ಸವಿತಾ ಮಾಧವ ಶಾಸ್ರ್ತೀ, ಗುಂಡ್ಮಿ