ಹೊಸದಿಲ್ಲಿ: ನಿಹಾಂಗ್ ಸಿಖ್ ಸದಸ್ಯ ಸರ್ವಜೀತ್ ಸಿಂಗ್ ನನ್ನು ಸೋನಿಪತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸಿಂಗ್ ಶುಕ್ರವಾರ ಸಿಂಘು ಗಡಿಯಲ್ಲಿ ನಡೆದ ಭೀಕರ ಹತ್ಯೆಯ ಹೊಣೆ ಹೊತ್ತಿದ್ದಾರೆ. ತನಿಖೆಗಾಗಿ ಆತನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮೃತದೇಹ ಪತ್ತೆಯಾದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಸಂಜೆಯ ವೇಳೆಗೆ ಸಿಂಗ್ ಪೊಲೀಸರ ಮುಂದೆ ಶರಣಾಗಿದ್ದ. ಸಿಂಗ್ ಇತರ ನಾಲ್ವರ ಹೆಸರನ್ನು ಬಾಯ್ಬಿಟ್ಟಿದ್ದು ಈಗ ಅವರನ್ನು ಗುರುತಿಸಲು ಪಂಜಾಬ್‌ನ ಚಮ್ಕೌರ್ ಮತ್ತು ಗುರುದಾಸ್‌ಪುರಕ್ಕೆ ಕರೆದೊಯ್ಯಲಾಗಿದೆ. ಅಲ್ಲದೆ, ಕೊಲೆ ನಡೆಸಿದ ಆಯುಧಕ್ಕಾಗಿ ಶೋಧ ನಡೆಯುತ್ತಿದೆ.
ಇದನ್ನೂ ಓದಿ;- ಶುದ್ಧ ಕುಡಿವ ನೀರಿನ ಘಟಕ ದುರಸ್ತಿಗೆ ಗ್ರಾಮಸ್ಥರ ಒತ್ತಾಯ
ಮೊದಲು, ಸಿಂಗ್ ನನ್ನು ಖಾರ್ಖೋಡಾದ ಅಪರಾಧ ವಿಭಾಗಕ್ಕೆ ಕರೆದೊಯ್ಯಲಾಯಿತು, ನಂತರ ಕುಂಡ್ಲಿ ಪೊಲೀಸರು ಆತನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ ತಪಾಸಣೆಯ ನಂತರ ಶನಿವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಕ್ರೈಮ್ ಬ್ರಾಂಚ್ ತಂಡವು ನಿಹಾಂಗ್ ಸರ್ದಾರ್ ನನ್ನು ಪೊಲೀಸ್ ವಿಚಾರಣಾ ಕೈದಿಯಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಗಳಿವೆ.
ಸುದ್ದಿ ಮೂಲಗಳ ಪ್ರಕಾರ, ಕಳೆದ 3 ರಿಂದ 4 ದಿನಗಳಿಂದ ಸಿಂಘು ಗಡಿಯಲ್ಲಿ ನಿಹಾಂಗ್ ಸಿಖ್ಖರ ಗುಂಪಿನೊಂದಿಗೆ ತಂಗಿದ್ದ ಲಖಬೀರ್ (ಕೊಲೆಯಾದ ವ್ಯಕ್ತಿ), ಪವಿತ್ರ ಸರ್ಬ್ಲೋ ಗ್ರಂಥವನ್ನು ಅಪವಿತ್ರಗೊಳಿಸಿದ ಆರೋಪ ಹೊರಿಸಲಾಗಿತ್ತು.