ಏನೋ ತುಂಟತನ ಮಾಡಿ, ಅಜ್ಜಿಯನ್ನು ಪೀಡಿಸಿ ಕಾಡಿಸಿ ಓಡಾಡುವ ಮಕ್ಕಳು, ಕತ್ತಲ ಮೂಲೆಯಲ್ಲಿ ಬಚ್ಚಿಟ್ಟುಕೊಂಡ ಇಲಿಗಳ ಕಾಟ ಬೇರೆ. ಆ ನೆವದಲ್ಲಿ ಕೋಲು ಹಿಡಿದು ಮನೆತುಂಬ ಓಡಾಡುವ ಅಜ್ಜಿಯ ಬಳಿ ಎಷ್ಟೆಷ್ಟೋ ಕತೆಗಳುಂಟು. ಆಕೆಯದೇ ಒಂದು ದೊಡ್ಡ ಕತೆ, ಅದು ಸಿಂಗಾರೆವ್ವನ ಕತೆಯೂ ಹೌದು, ಆ ವಾಡೆಯ ಕತೆಯೂ ಹೌದು.
ಚಂದ್ರಶೇಖರ ಕಂಬಾರರ “ಸಿಂಗಾರೆವ್ವ ಮತ್ತು ಅರಮನೆ’ ಲಕ್ಷ್ಮೀಚಂದ್ರಶೇಖರ್ ಅವರ ಏಕವ್ಯಕ್ತಿ ಪ್ರದರ್ಶನದಲ್ಲಿ ತೆರೆದುಕೊಳ್ಳುವುದು ಹೀಗೆ. ಒಂದೂವರೆ ಗಂಟೆಗಳ ಏಕವ್ಯಕ್ತಿ ಪ್ರದರ್ಶನ. ಅಷ್ಟು ಹೊತ್ತೂ ರಂಗದ ಮೇಲೆ ಜೀವಿಸಿರುವುದು ಲಕ್ಷ್ಮೀ ಚಂದ್ರಶೇಖರ್ ತಾಕತ್ತು.
ಬಾಗಿದ ಬೆನ್ನಿನ, ಸೊಂಟ, ಗಂಟುನೋವಿಂದ ನರಳುವ, ಕ್ಷಣಕ್ಕೊಮ್ಮೆ ಸುರೆ ಕುಡಿಯೋ ಸೀನಿಂಗಿ ಕತೆ ಹೇಳುತ್ತಾ ಹೇಳುತ್ತಾ ಹದಿನಾರರ ಮುಗುದೆಯಾಗುತ್ತಾಳೆ. ಸಿಂಗಾರಿಯಾಗುತ್ತಾಳೆ, ಹೊಟ್ಟೆ ಮುಂದೆ ಮಾಡಿ ನಡೆಯುವ ಆಸೆಬುರುಕ ಗೌಡನಾಗುತ್ತಾಳೆ, ಮೂಛೆìರೋಗಗ್ರಸ್ಥ ದೇಸಾಯಿಯಾಗುತ್ತಾಳೆ, ಬೊಚ್ಚುಬಾಯಿಯ ಮೊಮ್ಮಗುವಿಗಾಗಿ ಕಾತರಿಸುವ ಗೌಡನ ತಾಯಿಯಾಗುತ್ತಾಳೆ. ಆ ಮೂಲಕ ಲಕ್ಷ್ಮೀ ಚಂದ್ರಶೇಖರ್ ಪ್ರತೀ ಪಾತ್ರಕ್ಕೂ ಜೀವ ಕೊಟ್ಟು ಪ್ರೇಕ್ಷಕ ಕುಳಿತಲ್ಲಿಂದ ಅಲ್ಲಾಡದಂತೆ ಮಾಡುತ್ತಾರೆ.
ಆಸೆ ಬುರುಕ ಗೌಡನ ಬಂಗಾರದಂಥ ಮಗಳು ಸಿಂಗಾರಿ. ಹೂವಿನಂಥ ಹುಡುಗಿ. ಕೆಲಸದ ಹುಡುಗ ಮರಿಯನಿಗೆ ತಂದೆ ಹೊಡೆಯುತ್ತಿದ್ದರೆ ಅವನನ್ನು ತಬ್ಬಿ ಪೆಟ್ಟಿಗೆ ಬೆನ್ನೊಡ್ಡಿದ ಹುಡುಗಿ. ತಂದೆ ಹೆಣದ ಜೊತೆ ಮದುವೆ ಮಾಡಿಸಿದಾಗ ಅವಳದು ಅರಣ್ಯರೋದನ, ನಂತರ ಹೆಣ್ಣಿನ ತೊಡೆ ನೋಡಿ ಮೂಛೆì ಹೋಗುವ ದೇಸಾಯಿಯ ಇನ್ನೊಮ್ಮೆ ಮದುವೆ. ಅವನ ಜೊತೆ ಭೂಮಿ ಸಹನೆಯಿಂದ ಬದುಕಿದ ಹೆಣ್ಣು, ಕೊನೆಯಲ್ಲಿ ಸಹನೆ ಕಳೆದುಕೊಂಡ ಭೂಮಿಯಂತೆ ಜ್ವಾಲಾಮುಖೀ ಉಗುಳಿದವಳು. ಮರಿಯನಂಥ ಮರಿಯನನ್ನೇ ಮನುಷ್ಯನನ್ನಾಗಿಸಿದ್ದು ಅವಳ ಮಾನವೀಯತೆ. ಇಂತಿಪ್ಪ ಹೆಣ್ಣಿನ ಬದುಕಿಗೆ ಕಿಂಡಿಗಳನ್ನು ಕೊರೆದು ಒಳಹೊಗ್ಗು ಬಂದವಳು ಶೀನಿಂಗಿ.
ಪ್ರತಿಯೊಂದು ಪಾತ್ರದ ವ್ಯಕ್ತಿತ್ವಕ್ಕೆ ಹೊಂದುವಂಥ ಮ್ಯಾನರಿಸಂ ಸೃಷ್ಟಿಸಿ ಆ ಮೂಲಕ ಪಾತ್ರವನ್ನು ಪ್ರೇಕ್ಷಕರಿಗೆ ದಾಟಿಸುತ್ತಾರೆ ಲಕ್ಷ್ಮಿ. ಅದರಲ್ಲೂ ಆಸೆಬುರುಕ ಗೌಡ, ದೇಸಾಯಿ ಪಾತ್ರಗಳನ್ನು ನಿರ್ವಹಿಸಿದ ರೀತಿ ಅದ್ಭುತ. ಮಾತು ಹೊರಡುವುದಕ್ಕೂ ಮೊದಲೇ ದೇಸಾಯಿಯ ಚಹರೆ, ಸೂಕ್ಷ್ಮ ಚಲನೆಯಲ್ಲೇ ಆತನ ಸ್ವಭಾವ ಪ್ರೇಕ್ಷಕನ ಮನಸ್ಸಿಗೆ ನಾಟಿರುತ್ತದೆ. ಮುಂದೆ ಸಂಭಾಷಣೆಯಲ್ಲಂತೂ ಆ ಪಾತ್ರ ಪೌರುಷವಿಲ್ಲದ ಕಚ್ಚೆಹರುಕ, ನಪುಂಸಕ, ಮುಖೇಡಿ ದೇಸಾಯಿ ಕಾದಂಬರಿಯಷ್ಟೇ ತೀವ್ರವಾಗಿ ದಕ್ಕುತ್ತಾನೆ. ಕಾಲೆಳೆದುಕೊಂಡು ಹೊಟ್ಟೆ ಮುಂದೆ ಮಾಡಿ ನಡೆಯೋ ಗೌಡ, ಬೊಚ್ಚು ಬಾಯಿಯ ಮುದುಕಿ, ಹೂದನಿಯ ಸಿಂಗಾರೆವ್ವ, ಮರಿಯನ ಪಾತ್ರಗಳೂ ಹೀಗೇ ಜೀವ ಪಡೆಯುತ್ತವೆ.
ಅಬ್ಬರ, ಗದ್ದಲವಿಲ್ಲದೇ ತಣ್ಣನೆಯ ದನಿಯಲ್ಲೇ ಎಲ್ಲವನ್ನೂ ಹೇಳುವುದು ಲಕ್ಷ್ಮೀ ಚಂದ್ರಶೇಖರ್ ಅಭಿನಯದ ದೊಡ್ಡ ಪ್ಲಸ್ ಪಾಯಿಂಟ್. ಹಾರಿ ಕುಣಿದು, ಅತ್ತು ಕರೆದು, ನಗಿಸಿ, ಘರ್ಜಿಸಿ ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕ ಕುರ್ಚಿ ತುದಿಯಲ್ಲಿ ಕೂರುವಂತೆ ಮಾಡುತ್ತಾರೆ. ಸೌಮ್ಯಾ ವರ್ಮಾ ಅವರ ನಿರ್ದೇಶನದ ಜೊತೆಗೆ ರಂಗ ಸಜ್ಜಿಕೆ, ಸಂಗೀತ, ಬೆಳಕಿನ ವಿನ್ಯಾಸವೂ ಉತ್ತಮವಾಗಿದೆ. ರಂಗಾಸಕ್ತರು ನೋಡಲೇ ಬೇಕಾದ ಪ್ರಯೋಗವಿದು.
ಪ್ರಿಯಾ ಕೆರ್ವಾಶೆ